ಹೊಸದಿಲ್ಲಿ : ಸುಮಾರು 20 -21 ಲಷ್ಕರ್ ಎ ತಯ್ಯಬ ಉಗ್ರರ ಗುಂಪೊಂದು ಭಾರತದೊಳಗೆ ನುಸುಳಿ ಬಂದಿದ್ದು ಭಾರೀ ದೊಡ್ಡ ಭಯೋತ್ಪಾದಕ ದಾಳಿಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಗಳನ್ನು ಅನುಸರಿಸಿ ದಿಲ್ಲಿಯಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಡಿಎನ್‌ಎ ವರದಿಯ ಪ್ರಕಾರ ಕೇಂದ್ರ ಗುಪ್ತಚರ ದಳವು ದೇಶದ ಮಹಾ ನಗರಗಳ ಉಗ್ರ ನಿಗ್ರಹ ಘಟಕಗಳಿಗೆ ಸಂಭಾವ್ಯ ಉಗ್ರ ದಾಳಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.
ಪಾಕಿಸ್ಥಾನದ ಇಂಟರ್ ಸರ್ವಿಸ್ ಇಂಟೆಲಿಜೆನ್ಸಿ (ಐಎಸ್‌ಐ) ಆದೇಶದ ಪ್ರಕಾರ ಸುಮಾರು 21 ಲಷ್ಕರ್ ಉಗ್ರರು ಭಾರತವನ್ನು ಪ್ರವೇಶಿಸಿದ್ದಾರೆ; ಕೆಲವು ಉಗ್ರರು ಮುಂಬಯಿ ಮತ್ತು ದಿಲ್ಲಿಯಲ್ಲಿ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಅಡಗಿಕೊಂಡಿದ್ದಾರೆ. ಭಾರತದ ವಿವಿಧೆಡೆಗಳಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆಸುವದು ಈ ಉಗ್ರರ ಉದ್ದೇಶವಾಗಿದ್ದು ಅದಕ್ಕೆ ತಕ್ಕಂತೆ ಅವರು ಸಂಚನ್ನು ರೂಪಿಸುತ್ತಿದ್ದಾರೆ ಎಂದು ಡಿಎನ್‌ಎ ವರದಿ ತಿಳಿಸಿದೆ.
ವಿವಿಧ ರಾಜ್ಯಗಳ ಉಗ್ರ ನಿಗ್ರಹ ಘಟಕಗಳು ಈ ಬೆಳವಣಿಗೆಯನ್ನು ಅನುಸರಿಸಿ ಮೆಟ್ರೋ ಸ್ಟೇಶನ್‌ಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಪ್ರವಾಸಿಗಳಿಗೆ ಪ್ರಸಿದ್ಧವಾಗಿರುವ ಹೊಟೇಲುಗಳಲ್ಲಿ, ಜನದಟ್ಟನೆಯ ಮಾರುಕಟ್ಟೆಗಳಲ್ಲಿ, ಧಾರ್ಮಿಕ ತಾಣಗಳಲ್ಲಿ, ಸ್ಟೇಡಿಯಂ ಗಳಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿವೆ.
ಸರಿಯಾದ ರೀತಿಯಲ್ಲಿ ಕೂಲಂಕಷ ತಪಾಸಣೆ, ಬಿಗಿ ಭದ್ರತೆ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ.