ತುರುವೇಕೆರೆ: ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಯಡಿಯೂರಪ್ಪ ಬದ್ಧರಾಗಿದ್ದು, ಈಗಾಗಲೂ ತಾಲೂಕಿನ ಅಭಿವೃದ್ಧಿಗೆ 230 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸೂಕ್ತ ಚರಂಡಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಲಿವೆ ಎಂದು ಶಾಸಕ ಮಸಾಲ ಜಯರಾಮ್ ಭರವಸೆ ನೀಡಿದರು.
ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುನಿಯೂರು-ಕಲ್ಲೂರು ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಮಸಾಲಾ ಜಯರಾಮ್, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಭೂಮಿ ಪೂಜೆ ನೆರವೇರಿಸಿ, ತಾಲೂಕಿನ ಜನರ ಬಹುವರ್ಷಗಳ ಕನಸಿನ ಕಾಮಗಾರಿಗೆ ಚಾಲನೆ ನೀಡಿದರು. ಈ ಮೂಲಕ ತಾಲೂಕಿನ ಮುನಿಯೂರು ಗ್ರಾಮದಲ್ಲಿ ಮುನಿಯೂರು ಗೇಟ್‌ನಿಂದ ಶ್ರೀರಾಂಪುರದವರೆಗೆ 2.50 ಕೋಟಿ ರೂ. ವೆಚ್ಚದ 5 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಿತು.
ಮೂಲಸೌಕರ್ಯ ಅಭಿವೃದ್ಧಿಗೆ ಸಂಕಲ್ಪ: ಸರ್ಕಾರ, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ತಾಲೂಕಿನ ಎಲ್ಲ ಹಳ್ಳಿಗಳ ರಸ್ತೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧೀಗೆ ಸಂಕಲ್ಪ ಮಾಡಲಾಗಿದೆ. ಗ್ರಾಮಸ್ಥರಿಗೆ ನೀಡಿದ್ದ ಭರವಸೆಯಂತೆ ಮುನಿಯನೂರು ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕಳೆದ ವರ್ಷವೇ ಚಾಲನೆ ನೀಡಬೇಕಾಗಿತ್ತು. ಆದರೆ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತಡವಾಯಿತು.
ಹಠಬಿಡದೆ ಲೋಕೋಪಯೋಗಿ ಸಚಿವರ ಬಳಿ ಹಲವು ಬಾರಿ ತೆರಳಿ, ಈ ಹಿಂದೆ ಇದ್ದ ಅನುದಾನಕ್ಕೆ ಹೆಚ್ಚುವರಿ ಅನುದಾನ ಪಡೆದು 23ರಂದೇ ಸರ್ಕಾರದ ಮಟ್ಟದಲ್ಲಿ ಕಾಮಗಾರಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಈಗಲೇ ತಡವಾಗಿದ್ದು, ಮತ್ತೂ ವಿಳಂಬವಾಗಬಾರದು ಎಂಬ ಕಾರಣಕ್ಕೆ ಚಾಲನೆ ನೀಡಿದ್ದೇನೆ. ರಸ್ತೆ ಇಕ್ಕೆಲಗಳಲ್ಲಿರುವ ಮನೆಯವರು ಸ್ವಯಂಪ್ರೇರಣೆಯಿಂದ ಜಾಗ ತೆರವು ಮಾಡಿಕೊಡಬೇಕು. 7.5 ಮೀಟರ್ ವಿಸ್ತಾರವಾದ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದರು.
ಮತ್ತಷ್ಟು ಅನುದಾನ ತರಲಿ: ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ, ಹಾಲಿ ಶಾಸಕ ಮಸಾಲೆ ಜಯರಾಮ್ ಅವರಿಗೆ ರಾಜ್ಯದಲ್ಲಿ ಅವರದೇ ಸರ್ಕಾರವಿದೆ. ಅವರಿಗೆ 3000 ಸಾವಿರ ಕೋಟಿಗೂ ಹೆಚ್ಚು ಅನುದಾನ ತರುವ ಅವಕಾಶವಿದೆ. ಹೀಗಾಗಿ ಇನ್ನು ಹೆಚ್ಚಿನ ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು. ನಂತರ ಇದೇ ರಸ್ತೆ ಮಾರ್ಗವಾದ ಕೊಂಡಜ್ಜಿ ಕ್ರಾಸ್‌ನಿಂದ ಚಿಕ್ಕಗೊರಾಘಟ್ಟ ಮಾರ್ಗವಾಗಿ ವರಹಾಸಂದ್ರದವರೆಗೆ 63 ಲಕ್ಷ ವೆಚ್ಚದಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಮಸಾಲೆ ಜಯರಾಮ್ ಚಾಲನೆ ನೀಡಿದರು.
ತುಮುಲ್ ಅಧ್ಯಕ್ಷ ಮಹಾಲಿಂಗಪ್ಪ, ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಮಯ್ಯ, ಎಇಇ ಗುರುಸಿದ್ದಪ್ಪ, ಸಹಾಯಕ ಎಂಜಿನಿಯರ್ ಕಣ್ಮಣಿ, ಮುಖಂಡರಾದ ದುಂಡಾರೇಣುಕಪ್ಪ, ಕೊಂಡಜ್ಜಿ ವಿಶ್ವನಾಥ್, ಮುದ್ದೇಗೌಡ, ಡಿ.ಆರ್.ಬಸವರಾಜ್, ದೊಂಬರನಹಳ್ಳಿ ಪ್ರಸಾದ್, ವಿ.ಬಿ.ಸುರೇಶ್, ಕಾಳಂಜೀಹಳ್ಳಿ ಸೋಮಣ್ಣ , ಪಪಂ ಸದಸ್ಯ ಅಂಜನ್ ಕುಮಾರ್, ನಾಗಲಾಪುರ ಮಂಜಣ್ಣ, ಮೈನ್ಸ್‌ರಾಜಣ್ಣ, ಕೀರ್ತಿ, ಪಂಚಾಯತ್ ಕಾವಲು ಸಮಿತಿಯ ವೆಂಕಟೇಶ್, ಗುತ್ತಿಗೆದಾರರುಗಳಾದ ರಾಮಲಿಂಗಯ್ಯ, ಕೊಡಗಿಹಳ್ಳಿ ಸಿದ್ದಲಿಂಗಣ್ಣ ಇದ್ದರು.