ಭುವನೇಶ್ವರ(ಮಲ್ಕಾನ್ ಗಿರಿ):ವಿಮಾನದ ಪೈಲಟ್ ಆಗಬೇಕೆಂಬ ಕನಸನ್ನು ಕೊನೆಗೂ ಒಡಿಶಾದ ಬುಡಕಟ್ಟು ಯುವತಿ ನನಸಾಗಿಸಿಕೊಂಡಿದ್ದಾಳೆ. ಇದರೊಂದಿಗೆ ಮಾವೋವಾದಿ ಬಾಹುಳ್ಯದ ಮಲ್ಕಾನ್ ಗಿರಿ ಜಿಲ್ಲೆಯ ಕುಗ್ರಾಮದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಧ್ಯದಲ್ಲಿಯೇ ಬಿಟ್ಟು, 2012ರಲ್ಲಿ ಏವಿಯೇಷನ್ ಅಕಾಡೆಮಿಗೆ ಅನುಪ್ರಿಯಾ ಲಾರ್ಕಾ ಸೇರಿಕೊಂಡಿದ್ದರು. ಏಳು ವರ್ಷಗಳ ಬಳಿಕ 23ರ ಹರೆಯದ ಅನುಪ್ರಿಯಾ ಅವರ ಪೈಲಟ್ ಆಗಬೇಕೆಂಬ ಕನಸು ನನಸಾಗಿದೆ.
ಒಡಿಶಾದ ಬುಡಕಟ್ಟು ಬಾಹುಳ್ಯದ ಜಿಲ್ಲೆಯ ನಿವಾಸಿಯಾಗಿರುವ ಅನುಪ್ರಿಯಾ ಈಗ ಖಾಸಗಿ ವಿಮಾನದಲ್ಲಿ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊತ್ತಿದ್ದಾರೆ.
ಪೈಲಟ್ ಆಗಬೇಕೆಂಬ ಕನಸನ್ನು ನನಸಾಗಿಸಿಕೊಂಡ ಲಾರ್ಕಾ ಅವರನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಭಿನಂದಿಸಿದ್ದಾರೆ. ಅಲ್ಲದೇ ಅನುಪ್ರಿಯಾ ಇತರರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಒಡಿಶಾ ಪೊಲೀಸ್ ಹವಾಲ್ದಾರ್ ಮಾರಿನಿಯಾಸ್ ಲಾರ್ಕಾ ಹಾಗೂ ಜಾಮಾಜ್ ಯಾಸ್ಮಿನ್ ಲಾರ್ಕಾ ದಂಪತಿ ಪುತ್ರಿ ಅನುಪ್ರಿಯಾ ಲಾರ್ಕಾ. ಮಲ್ಕಾನ್ ಗಿರಿ ಕಾನ್ವೆಂಟ್ ನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಅನು, ಸೆಮಿಲಿಗುಡಾದಲ್ಲಿ ಪಿಯುಸಿ ಶಿಕ್ಷಣ ಪಡೆದಿರುವುದಾಗಿ ವರದಿ ತಿಳಿಸಿದೆ.