Advertisement

ಆರ್‌ಎಂಪಿ-2031 ಅಂಕಿ ಅಂಶಗಳಿಗೆ ವಿರೋಧ

12:15 PM Jan 09, 2017 | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕೃತ ಮಾಸ್ಟರ್‌ ಪ್ಲಾನ್‌- 2031ರ (ಆರ್‌ಎಂಪಿ-2031) ಕರಡು ಯೋಜನಾ ಪ್ರತಿಯ ಮುಖ್ಯಾಂಶಗಳನ್ನು ಬಹಿರಂಗಗೊಳಿಸಿದ್ದು, ತ್ಯಾಜ್ಯ, ನೀರು, ಸಂಚಾರ ವ್ಯವಸ್ಥೆ ಕುರಿತ ಅಂಕಿಅಂಶಗಳ ಬಗ್ಗೆ ಬಿಬಿಎಂಪಿ, ಜಲಮಂಡಳಿ ಹಾಗೂ ಹಿರಿಯ ಐಎಎಸ್‌ ಅಧಿಕಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ಉದ್ಯಾನನಗರಿ ಬೆಂಗಳೂರಿನ ಜನಸಂಖ್ಯೆ 2031ರ ವೇಳೆಗೆ 2.03 ಕೋಟಿ ತಲುಪಲಿದ್ದು, ನಿತ್ಯ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ 18 ಸಾವಿರ ಟನ್‌ಗೆ ಹೆಚ್ಚಾಗಲಿದೆ. ಕುಡಿಯುವ ನೀರಿನ ಅಗತ್ಯತೆ 50 ಟಿಎಂಸಿಯಷ್ಟು ಆಗಲಿದೆ. ಜತೆಗೆ ನಗರದ ವ್ಯಾಪ್ತಿ ವಿಸ್ತಾರಗೊಂಡು ಸಾರಿಗೆ ಅಗತ್ಯತೆಯೂ ಬೆಳೆಯಲಿದ್ದು, ನಿತ್ಯ ವಿವಿಧ ವಾಹನಗಳಿಂದ 2.43 ಕೋಟಿ ಟ್ರಿಪ್‌ಗ್ಳಷ್ಟು ಸಂಚಾರ ಆಗಲಿದೆ.

ಸಂಚಾರ ವೇಗ ಗಂಟೆಗೆ 5 ಕಿ.ಮೀ.ಗೆ ಕುಸಿಯಲಿದೆ ಎಂದು ಪರಿಷ್ಕೃತ ಮಹಾಯೋಜನೆಯಲ್ಲಿ (ಆರ್‌ಎಂಪಿ) ಹೇಳಲಾಗಿದೆ. ನೆದರ್‌ಲ್ಯಾಂಡ್‌ ಮೂಲದ ರಾಯಲ್‌ ಹಾಸ್ಕೋನಿಂಗ್‌ ಡಿವಿ ಎಂಬ ಕಂಪನಿಯು ಈ ಪರಿಷ್ಕೃತ ಮಹಾಯೋಜನೆ ಸಿದ್ಧಪಡಿಸಿದ್ದು, ಅವಾಸ್ತವಿಕ ಅಂಕಿ ಅಂಶಗಳೊಂದಿಗೆ ಇದನ್ನು ಸಿದ್ಧಪಡಿಸಿದೆ ಎಂಬ ಆರೋಪ ಕೇಳಿಬಂದಿದೆ.

ಅಂಕಿ ಅಂಶಗಳ ಬಗ್ಗೆ ತೀವ್ರ ಅಸಮಾಧಾನ: ಆದರೆ, ಆರ್‌ಎಂಪಿ ತಯಾರಿಕೆ ಕುರಿತು ಬಿಡಿಎ ಹಂಚಿಕೊಂಡಿರುವ ಮಾಹಿತಿ ಬಗ್ಗೆ ಹಿರಿಯ ಐಎಎಸ್‌ ಅಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಜಲಮಂಡಳಿ ಅಧ್ಯಕ್ಷರು, ಬಿಬಿಎಂಪಿ ಮೇಯರ್‌, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರ್‌ಎಂಪಿ ಕರಡು ಅಂತಿಮಗೊಳಿಸುವ ಮೊದಲು ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ತಜ್ಞರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕು. ಆ ವೇಳೆ ಎಲ್ಲಾ ಲೋಪಗಳನ್ನೂ ಸರಿ ಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಕ್ಷಿಪ್ರವಾಗಿ ಬೆಳೆಯುತ್ತಿದೆ. ಹೀಗಾಗಿ 2031ರ ವೇಳೆಗೆ ಈ ಬೆಳವಣಿಗೆಗೆ ತಕ್ಕಂತೆ 42 ಹೊಸ ಯೋಜನಾ ಜಿಲ್ಲೆಗಳ ಸ್ಥಾಪನೆಗೆ ಬಿಡಿಎ ಉದ್ದೇಶಿಸಿದೆ. ಹೊಸ ಯೋಜನಾ ಜಿಲ್ಲೆಗಳ ಪರಿಕಲ್ಪನೆ ಕುರಿತು ವಿವರಿಸಿರುವ ಬಿಡಿಎ, ಆಡಳಿತಾತ್ಮಕ ಗಡಿರೇಖೆಗಳ ಬದಲಾವಣೆ, ತನ್ನ ಯೋಜನೆಗಳ ಜಾರಿ ಮತ್ತು ಅನುಷ್ಠಾನಕ್ಕೆ ಉದ್ದೇಶಿತ ಹೊಸ ಯೋಜನಾ ಜಿಲ್ಲೆಗಳನ್ನು ಸಾಧನವಾಗಿ ಬಳಸಲಿದೆ ಎಂದು ಹೇಳಿದೆ.

