ಅಹಮದಾಬಾದ್: ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ನೀರಿನಡಿಯಲ್ಲಿ ಪ್ರಯಾಣಿಸುವ ಅನುಭವ ಪಡೆಯಲಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಬರೋಬ್ಬರಿ 21 ಕಿ.ಮೀ.ಗಳ ಮಾರ್ಗದಲ್ಲಿ ಬುಲೆಟ್ ರೈಲು ನೀರಿನಡಿಯಲ್ಲಿ ಸಂಚರಿಸಲಿದೆ.
ಈ ಕುರಿತು ಮಾಹಿತಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, “ಮುಂಬೈ-ಅಹಮದಾಬಾದ್ ಬುಲೆಟ್ ರೈಲಿನ ಕಾಮಗಾರಿ ಮುಂದಿನ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಸ್ತುತ ಶೇ.26ರಷ್ಟು ಕಾಮಗಾರಿ ಪೂರ್ಣಗೊಂಡಿದೆ,” ಎಂದು ತಿಳಿಸಿದ್ದಾರೆ.
ಮೂಲ ಗಡುವಿನ ಪ್ರಕಾರ, 2023ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಭೂಸ್ವಾಧೀನ ಸೇರಿದಂತೆ ಹಲವು ತಾಂತ್ರಿಕ ಕಾರಣಗಳಿಂದ 2027ರ ಹೊತ್ತಿಗೆ ಮುಗಿಯುವ ಅಂದಾಜಿದೆ. ಈ ಯೋಜನೆಯ ಅಂದಾಜು ವೆಚ್ಚ 1.08 ಲಕ್ಷ ಕೋಟಿ ರೂ. ಆಗಿದೆ.
ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ರೈಲು ಸಂಚರಿಸಿಲಿದ್ದು, ಮುಂಬೈನಿಂದ ಅಹಮದಾಬಾದ್‌ಗೆ 3 ಗಂಟೆಯಲ್ಲಿ ತಲುಪಲಿದೆ. ಪ್ರಸ್ತುತ ಸಂಚರಿಸುತ್ತಿರುವ ಅತ್ಯಂತ ವೇಗದ ಭುಜ್ ಎಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಈ ಮಾರ್ಗವನ್ನು 6 ಗಂಟೆ 10 ನಿಮಿಷದಲ್ಲಿ ತಲುಪಲಿದೆ. ಈ ಸಮಯವನ್ನು ಬುಲೆಟ್ ರೈಲು ಅರ್ಧದಷ್ಟು ತಗ್ಗಿಸಲಿದೆ. ಜಪಾನೀಸ್ ತಂತ್ರಜ್ಞಾನದಿಂದ ಬುಲೆಟ್ ರೈಲು ಕಾರ್ಯಚಲಿಸಲಿದೆ. ಬುಲೆಟ್ ರೈಲಿಗಾಗಿ ಮಹಾರಾಷ್ಟ್ರದಲ್ಲಿ ಒಂದು ಹಾಗೂ ಗುಜರಾತ್‌ನ ಸೂರತ್ ಮತ್ತು ಸಬರ್‌ಮತಿಯಲ್ಲಿ ತಲಾ ಒಂದು ಸೇರಿ ಒಟ್ಟು ಮೂರು ಡಿಪೊಗಳು ನಿರ್ಮಾಣವಾಗುತ್ತಿವೆ.