Advertisement

ಮೈಸೂರು ಜಿಲ್ಲೆಯಲ್ಲಿ 21 ಮಂದಿಯಲ್ಲಿ ಬ್ಲಾಕ್ ಫಂಗಸ್ ಪತ್ತೆ: ರೋಹಿಣಿ ಸಿಂಧೂರಿ

04:15 PM May 24, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿ 21 ಮಂದಿಗೆ ಬ್ಲ್ಯಾಕ್‌ ಫಂಗಸ್ ಇರುವುದು ದೃಢಪಟ್ಟಿದ್ದು, ಅಷ್ಟೂ ಮಂದಿಗೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

Advertisement

ಕೆ.ಆರ್.ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಆಸ್ಪತ್ರೆಯಲ್ಲಿ 17, ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ 3, ಅಪೋಲೋದಲ್ಲಿ 1 ಪ್ರಕರಣ ಇದೆ. ಬ್ಲ್ಯಾಕ್ ಫಂಗಸ್‌ನಿಂದ ಜಿಲ್ಲೆಯಲ್ಲಿ ಮೃತಪಟ್ಟವರು ಒಬ್ಬರು ಮಾತ್ರ.‌ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬನ್ನಿ. ಈಗಾಗಲೇ ಹಲವರಿಗೆ ಕಣ್ಣಿನವರೆಗೂ ಸರ್ಜರಿ ಮಾಡಲಾಗಿದೆ. ಒಂದೇ ಕಡೆ ಮೂಗು ಸೋರುವಿಕೆ, ತಲೆ ವಿಪರೀತ ನೋವು ಇದೆಲ್ಲವೂ ಬ್ಲಾಕ್ ಫಂಗಸ್‌ನ ರೋಗ ಲಕ್ಷಣಗಳು. ರೋಗ ಲಕ್ಷಣ ಕಂಡುಬಂದ ತಕ್ಷಣ ಆಸ್ಪತ್ರೆಗೆ ಬನ್ನಿ ಎಂದು ಹೇಳಿದರು.

ಈಗ ಕೆ.ಆರ್.ಆಸ್ಪತ್ರೆಯಲ್ಲಿರುವ ಎಲ್ಲಾ ಬ್ಲಾಕ್ ಫಂಗಸ್ ರೋಗಿಗಳು ಕ್ಷೇಮವಾಗಿದ್ದು, ಇವರು ಗುಣಮುಖವಾಗಲು ಕನಿಷ್ಠ ಮೂರು ವಾರವೇ ಬೇಕು. ಚಿಕಿತ್ಸೆ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲೇ ಇದ್ದರೆ ಅದನ್ನು ಔಷಧಿಯಲ್ಲೇ ಗುಣಪಡಿಸಬಹುದು. ನಂತರ ಬಂದರೆ ಸರ್ಜರಿ ಅನಿವಾರ್ಯ. ಜನರು ಈ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಲಸಿಕೆ, ಆಕ್ಸಿಜನ್ ಲಭ್ಯತೆ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ: ಸಿದ್ದರಾಮಯ್ಯ

ತಮ್ಮ ಕುಟುಂಬದವರಿಗೆ ಕೋವಿಡ್‌ ತಗುಲಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮೂವರು ಮನೆಯಲ್ಲಿದ್ದಾರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯದಲ್ಲೂ ಸುಧಾರಣೆಯಾಗಿದೆ. ನಾನು ಪರೀಕ್ಷಿಸಿಕೊಂಡಾಗ ನೆಗೆಟಿವ್ ಬಂದಿದೆ. ನಾನು ನಿತ್ಯವೂ ಕೋವಿಡ್ ತಪಾಸಣೆ ಮಾಡಿಸುತ್ತೇನೆ.‌ ನಮ್ಮಿಂದ ಯಾರಿಗೂ ಸಮಸ್ಯೆ ಆಗಬಾರದು. ಹೀಗಾಗಿ, ದಿನದ ತಪಾಸಣೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಬರುತ್ತೇನೆ ಎಂದರು.

Advertisement

ಎಲ್ಲಾ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಒದಗಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ನನ್ನ ಭೇಟಿ ಇದೇ ಮೊದಲೇನಲ್ಲ, ಹಿಂದೆಯೂ ಎರಡು ಬಾರಿ ಭೇಟಿ ನೀಡಿದ್ದೆ. ಸದ್ಯ ಬ್ಲ್ಯಾಕ್‌ ಫಂಗಸ್‌ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇವೆ. ತಾಲ್ಲೂಕು ಮಟ್ಟದಲ್ಲೂ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ. ಆಸ್ಪತ್ರೆಗಳಲ್ಲಿ ಔಷಧಿಗೆ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next