Advertisement

ವಾಹನ ಸಂಚಾರ, ಸಾರಿಗೆ ಬಳಿಕೆಯೂ ಹೆಚ್ಚಾಗಲಿದ್ದು, ಸಂಚಾರ ದಟ್ಟಣೆ ಹೆಚ್ಚಿರುವ ಸಮಯದಲ್ಲಿ ವಾಹನಗಳ ವೇಗ ಗಂಟೆಗೆ 5 ಕಿ.ಮೀ.ಗಿಂತ ಕಡಿಮೆ ಇರುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ಮೆಟ್ರೋ 2ನೇ ಹಂತದ ಯೋಜನೆ ಜಾರಿಗೊಂಡರೂ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಈ ಸಮಸ್ಯೆ ಬಗೆಹರಿಸಲು ಪರ್ಯಾಯ ಯೋಜನೆಯೊಂದನ್ನು ರೂಪಿಸಬೇಕು ಎಂದು ಬಿಡಿಎ ಹೇಳಿದೆ.

ಪ್ರಸ್ತುತ ನಗರದಲ್ಲಿ ಗೃಹ ಮತ್ತು ಗೃಹೇತರ ಬಳಕೆಗೆ ನಿತ್ಯ ಪೂರೈಕೆಯಾಗುತ್ತಿರುವ 155 ಕೋಟಿ ಲೀಟರ್‌ ನೀರಿನ ಪ್ರಮಾಣ 2031ರ ವೇಳೆಗೆ 534 ಕೋಟಿ ಲೀಟರ್‌ಗೆ ಹೆಚ್ಚಳವಾಗಲಿದೆ. ಹೀಗಾಗಿ ನೀರು ಮಿತಬಳಕೆ, ಪುನರ್‌ಬಳಕೆ ಜತೆಗೆ ಎತ್ತಿನ ಹೊಳೆ, ಹೇಮಾವತಿ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಜಲಾಶಯಕ್ಕೆ ನೀರು ಹರಿಸುವ ಯೋಜನೆ ಕುರಿತು ಪ್ರಸ್ತಾಪಿಸಲು ಉದ್ದೇಶಿಸಿದೆ.

ಮೇಕೆದಾಟು ಬಳಿ ಜಲಾಶಯ ನಿರ್ಮಾಣ ಮಾಡುವುದು ಹಾಗೂ ಕಾವೇರಿ ನದಿ ತಿರುವು ಕುರಿತು ಪರಿಷ್ಕೃತ ಮಹಾಯೋಜನೆ ಪ್ರಸ್ತಾಪಿಸಲಿದೆ. ಆದರೆ, ಇದರ ಬಗ್ಗೆ ಜಲಮಂಡಳಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಮನಕ್ಕೆ ತಂದಿದ್ದರೂ ಬದಲಿಸಿಲ್ಲ: ನೆದರ್‌ಲ್ಯಾಂಡ್‌ ಮೂಲದ ರಾಯಲ್‌ ಹಾಸ್ಕೋನಿಂಗ್‌ ಡಿವಿ ಎಂಬ ಕಂಪನಿ ಸಿದ್ಧಪಡಿಸಿರುವ ಆರ್‌ಎಂಪಿ-2031ನ ಕರಡು ಪ್ರತಿಯಲ್ಲಿನ ಅಂಶಗಳ ಬಗ್ಗೆ ಪ್ರಾಥಮಿಕ ಹಂತದ ಸಭೆಗಳಲ್ಲೇ ಕೆಲವು ವಿಚಾರಗಳ ಬಗ್ಗೆ ಹಿರಿಯ ಐಎಎಸ್‌ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರ ಗಮನಕ್ಕೆ ತಂದಿದ್ದರು. ಆದರೂ ಕರಡು ಪ್ರತಿಯಲ್ಲಿ ಯಾವುದೇ ಬದಲಾವಣೆ ಮಾಡದೆ ಮುದ್ರಿಸಲಾಗಿದೆ. ಈ ಬಗ್ಗೆ ಕೆಲ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಪ್ಪಾಗಿ ಅಂದಾಜಿಸಲಾಗಿದೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 2031ರ ವೇಳೆಗೆ 18,000 ಟನ್‌ ಘನ ತ್ಯಾಜ್ಯ ಉತ್ಪಾದನೆ ಆಗುತ್ತದೆ ಎಂಬುದು ಸುಳ್ಳು. ಪ್ರಸ್ತುತ 1 ಕೋಟಿ ಇರುವ ಜನಸಂಖ್ಯೆಗೆ 3,500 ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆರ್‌ಎಂಪಿ ಕರಡು ಸಿದ್ಧಪಡಿಸಿರುವವರ ಪ್ರಕಾರವೇ 2031ರ ವೇಳೆಗೆ 2.03 ಕೋಟಿ ಜನಸಂಖ್ಯೆಯಾಗುತ್ತದೆ. ಹಾಗಾದರೂ 7 ಸಾವಿರ ಟನ್‌ ಮಾತ್ರ ಕಸ ಉತ್ಪಾದನೆಯಾಗಬೇಕು. ಜನಸಂಖ್ಯೆಯಲ್ಲಿ ಹೆಚ್ಚಳವಾದರೂ 9 ಸಾವಿರ ಟನ್‌ಗಿಂತ ಹೆಚ್ಚು ಉತ್ಪಾದನೆಯಾಗುವುದಿಲ್ಲ. ಈ ರೀತಿಯ ಅಂಶಗಳ ಬಗ್ಗೆ ಆರ್‌ಎಂಪಿ ಸಿದ್ಧಪಡಿಸುವವರ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌.

