Advertisement

ನಗರದ 116 ಕಡೆ 222 ವೈಜ್ಞಾನಿಕ ಹಂಪ್‌ ಅಳವಡಿಕೆ

11:00 PM Nov 02, 2020 | mahesh |

ಮಹಾನಗರ: ಮಂಗಳೂರು ನಗರ ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಸಂಚಾರ ಸುವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ದಿಂದ ನಗರದ 116 ಕಡೆಗಳಲ್ಲಿ 222 ವೈಜ್ಞಾನಿಕ ರಸ್ತೆ ಹಂಪ್ಸ್‌ ಅಳವಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯ ಸಂಚಾರ ಪಶ್ಚಿಮ ಪೊಲೀಸ್‌ ಠಾಣೆ, ಪಾಂಡೇಶ್ವರ ಮತ್ತು ಸಂಚಾರ ಪೂರ್ವ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 36.15 ಲಕ್ಷ ರೂ. ವೆಚ್ಚದಲ್ಲಿ ಹಂಪ್ಸ್‌ ಅಳವಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಅದರಂತೆ ರಸ್ತೆ ಹಂಪ್ಸ್‌, ಸೂಚನ ಫಲಕ, ಲೈನ್‌ ಪಿಟ್ಟಿಂಗ್‌, ಬ್ಲಿಂಕರ್‌ ಕೂಡ ಅಳವಡಿಸಲಾಗುತ್ತದೆ.

ನಗರದಲ್ಲಿ ಈಗಾಗಲೇ ಅಳವಡಿಸಿದ ಹೆಚ್ಚಿನ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಈ ಹಿಂದೆಯೇ ಪಾಲಿಕೆಗೆ ದೂರು ನೀಡಿದ್ದರು. ಅವೈಜ್ಞಾ ನಿಕ ರಸ್ತೆ ಉಬ್ಬುಗಳು ಅಪಘಾತಕ್ಕೆ ಕಾರಣವಾಗುತ್ತಿತ್ತು. ಅದರಲ್ಲೂ ದ್ವಿಚಕ್ರ ವಾಹನ ಸವಾರಿ ತ್ರಾಸದಾಯವಾಗುತ್ತಿತ್ತು. ಡಾಮರು ರಸ್ತೆಯುಬ್ಬುಗಳ ಬದಲಾಗಿ ನಗರದ ವಿವಿಧೆಡೆ ಹಾಕಿರುವ ರಬ್ಬರ್‌ನಿಂದ ಮಾಡಿರುವ ರಸ್ತೆಯುಬ್ಬು ಅಲ್ಲಲ್ಲಿ ಎದ್ದು ಹೋಗಿದ್ದು, ಇದಕ್ಕೆ ಬಳಸಲಾಗಿರುವ ಬೋಲ್ಟ್‌ಗಳು ಮಾತ್ರ ರಸ್ತೆಗಳಲ್ಲಿ ಉಳಿದು ಕೊಂಡಿತ್ತು. ಇದೀಗ ಆ ರೀತಿಯ ಬಹುತೇಕ ರಬ್ಬರ್‌ ಹಂಪ್ಸ್‌ಗಳನ್ನು ತೆರವು ಮಾಡಲಾಗಿದೆ.

ನಿಯಮಾವಳಿ
ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಪ್ರಕಾರ ವಸತಿ ಪ್ರದೇಶಗಳಲ್ಲಿ ರಸ್ತೆ ಹಂಪ್‌ಗ್ಳ ಎತ್ತರ 3ರಿಂದ 3.5 ಇಂಚ್‌ ಇರಬೇಕು. 12ರಿಂದ 14 ಅಡಿ ಉದ್ದ ಇರಬೇಕು. ಅದೇ ರೀತಿ ಖಾಸಗಿ ರಸ್ತೆ, ಪಾರ್ಕಿಂಗ್‌ ಜಾಗಗಳಲ್ಲಿ 3ರಿಂದ 6 ಇಂಚ್‌ ಎತ್ತರ ಇರಬೇಕು. 76ರಿಂದ 152 ಮಿ.ಮೀ. ಉದ್ದ ಇರಬೇಕು ಎಂದಿದೆ. ಸದ್ಯ ನಗರದಲ್ಲಿರುವ ಹೆಚ್ಚಿನ ರಸ್ತೆ ಉಬ್ಬುಗಳು ಈ ನಿಯಮದಂತೆ ಇಲ್ಲ. ಆದರೆ ನೂತನವಾಗಿ ನಿರ್ಮಿಸಲಿರುವ ವೈಜ್ಞಾನಿಕ ರಸ್ತೆ ಉಬ್ಬುಗಳು ಐಆರ್‌ಸಿ ಮಾನದಂಡದಂತೆ ನಿರ್ಮಾಣವಾಗಲಿದೆ.

ವೈಜ್ಞಾನಿಕ ಹಂಪ್‌
ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ನಗರದಲ್ಲಿ ವೈಜ್ಞಾನಿಕ ರಸ್ತೆ ಹಂಪ್ಸ್‌ ನಿರ್ಮಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಮನಪಾದಿಂದ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ವಾರ್ಡ್‌ಗೆ ಸಂಬಂಪಟ್ಟಂತೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಕಾಮಗಾರಿ ಕೂಡ ಆರಂಭವಾಗಲಿದೆ.
-ಡಾ| ಜಿ. ಸಂತೋಷ್‌ ಕುಮಾರ್‌, ಮನಪಾ ಉಪ ಆಯುಕ್ತರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next