ಮುಂಬಯಿ: ಕೊಂಕಣಿ ಕಥೊಲಿಕ್ ಅಸೋಸಿಯೇಶನ್ ನಲಸೋಪರ (ಕೆಸಿಎ) ಸಂಸ್ಥೆಯು 20 ನೇ ವಾರ್ಷಿಕ ಆರ್ಥಿಕವಾಗಿ ಹಿಂದುಳಿದ ಶಾಲಾ ವಿದ್ಯಾರ್ಥಿಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಪರಿಕರಗಳ ವಿತರಣ ಕಾರ್ಯಕ್ರಮವು ಜೂ. 4 ರಂದು ಪೂರ್ವಾಹ್ನ ನಡೆಯಿತು.
ಹೆಲ್ಪಿಂಗ್ ಹ್ಯಾಂಡ್ಸ್‌ಡಾಟ್‌ಗಿವ್ಸ್ ಸಂಸ್ಥೆಯ ಸಹಯೋಗದೊಂದಿಗೆ ನಲಸೋಪರ ಪೂರ್ವದ ಕೆಸಿಎ ಕಚೇರಿಯಲ್ಲಿ ಕೆಸಿಎ ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೊ ಕಲ್ಲಮುಂಡ್ಕೂರು ಅಧ್ಯಕ್ಷತೆಯಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ನಲಸೋಪರ ಪರಿಸರದ ವಿವಿಧ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ನೂರಾರು ಶಾಲಾ ಮಕ್ಕಳಿಗೆ ವಿವಿಧ ರೀತಿಯಲ್ಲಿ ಶೈಕ್ಷಣಿಕ ನೆರವು ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೆಲ್ಪಿಂಗ್‌ಹ್ಯಾಂಡ್ಸ್‌ಡಾಟ್‌ಗಿವ್ಸ್ ಸಂಸ್ಥೆಯ ಸ್ಥಾಪಕರಲ್ಲೋರ್ವರಾದ ಜೀವನ್ ಕೋಟ್ಯಾನ್, ಪೀಟರ್ ಫೆರ್ನಾಂಡಿಸ್, ಇಮೆಲ್ಡಾ ಸಿಕ್ವೇರಾ ಉಪಸ್ಥಿತರಿದ್ದು ವಿವಿಧ ರೀತಿಯ ನೆರವನ್ನು ಹಸ್ತಾಂತರಿಸಿ ಮಕ್ಕಳಿಗೆ ಶುಭಹಾರೈಸಿದರು. ಈ ಬಾರಿ ಸುಮಾರು 200ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಪರಿಕರಗಳನ್ನು ಹಾಗೂ 50ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರ, 20 ವಿದ್ಯಾರ್ಥಿಗಳ ಶಾಲಾ ವಾರ್ಷಿಕ ಶುಲ್ಕವನ್ನು ವಿತರಿಸಲಾಯಿತು.
ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸಿ ಅವರನ್ನು ಸುಶಿಕ್ಷಿತರನ್ನಾಗಿಸುವ ಅಗತ್ಯ ಮಕ್ಕಳ ಪಾಲಕರ ಜವಾಬ್ದಾರಿಯಾಗಬೇಕು. ಮಕ್ಕಳಲ್ಲಿನ ದೋಷಗಳನ್ನು ತಿದ್ದಿ ತೀಡುವ ಶಿಕ್ಷಕರಲ್ಲಿ ಅನ್ಯೋನತೆ ಬೆಳೆಸಿಕೊಳ್ಳುವ ಅಗತ್ಯ ಪ್ರಸಕ್ತ ಪಾಲಕರಿಗೆ ಮತ್ತು ಸಮಾಜಕ್ಕಿದೆ. ವಿದ್ಯಾಭ್ಯಾಸವನ್ನು ದೋಷಮುಕ್ತ ಗೊಳಿಸಿದಾಗಲೇ ವಿದ್ಯಾರ್ಥಿಗಳ ಬಾಳು ಬಂಗಾರವಾಗುತ್ತದೆ. ಆದ್ದರಿಂದ ಮಕ್ಕಳು