Advertisement

ಪ್ರಧಾನಿಯಿಂದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ

07:32 PM Feb 05, 2022 | Team Udayavani |

ಹೈದರಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 11 ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರ ಸ್ಮರಣಾರ್ಥ 216 ಅಡಿ ಎತ್ತರದ “ಸಮಾನತೆಯ ಪ್ರತಿಮೆ” ಯನ್ನು ಉದ್ಘಾಟಿಸಿದರು.

Advertisement

ಹೈದರಾಬಾದ್ ಹೊರವಲಯದಲ್ಲಿರುವ ಶಂಶಾಬಾದ್ ಬಳಿಯ ಮುಚಿಂತಲ್‌ನಲ್ಲಿರುವ 45 ಎಕರೆ ವಿಸ್ತೀರ್ಣದ ರಮಣೀಯ ಜೀಯರ್ ಇಂಟಿಗ್ರೇಟೆಡ್ ವೇದಿಕ್ ಅಕಾಡೆಮಿ (JIVA) ನಲ್ಲಿ ಭವ್ಯ ಧಾರ್ಮಿಕ ಕಾರ್ಯಕ್ರಮ ವಿಶ್ವದ ಗಮನ ಸೆಳೆಯಿತು.

ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವು ಎಂಬ ಐದು ಲೋಹಗಳ ಸಂಯೋಜನೆಯಾದ `ಪಂಚಲೋಹದಿಂದ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದು ವಿಶ್ವದ ಅತ್ಯಂತ ಎತ್ತರದ ಲೋಹದ ಪ್ರತಿಮೆಗಳಲ್ಲಿ ಒಂದಾಗಿದೆ. ಇದನ್ನು 54 ಅಡಿ ಎತ್ತರದ ಕಟ್ಟಡದ ಮೇಲೆ ಸ್ಥಾಪಿಸಲಾಗಿದ್ದು, ಇದನ್ನು `ಭದ್ರ ವೇದಿ` ಎಂದು ಹೆಸರಿಸಲಾಗಿದೆ, ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಗ್ರಂಥಗಳು, ರಂಗಮಂದಿರ, ಶ್ರೀ ರಾಮಾನುಜಾಚಾರ್ಯರ ಅನೇಕ ಕೃತಿಗಳನ್ನು ವಿವರಿಸುವ ಶೈಕ್ಷಣಿಕ ಗ್ಯಾಲರಿಗಾಗಿ ಮೀಸಲಾದ ಮಹಡಿಗಳನ್ನು ಹೊಂದಿದೆ.

ಈ ಪ್ರತಿಮೆಯನ್ನು ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನಜೀಯರ್ ಸ್ವಾಮಿಗಳು ಪರಿಕಲ್ಪನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಶ್ರೀ ರಾಮಾನುಜಾಚಾರ್ಯರ ಜೀವನ ಪಯಣ ಮತ್ತು ಬೋಧನೆಯ ಕುರಿತು 3D ಪ್ರಸ್ತುತಿ ನಕ್ಷೆಯನ್ನು ಸಹ ಪ್ರದರ್ಶಿಸಲಾಯಿತು. ಧಾರ್ಮಿಕ ವಿಧಿಗಳು, ಹೋಮ ಹವನ ಗಳಲ್ಲಿ ಪ್ರಧಾನಿ ಭಾಗಿಯಾಗಿ ಪೂರ್ಣಾಹುತಿ ನೀಡಿದರು.

ಕುಳಿತುಕೊಳ್ಳುವ ಭಂಗಿಯಲ್ಲಿ ಇದು ವಿಶ್ವದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದೆ. ಥೈಲ್ಯಾಂಡ್‌ನಲ್ಲಿರುವ ಬುದ್ಧನ ಪ್ರತಿಮೆಯು ಕುಳಿತಿರುವ ಭಂಗಿಯಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ.

Advertisement

ಸಂಕೀರ್ಣದಲ್ಲಿ, ಸುಮಾರು 300,000 ಚದರ ಅಡಿ ವಿಸ್ತೀರ್ಣದಲ್ಲಿ ರಾಮಾನುಜಾಚಾರ್ಯರ ದೇವಾಲಯವನ್ನು ಸಹ ನಿರ್ಮಿಸಲಾಗಿದೆ, ಅಲ್ಲಿ 120 ಕೆಜಿ ಚಿನ್ನದ ವಿಗ್ರಹವನ್ನು ಪ್ರತಿನಿತ್ಯ ಪೂಜೆಗಾಗಿ ಇರಿಸಲಾಗುತ್ತದೆ.

ತಿರುಮಲ, ಶ್ರೀರಂಗಂ, ಕಂಚಿ, ಅಹೋಬಿಲಂ, ಬದರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ಮತ್ತು ಇತರೆ ಸೇರಿದಂತೆ ದೇಶದ ಹಲವು ಭಾಗಗಳ 108 ಪವಿತ್ರ ದೇವಾಲಯಗಳ ಪ್ರತಿಕೃತಿಗಳಿಂದ ಪ್ರತಿಮೆ ಸುತ್ತುವರೆದಿದೆ.

ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ 1017 ರಲ್ಲಿ ಜನಿಸಿದ ರಾಮಾನುಜಾಚಾರ್ಯರು ವೈದಿಕ, ದಾರ್ಶನಿಕ ಮತ್ತು ಸಮಾಜ ಸುಧಾರಕ ಎಂದು ಪೂಜಿಸಲ್ಪಡುತ್ತಿದ್ದಾರೆ. ಅವರು ಭಾರತದಾದ್ಯಂತ ಪ್ರಯಾಣಿಸಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next