Advertisement

ಆ್ಯಪ್ ಮೂಲಕ ಸಾಲ ನೀಡಿ ಸುಲಿಗೆ ದಂಧೆ ಹಿಂದೆ ಚೀನಾ ಸಂಚು: 22 ಮಂದಿ ಬಂಧನ

11:46 AM Aug 21, 2022 | Team Udayavani |

ನವದೆಹಲಿ: ಎರಡು ತಿಂಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸರು 500 ಕೋಟಿ ರೂ. ಗೂ ಅಧಿಕ ಮೊತ್ತದ ತ್ವರಿತ ಸಾಲ ಮತ್ತು ಸುಲಿಗೆ ದಂಧೆಯನ್ನು ಭೇದಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ 22 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

Advertisement

ಈ ಗ್ಯಾಂಗ್ ಚೀನಾದ ಪ್ರಜೆಗಳ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿತ್ತು ಮತ್ತು ಸುಲಿಗೆ ಮಾಡಿದ ಹಣವನ್ನು ಆ ದೇಶಕ್ಕೆ ಹವಾಲಾ ಮತ್ತು ಕ್ರಿಪ್ಟೋಕರೆನ್ಸಿಗಳ ಮೂಲಕ ರವಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿರುವ ಬಗ್ಗೆ ನೂರಾರು ದೂರುಗಳು ಬಂದಿದ್ದು, ಬಡ್ಡಿ ಸಮೇತ ಹಣ ಸಂಪೂರ್ಣ ವಸೂಲಿ ಮಾಡಿದ ಬಳಿಕ ಗ್ಯಾಂಗ್ ಮಾರ್ಫ್ ಮಾಡಿದ ನಗ್ನ ಚಿತ್ರಗಳನ್ನು ಹಾಕಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ದೂರುಗಳನ್ನು ಬೆನ್ನಟ್ಟಿ ಹೋದ ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (IFSO) ಸುಮಾರು 100 ಕ್ಕೂ ಹೆಚ್ಚು ಆ್ಯಪ್ ಗಳು ಈ ದಂಧೆಯಲ್ಲಿ ತೊಡಗಿವೆ ಎಂದು ಪತ್ತೆ ಮಾಡಿದೆ.

ಈ ಅಪ್ಲಿಕೇಶನ್‌ ಗಳು ಬಳಕೆದಾರರ ಕಾಂಟಾಕ್ಟ್ ಗಳು, ಚಾಟ್‌ಗಳು, ಸಂದೇಶಗಳು ಮತ್ತು ಚಿತ್ರಗಳಿಗೆ ಪ್ರವೇಶ ಪಡೆದ ನಂತರ, ಗ್ಯಾಂಗ್ ಚೀನಾ ಮತ್ತು ಹಾಂಗ್ ಕಾಂಗ್ ಮೂಲದ ಸರ್ವರ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಅಂದ್ರಗಿನಾ ಇನ್ನೊಂದ್‌ಕಿತಾ ಸಿದ್ರಾಮಣ್ಣೋರೂ ಗುಡಾ ಸಿಎಮ್‌ ಆಗ್ಲೀ…

ಸಣ್ಣ ಮೊತ್ತದ ಸಾಲವನ್ನು ಒದಗಿಸುವ ರೀತಿಯಲ್ಲಿ ಈ ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬಳಕೆದಾರರು ಅಂತಹ ಅಪ್ಲಿಕೇಶನ್‌ ಗಳನ್ನು ಡೌನ್‌ಲೋಡ್ ಮಾಡಿ ಸಾಲ ಪಡೆಯುವ ತರಾತುರಿಯ್ಲಿ ಅಪ್ಲಿಕೇಶನ್‌ ಕೇಳುವ ನಿಯಮಗಳಿಗೆ ಅನುಮತಿ ನೀಡುತ್ತಾರೆ. ಸಾಲದ ಹಣ ಕೆಲವೇ ನಿಮಿಷಗಳಲ್ಲಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಬಳಿಕ ಬಳಕೆದಾರರಿಗೆ ಹಣ ಮರು ಪಾವತಿ ಮಾಡುವಂತೆ ಹಲವು ಸಂಖ್ಯೆಗಳಿಂದ ಕರೆಗಳನ್ನು ಮಾಡುತ್ತಾರೆ. ಅವರು ಬೇಡಿಕೆಗೆ ಗಮನ ಕೊಡಲು ವಿಫಲವಾದರೆ ಬಳಕೆದಾರರ ಮಾರ್ಫ್ ಮಾಡಿದ ನಗ್ನ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ಬೆದರಿಸಿ ಹಣ ಸುಲಿಗೆ ಮಾಡುತ್ತಾರೆ ಎಂದು ಉಪ ಪೊಲೀಸ್ ಆಯುಕ್ತ (ಐಎಫ್‌ಎಸ್‌ಒ) ಕೆ.ಪಿ.ಎಸ್. ಮಲ್ಹೋತ್ರಾ ಹೇಳಿದರು.

ಸಾಮಾಜಿಕ ಕಳಂಕಕ್ಕೆ ಬೆದರಿ ಬಳಕೆದಾರರು ಹಣವನ್ನು ಪಾವತಿಸುತ್ತಾರೆ. ಈ ಹಣವನ್ನು ಹವಾಲಾ ಮೂಲಕ ಅಥವಾ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಿದ ನಂತರ ಚೀನಾಕ್ಕೆ ಕಳುಹಿಸಲಾಗಿದೆ ಎಂದು ಡಿಸಿಪಿ ಹೇಳಿದರು.

ಈ ಗ್ಯಾಂಗ್ ಅನೇಕ ಖಾತೆಗಳನ್ನು ಹೊಂದಿದ್ದು, ಪ್ರತಿ ಖಾತೆಗೆ ದಿನಕ್ಕೆ ಒಂದು ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಡುತ್ತಿತ್ತು. ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಈ ಜಾಲ ಹರಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ 22 ಜನರನ್ನು ದೇಶದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next