ಸುಶಿಕ್ಷಿತರಾಗಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳಬೇಕು ಎಂದು ಅತಿಥಿಯಾಗಿ ಪಾಲ್ಗೊಂಡ ಜೀವನ್ ಕೋಟ್ಯಾನ್ ಅವರು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹ್ಯಾರಿ ಬಿ. ಕುಟಿನ್ಹೋ ಕಲ್ಲಮುಂಡ್ಕೂರು ಅವರು ಮಾತನಾಡಿ, ಶಿಕ್ಷಣದಲ್ಲಿ ಆಸಕ್ತ ಮಕ್ಕಳಿಗೆ ಸದ್ಯ ಶೈಕ್ಷಣಿಕ ಪರಿಕರ ಅಥವಾ ಹಣಕಾಸು ನೆರವಿನ ಕೊರತೆ ಎಂದೂ ಬಾಧಿಸಲಾರದು. ಆದ್ದರಿಂದ ಶೈಕ್ಷಣಿಕ ನೆರವು, ಅನುದಾನ ಪಡೆಯುವುದರ ಬಗ್ಗೆ ಮಕ್ಕಳಾಗಲೀ ಪಾಲಕರಾಗಲಿ ಸಣ್ಣತನ ಎನ್ನುವುದನ್ನು ತಿಳಿಯಬಾರದು. ಫಲಾನುಭವ ಪಡೆಯುವುದರಲ್ಲಿ ಎಂದಿಗೂ ಕೀಳರಿಮೆ ಮಾಡದಿರಿ. ಬದಲಾಗಿ ಇಂತಹ ಸೇವಾ ಫಲಾನುಭವ ಪಡೆದು ಸುಶಿಕ್ಷಿರತರಾಗಿ ಉತ್ತಮ ಭವಿಷ್ಯ ರೂಪಿಸಲು ಪ್ರೋತ್ಸಾಹಿಸಬೇಕು. ಮಕ್ಕಳೂ ಸಂಸ್ಕಾರಯುತ ಜೀವನ ಮೈಗೂಡಿಸಿ ತಾವೂ ಸ್ವಯಂ ಉದ್ಯಮಿಗಳಾಗಿ ಇದೇ ರೀತಿಯ ನೆರವು ನೀಡುವ ಹೃದಯಶೀಲರಾಗಬೇಕು. ರಾಷ್ಟ್ರದ ಸತøಜೆಗಳಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿದಾಗ ಬಡತನ ನಿರ್ಮೂಲನ ಸಾಧ್ಯವಾಗುವುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್, ರೋನಿ ಪಾಯಸ್, ಇನೇಝ್ ಡಿ’ಸೋಜಾ, ಲವಿನಾ ಡಾಯಸ್, ಜೋನ್ ಆಳ್ವ, ಡೈನಾ ಮೋರಸ್, ರೊವಿನ್‌ಟನ್ ಕಾಕ, ವಿಲ್ಡಾ ಡಿ’ಸೋಜಾ, ರಿಚಾರ್ಡ್ ಪಿಂಟೊ, ರೊಮಿಯೋ ಫೆರ್ನಾಂಡಿಸ್, ಲವಿನಾ ಡಾಯಸ್, ಜೋನ್ ಆಳ್ವ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಕೆಸಿಎ ಗೌರವ ಪ್ರಧಾನ ಕಾರ್ಯದರ್ಶಿ ಕ್ಲೋಡ್ ಡಿ’ಸಿಲ್ವಾ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಆಲ್ವಿನ್ ಫ್ರಾನ್ಸಿಸ್ ಡಿ’ಸೋಜಾ ಮುದರಂಗಡಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಲಿಲ್ಲಿ ಕ್ವಾಡ್ರಸ್, ರೋನಿ ಪಾಯಸ್, ಇನೇಝ್ ಡಿ’ಸೋಜಾ ಅತಿಥಿಗಳನ್ನು ಪುಷಗುತ್ಛವನ್ನಿತ್ತು ಗೌರವಿಸಿ ದರು. ಉಪಾಧ್ಯಕ್ಷೆ ಗ್ರೇಸಿ ಪಿಂಟೋ ವಂದಿಸಿ ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್