Advertisement

ಒಂದೇ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್: ಕುಂಬ್ಳೆ ಅಪರೂಪದ ಸಾಧನೆಗೆ 21 ವರ್ಷ

10:01 AM Feb 08, 2020 | keerthan |

ಭಾರತದ ಲೆಗ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆಯವರ ಆ ಅಪರೂಪದ ಸಾಧನೆಗೆ ಇಂದಿಗೆ 21 ವರ್ಷ. ಒಂದು ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಗಳನ್ನು ಕಬಳಿಸಿದ್ದ ಜಂಬೋ ಸಾಧನೆಗೆ ಈಗ 21 ವರ್ಷ.

Advertisement

1999ರಲ್ಲಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಎಲ್ಲಾ ಹತ್ತು ವಿಕೆಟ್ ಕಬಳಿಸಿದ್ದರು. ಅಂದಿನ ಇನ್ನಿಂಗ್ಸ್ ನಲ್ಲಿ 26.3 ಓವರ್ ಎಸೆದಿದ್ದ ಕುಂಬ್ಳೆ ನೀಡಿದ್ದು ಕೇವಲ 74 ರನ್.

ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತಕ್ಕೆ ಬಂದಿದ್ದ ಪಾಕಿಸ್ಥಾನ ತಂಡ ಚೆನ್ನೈನಲ್ಲಿ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದಿತ್ತು. ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದ ಟೀಂ ಇಂಡಿಯಾದ ನೆರವಿಗೆ ನಿಂತಿದ್ದು ಕನ್ನಡದ ಹೆಮ್ಮೆ ಅನಿಲ್ ಕುಂಬ್ಳೆ.

ದಿಲ್ಲಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದಅಜರುದ್ದೀನ್ ನಾಯಕತ್ವದ ಭಾರತ 252 ರನ್ ಗಳಿಸಿತ್ತು.ಕುಂಬ್ಳೆ ಮತ್ತು ಹರ್ಭಜನ್ ದಾಳಿಗೆ ನಲುಗಿದ್ದ ಪಾಕ್ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗೆ ಆಲ್ ಔಟ್ ಆಗಿತ್ತು. ಕುಂಬ್ಳೆ 4 ಮತ್ತು ಹರ್ಭಜನ್ ಸಿಂಗ್ ಮೂರು ವಿಕೆಟ್ ಪಡೆದಿದ್ದರು.

ಎರಡನೇ ಇನ್ನಿಂಗ್ಸ್ ನಲ್ಲಿ ಸದಗೋಪನ್ ರಮೇಶ್ ಅವರ 96 ರನ್ ನೆರವಿನಿಂದ ಭಾರತ 339 ರನ್ ಗಳಿಸಿತು. ಪಂದ್ಯ ಗೆಲ್ಲಲು ಪಾಕ್ ಗೆ ಗುರಿ 420 ರನ್. ಎರಡು ದಿನ ಮತ್ತೂ ಬಾಕಿ ಇತ್ತು. ಆದರೆ ಬ್ಯಾಟಿಂಗ್ ಅರಂಭಿಸಿದ ಸಯೀದ್ ಅನ್ವರ್ ಮತ್ತು ಶಾಹಿದ್ ಅಫ್ರಿದಿ ಮೊದಲ ವಿಕೆಟ್ ಗೆ 101 ರನ್ ಗಳಿಸಿದರು. ಆಗ ಕುಂಬ್ಳೆ ಬೌಲಿಂಗ್ ನಲ್ಲಿ ನಯನ್ ಮೊಂಗಿಯಾ ಹಿಡಿದ ಉತ್ತಮ ಕ್ಯಾಚ್ ಗೆ ಅಫ್ರಿದಿ ಔಟಾದರು. ನಂತರ ಆರಂಭವಾಗಿದ್ದು ಕುಂಬ್ಳೆ ಜಾದೂ.

Advertisement

ಎಲ್ಲಾ ಹತ್ತು ವಿಕೆಟ್ ಗಳು ಕುಂಬ್ಳೆ ಬೊಗಸೆಯಲ್ಲಿ. ಭಾರತಕ್ಕೆ 212 ರನ್ ಗಳ ಭರ್ಜರಿ ಜಯ. ಒಂದು ಇನ್ನಿಂಗ್ಸ್ ನ ಎಲ್ಲಾ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಖ್ಯಾತಿಗೆ ಅನಿಲ್ ಕುಂಬ್ಳೆ ಪಾತ್ರರಾದರು. ಅದಕ್ಕಿಂತ ಮೊದಲು ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next