Advertisement

ತಾಯ್ನೆಲ ಸ್ಪರ್ಶದ ಹರ್ಷ; ರೊಮೇನಿಯಾ ಮೂಲಕ ಬಂದ 219 ವಿದ್ಯಾರ್ಥಿಗಳು

12:16 AM Feb 27, 2022 | Team Udayavani |

ಹೊಸದಿಲ್ಲಿ/ಮುಂಬಯಿ: ಯುದ್ಧ ಪೀಡಿತ ಉಕ್ರೇನ್‌ನಿಂದ ರೊಮೇನಿಯಾ ರಾಜಧಾನಿ ಬುಕಾರೆಸ್ಟ್‌ ಮೂಲಕ ಏರ್‌ ಇಂಡಿಯಾದ ಮೊದಲ ವಿಮಾನ ಮುಂಬಯಿಗೆ ಬಂದಿಳಿದೆ. ಒಟ್ಟು 219 ಮಂದಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ.

Advertisement

ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ವಿಮಾನದ ಒಳಕ್ಕೆ ಹೋಗಿ ಆತಂಕಕ್ಕೆ ಒಳಗಾಗಿರುವ ವಿದ್ಯಾರ್ಥಿಗಳ ಜತೆಗೆ ಆತ್ಮೀಯವಾಗಿ ಮಾತನಾಡಿ, ಧೈರ್ಯ ತುಂಬಿದರು. ಇದರ ಜತೆಗೆ ಅವರು ಟ್ವೀಟ್‌ ಮಾಡಿದ್ದಾರೆ ಮತ್ತು ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಭಾರತೀ ಯರನ್ನು ಪಾರು ಮಾಡಿ, ಕರೆತರುವ ಒಟ್ಟಾರೆ ಪ್ರಕ್ರಿಯೆಯ ಉಸ್ತುವಾರಿಯನ್ನು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರೇ ವಹಿಸಿಕೊಂಡಿದ್ದಾರೆ. ಮೊದಲ ತಂಡ ಸುಲಲಿತ ವಾಗಿ ಸ್ವದೇಶಕ್ಕೆ ವಾಪಸಾಗಿರುವುದಕ್ಕೆ ವಿದೇಶಾಂಗ ಸಚಿವರು ಮೆಚ್ಚುಗೆ ಮತ್ತು ತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ.

ಬುಕಾರೆಸ್ಟ್‌ನಿಂದ ಶನಿವಾರ ಭಾರತೀಯ ಕಾಲಮಾನ ಮಧ್ಯಾಹ್ನ 1.55ಕ್ಕೆ ಟೇಕಾಫ್ ಆಯಿತು. ಎರಡನೇ ವಿಮಾನ ಬುಕಾರೆಸ್ಟ್‌ನಿಂದ ಮತ್ತು ಮೂರನೇ ವಿಮಾನ ಬುಡಾಫೆಸ್ಟ್‌ನಿಂದ ರವಿವಾರ ಬೆಳಗ್ಗೆ ಹೊಸದಿಲ್ಲಿಗೆ ಆಗಮಿಸುವ ಸಾಧ್ಯತೆಗಳಿವೆ. ಯುದ್ಧಪೀಡಿತ ರಾಷ್ಟ್ರದಲ್ಲಿ ಕರ್ನಾಟಕದ 342 ಮಂದಿ ಸೇರಿದಂತೆ 20 ಸಾವಿರ ವಿದ್ಯಾರ್ಥಿಗಳಿದ್ದಾರೆ.

ನಮ್ಮ ಗಮನಕ್ಕೆ ತನ್ನಿ: ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ರಷ್ಯಾ ಸೇನಾಪಡೆಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಹೀಗಾಗಿ ಕೀವ್‌ ಮತ್ತು ಇತರ ನಗರಗಳಲ್ಲಿ ಇರುವ ಭಾರತೀಯರು ಉಕ್ರೇನ್‌ ನೆರೆಯ ರಾಷ್ಟ್ರಗಳಿಗೆ ಪ್ರಯಾಣ ಮಾಡುವ ಮುನ್ನ ರಾಯಭಾರ ಕಚೇರಿಗೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ. ವಿಶೇಷವಾಗಿ ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ವಿದ್ಯಾರ್ಥಿಗಳು ಸದ್ಯ ತಾವು ಇರುವ ಸ್ಥಳದಲ್ಲಿಯೇ ಇರಬೇಕು. ಮನೆಯ ಒಳಗೆ ಮತ್ತು ಸುರಕ್ಷಿತ ಕಾರಣಕ್ಕಾಗಿ ಬಂಕರ್‌ಗಳನ್ನು ಅವಲಂಬಿಸಬೇಕು ಎಂದು ರಾಯಭಾರ ಕಚೇರಿ ತಿಳಿಸಿದೆ.

ಬಾಂಬ್‌ ದಾಳಿ ಹೆಚ್ಚಾಗಿದೆ: ರಾಜಧಾನಿ ಕೀವ್‌ನಲ್ಲಿ ಬಾಂಬ್‌ ದಾಳಿ ಹೆಚ್ಚಾಗಿದೆ ಎಂಬ ಅಂಶವನ್ನು ಈ ಸುತ್ತೋಲೆಯಲ್ಲಿ ಉಲ್ಲೇಖೀಸಿದ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳು ಗರಿಷ್ಠ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ. ರಾಯಭಾರ ಕಚೇರಿಯ ಸಹಭಾಗಿತ್ವ ಇಲ್ಲದೆ, ಉಕ್ರೇನ್‌ ಗಡಿ ಕೇಂದ್ರಗಳಿಗೆ ಮತ್ತು ಇತರ ಸ್ಥಳಗಳಿಗೆ ತೆರಳಲೇ ಬಾರದು ಎಂದು ರಾಯಭಾರ ಕಚೇರಿ ಸ್ಪಷ್ಟವಾಗಿ ತಿಳಿಸಿದೆ.

Advertisement

ಟಿಕೆಟ್‌ ವೆಚ್ಚ ಭರಿಸಲಿದೆ ಕೇರಳ ಸರಕಾರ: ಮುಂಬಯಿ ಮತ್ತು ಹೊಸದಿಲ್ಲಿ ವಿಮಾನ ನಿಲ್ದಾಣಗಳಿಂದ ಕೇರಳಕ್ಕೆ ಬರುವ ವಿದ್ಯಾರ್ಥಿಗಳ ವಿಮಾನ ಪ್ರಯಾಣದ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮ್ಮ ಫೇಸ್‌ಬುಕ್‌ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ. ಅನಿವಾಸಿ ಕೇರಳಿಗರ ವ್ಯವಹಾರ ಇಲಾಖೆ (ಎನ್‌ಒಆರ್‌ಕೆಎ)ಯ ಹೊಸದಿಲ್ಲಿ ಮತ್ತು ತಿರುವನಂತಪುರ ಕಚೇರಿಯ ಅಧಿಕಾರಿಗಳು ರಾಜ್ಯದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅವರು, ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳಿಗೆ ಸೂಕ್ತ ನೆರವು ನೀಡುವಂತೆ ಸೂಚನೆ ನೀಡಲಾಗಿದೆ ಎಂದೂ ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಗುಜರಾತ್‌, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುಂಬಯಿಗೆ ಮತ್ತು ಹೊಸದಿಲ್ಲಿಯಿಂದ ತಮ್ಮ ತಮ್ಮ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ವಿಶೇಷ ವ್ಯವಸ್ಥೆ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next