ಚಿಕ್ಕಬಳ್ಳಾಪುರ: ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಆಂಗ್ಲ ಪರೀಕ್ಷೆ ಜಿಲ್ಲಾದ್ಯಂತ ಗುರುವಾರ ನಡೆಯಲಿದ್ದು, ಒಟ್ಟು 22 ಕೇಂದ್ರಗಳಲ್ಲಿ 12,215 ವಿದ್ಯಾರ್ಥಿಗಳು ಪರೀಕ್ಷೆ ಬರೆಯಯಲಿದ್ದಾರೆ.
ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದಾಗ ಪರೀಕ್ಷೆ ನಡೆಸದೇ ಮುಂದೂಡಿದ್ದ ಸರ್ಕಾರ ಪ್ರಕರಣಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಆಂಗ್ಲ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿ ಪೋಷಕರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ತಡೆಗೆ ಹಲವು ದಿಟ್ಟ ಕ್ರಮಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿದೆ.
ಮೂರು ದಿನ ಮುಂಚೆ ಸ್ಯಾನಿಟೈಸ್: ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಮೂರು ದಿನ ಮುಂಚಿತವಾಗಿ ಸ್ಯಾನಿಟೈಸ್ ಮಾಡಲಾಗಿದ್ದು, ಕೇಂದ್ರಗಳ ಮುಖ್ಯ ಅಧೀಕ್ಷಕರು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸುವಂತೆ ಸೂಚಿಸಲಾಗಿದೆ.
ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ 8-30 ರೊಳಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ 4 ಮಂದಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಕಡ್ಡಾ ಯವಾಗಿ ಮಾಸ್ಕ್ ಧರಿಸಿರಬೇಕೆಂದು ಸೂಚಿಸಲಾಗಿದೆ.
144 ಸೆಕ್ಷನ್ ಜಾರಿ: ಪರೀಕ್ಷಾ ಕೇಂದ್ರದ 200 ಮೀ. ಸುತ್ತಲೂ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಕೇಂದ್ರಗಳ ಸುತ್ತಲೂ ಇರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ದಿನ ಮುಚ್ಚಿಸುವಂತೆ ಆದೇಶಿಸಲಾಗಿದೆ.
ಪ.ಪೂ.ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ 200 ಕೆಎಸ್‌ಆರ್ ಟಿಸಿ ಬಸ್‌ಗಳನ್ನು ಪಿಯುಸಿ ಆಂಗ್ಲ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳನ್ನು ಕರೆ ತರಲು ನಿಯೋಜಿಸಲಾಗಿದೆ. ಪರೀಕ್ಷೆಗೆ ಹೋಗಿ ಬರಲು ವಿದ್ಯಾರ್ಥಿಗಳು ಹಳೆಯ ಸ್ಮಾರ್ಟ್ ಪಾಸ್ ಅಥವಾ ಪ್ರವೇಶ ಪತ್ರ ತೋರಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು.
-ವಿ.ಬಸವರಾಜ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ
* ಕಾಗತಿ ನಾಗರಾಜಪ್ಪ