ಜ.15ರಿಂದ ಅಭಿಪ್ರಾಯ ಸಂಗ್ರಹ
ಜನವರಿನ 15ರಿಂದ ನಗರದ ಹತ್ತು ಕಡೆಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಲಿದೆ. ಅಲ್ಲದೆ ಜನವರಿ, ಫೆಬ್ರವರಿ ತಿಂಗಳಲ್ಲಿ ಬಿಬಿಎಂಪಿ, ವಿಜನ್‌ಗೂÅಪ್‌, ಜನವರಿ ಮೊದಲ ಹಾಗೂ ಫೆಬ್ರವರಿ ಮೊದಲ ವಾರದಂದು ನಗರಾಭಿವೃದ್ಧಿ ತಜ್ಞರು, ಎನ್‌ಜಿಒಗಳಿಂದ, ಜನವರಿ 4ನೇ ವಾರ ಹಾಗೂ ಫೆಬ್ರವರಿ ಮೊದಲ ವಾರ ಕೈಗಾರಿಕಾ ಸಂಘಗಳು, ಜನವರಿ 2ನೇ ವಾರ ಫೆಬ್ರವರಿ ಮೊದಲ ವಾರ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವುದಾಗಿ ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೋ ಮಾರ್ಗದ ಬಗ್ಗೆಯೂ ಗೊಂದಲ
ಆರ್‌ಎಂಪಿ ಕರಡು ಪ್ರಕಾರ ನಗರ ಕಡಿಮೆ ಬೆಳವಣಿಗೆ ಕಂಡರೆ ಮೆಟ್ರೋ ಮಾರ್ಗ 195 ಕಿ.ಮೀ. ನಷ್ಟಿರುತ್ತದೆ. ಹೆಚ್ಚು ಬೆಳವಣಿಗೆ ಕಂಡರೆ 148 ಕಿ.ಮೀ. ಇರುತ್ತದೆ. ವಾಸ್ತವ ರೂಪದಲ್ಲಿ ನಗರ ಅಭಿವೃದ್ಧಿಯಾದರೆ 211 ಕಿ.ಮೀ. ನಷ್ಟಾಗುತ್ತದೆ ಎಂದು ಹೇಳಲಾಗಿದೆ. ಇವು ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

50 ಟಿಎಂಸಿ ಬೇಕಾಗಲ್ಲ
ಆರ್‌ಎಂಪಿ ಸಿದ್ಧ ಪಡಿಸುವವರು ನೀರನ ಬೇಡಿಕೆಯನ್ನು ಜನಸಂಖ್ಯೆ, ನಿಯಮಗಳನ್ನು ಆಧಾರಿಸಿ ಗುಣಾಕಾರ ಮಾಡಿದ್ದಾರೆ. ವಾಸ್ತವವಾಗಿ 2031ರ ವೇಳೆಗೆ 50 ಟಿಎಂಸಿ ನೀರು ಬೇಕಾಗುವುದಿಲ್ಲ. 2031ರ ವೇಳೆಗೆ ಪ್ರಸ್ತುತ ಹಾಗೂ ಭವಿಷ್ಯದ ಯೋಜನೆ, ಅಂತರ್ಜಲ ಸೇರಿ 30 ಟಿಎಂಸಿ ನೀರು ಹೊಂದಿರುತ್ತೇವೆ. ನಮ್ಮ ಲೆಕ್ಕಾಚಾರದ ಪ್ರಕಾರ 2 ಟಿಎಂಸಿ ಕೊರತೆ ಉಂಟಾಗಲಿದೆ. ಈ ಬಗ್ಗೆ ಆರ್‌ಎಂಪಿ ಸಿದ್ಧಪಡಿಸುವವರ ಗಮನಕ್ಕೆ ತರಲಾಗುವುದು.
-ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

* ಶ್ರೀಕಾಂತ್‌ ಎನ್‌.ಗೌಡಸಂದ್ರ

Advertisement

Udayavani is now on Telegram. Click here to join our channel and stay updated with the latest news.

Next