Advertisement

ಬೀದರನ ಮಾರ್ಕೆಟ್‌ ಠಾಣೆಗೆ 22ನೇ ರ್‍ಯಾಂಕ್‌

04:17 PM Jan 21, 2021 | Team Udayavani |

ಬೀದರ: ಕಾನೂನು ಸುವ್ಯವಸ್ಥೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿರುವ ದೇಶದ ಪೊಲೀಸ್‌ ಠಾಣೆಯಲ್ಲಿ 22ನೇ ಸ್ಥಾನ ಪಡೆಯುವ ಮೂಲಕ ಪ್ರವಾಸಿ ನಗರಿ ಬೀದರನ ಮಾರ್ಕೆಟ್‌ ಪೊಲೀಸ್‌ ಠಾಣೆ ಗಮನಾರ್ಹ ಸಾಧನೆ ಮಾಡಿದೆ. ಅಪರಾಧ ಪ್ರಕರಣಗಳ ಅತ್ಯುತ್ತಮ ನಿರ್ವಹಣೆ ಸೇರಿದಂತೆ ತನ್ನ ಅಸಾಧಾರಣ ಕಾರ್ಯ ಚಟುವಟಿಕೆಗಳಿಂದಾಗಿ ರ್‍ಯಾಂಕ್‌ ಪಟ್ಟ ಗಿಟ್ಟಿಸಿಕೊಂಡು ಗಮನ ಸೆಳೆದಿದೆ.

Advertisement

ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಅಖಿಲ ಭಾರತ ಪೊಲೀಸ್‌ ಠಾಣೆಗಳ ರ್‍ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬೀದರನ ಮಾರ್ಕೆಟ್‌ ಠಾಣೆಯು 22ನೇ ಸ್ಥಾನ ಪಡೆದಿದೆ. ಠಾಣೆಯಲ್ಲಿ ಸಿಬ್ಬಂದಿಯ ಲಭ್ಯತೆ, ಅಪರಾಧ ತಡೆಗಟ್ಟುವಿಕೆ ಹಾಗೂ ಅಪರಾಧ ಪ್ರಕರಣಗಳ ತ್ವರಿತ ಇತ್ಯರ್ಥ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ, ಮೂಲ ಸೌಕರ್ಯ ಮತ್ತು ನಾಗರಿಕರ ಪ್ರತಿಕ್ರಿಯೆ, ಹಳೆಯ ಪ್ರಕರಣಗಳ ತನಿಖೆ, ದುರ್ಬಲ ವರ್ಗಗಳ ವಿರುದ್ಧದ ಅಪರಾಧ, ಕಾಣೆಯಾದವರ ಪತ್ತೆ, ಸಾರ್ವಜನಿಕ ಆಸ್ತಿ ಪತ್ತೆ, ಹಿಂತಿರುಗಿಸುವಿಕೆ ಸೇರಿದಂತೆ ಒಟ್ಟು 19 ವಿಷಯಗಳಡಿ ಕಳೆದ ನವೆಂಬರ್‌ನಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ರಾಯಚೂರು ಜಿಲ್ಲೆಯ ಯರಗೇರಾ ಠಾಣೆ 53ನೇ ಮತ್ತು ದಾವಣಗೆರೆಯ ಮಹಿಳಾ ಠಾಣೆ 67ನೇ ಸ್ಥಾನ ಪಡೆದಿದೆ.

ಬೀದರನ ಓಲ್ಡ್‌ ಸಿಟಿಯಲ್ಲಿರುವ ಮಾರ್ಕೆಟ್‌ ಠಾಣೆಯಲ್ಲಿ ಒಟ್ಟು 49 ಪೊಲೀಸ್‌ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಲಾಕ್‌ ಡೌನ್‌ ಸಮಯದಲ್ಲಿ ಕಂಟೇನ್ಮೆಂಟ್‌ ಝೊನ್‌ ಹಾಗೂ ಗಡಿ ಚೆಕ್‌ಪೋಸ್ಟ್‌ ಗಳಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಸುವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲಸದ ಒತ್ತಡದ ನಡುವೆಯೂ ಠಾಣಾ ಸಿಬ್ಬಂದಿಗಳು ಸಚಿವಾಲಯದ ಮಾನದಂಡಗಳ ಅನ್ವಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಠಾಣೆಗೆ ಈ ಗೌರವ ಸಂದಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ತಂಡ ಖುದ್ದು ಬಂದು ಸಮೀಕ್ಷೆ ಮಾಡಿಕೊಂಡಿದ್ದರು. ಠಾಣೆಯಲ್ಲಿನ ಶಿಸ್ತು, ಸಿಬ್ಬಂದಿಗಳ ಕಾರ್ಯ ವೈಖರಿ ಗಮನಿಸಿ ಜನರ ಅಭಿಪ್ರಾಯಗಳನ್ನು ಪಡೆದಿದ್ದರು. ಒತ್ತಡದ ನಡುವೆಯೂ ನಾವು ನಿರ್ವಹಿಸಿದ್ದ ಕೆಲಸವನ್ನು ಸರ್ಕಾರ ಗುರುತಿಸಿದೆ. ನಮ್ಮ ಠಾಣೆಗೆ 22ನೇ ರ್‍ಯಾಂಕ್‌ ನೀಡಿರುವುದು ಸಂಸತ ತಂದಿದೆ. ಇದಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರೋತ್ಸಾಹವೇ ಕಾರಣವಾಗಿದ್ದು, ಇನ್ನಷ್ಟು  ಜವಾಬ್ದಾರಿಯೊಂದಿಗೆ ಜನ ಸೇವೆ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ ಎನ್ನುತ್ತಾರೆ ಮಾರ್ಕೆಟ್‌ ಠಾಣೆಯ ಪಿಎಸ್‌ಐ ಸಂಗೀತಾ ಎಸ್‌.

ರಾಷ್ಟ್ರ ಮಟ್ಟದಲ್ಲಿ ಉತ್ತಮ ಪೊಲೀಸ್‌ ಠಾಣೆ ಎಂದು ಬೀದರನ ಮಾರ್ಕೆಟ್‌ ಪೊಲೀಸ್‌ ಠಾಣೆ ಗುರುತಿಸಿಕೊಂಡಿದ್ದು, ಇದಕ್ಕೆ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿಯ ಪರಿಶ್ರಮದ ಫಲವೇ ಕಾರಣ. ಈ ಬಗ್ಗೆ ಅಧಿಕೃತ ವರದಿ ಇನ್ನೂ ಬರಬೇಕಿದೆ. ಸಮಾಜದಲ್ಲಿ ಶಾಂತಿ ಸ್ಥಾಪನೆ, ಪೊಲೀಸ್‌ ಸೇವೆಯನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ.
ನಾಗೇಶ ಡಿ.ಎಲ್‌, ಎಸ್‌ಪಿ. ಬೀದರ

Advertisement
Advertisement

Udayavani is now on Telegram. Click here to join our channel and stay updated with the latest news.

Next