Advertisement

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

06:06 PM Jul 06, 2024 | ಸುಹಾನ್ ಶೇಕ್ |

ವರ್ಷದ ಮೊದಲಾರ್ಧ ಮುಕ್ತಾಯ ಕಂಡಿದೆ. ಚಿತ್ರರಂಗದ ವಿಚಾರಕ್ಕೆ ಬಂದರೆ ಸೌತ್‌ ನಲ್ಲಿ ಮಾಲಿವುಡ್‌ ಚಿತ್ರರಂಗ ಯಾರೂ ಮಾಡದ ಸಾಧನೆಯನ್ನು ಮಾಡಿ ತೋರಿಸಿದೆ. ಹಾಗಂತ ಇತರೆ ಚಿತ್ರರಂಗ ಮಾಲಿವುಡ್‌ ಗೆ ಟಕ್ಕರ್‌ ಕೊಡುವಂಥ ಪೈಪೋಟಿ ನೀಡದೆ ಇದ್ದರೂ, ಹೀನಾಯವಾಗಿ ಸೋತಿಲ್ಲ.

Advertisement

2021 -2022ರ ವರ್ಷ ಬಿಟೌನ್‌ ಅತ್ಯಂತ ಕಳಪೆ ವರ್ಷ ಹೇಳಿದರೆ ತಪ್ಪಾಗದು. 2023ಕ್ಕೆ ಬಂದರೆ ಬಿಟೌನ್‌ ಕಂಬ್ಯಾಕ್‌  ಮಾಡಿದ ವರ್ಷವೆಂದರೆ ತಪ್ಪಾಗದು. 2024ರ ಮೊದಲಾರ್ಧ ಸೋಲು ಗೆಲುವು ಎರಡನ್ನೂ ಕಂಡಿದೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಬಿಗ್‌ ಬಜೆಟ್‌ ಚಿತ್ರಗಳು ಬಾಕ್ಸ್‌ ಆಫೀಸ್‌ ಲೂಟಿ ಮಾಡಲು ಸೋತಿದ್ದು ಒಂದು ಕಡೆಯಾದರೆ, ಸ್ಟಾರ್‌ ಕಲಾವಿದರೇ ಇಲ್ಲದೆ ಕಂಟೆಂಟ್‌ ನಿಂದಲೇ 100 ಕೋಟಿ ಗಳಿಸಿದ ಚಿತ್ರವೂ ಬಾಲಿವುಡ್‌ ನಲ್ಲಿ ಯಶಸ್ಸು ಕಂಡಿರುವುದು ಅಚ್ಚರಿಯೇ ಸರಿ.

2023ರ ಮೊದಲಾರ್ಧದ ಗಳಿಕೆಗೆ ಹೋಲಿಸಿದರೆ, 2024ರ ಮೊದಲಾರ್ಧ ಗಳಿಕೆ ಬಾಲಿವುಡ್‌ ಗೆ ಸಿಹಿ-ಕಹಿ ಎರಡರ ಅನುಭವನ್ನು ತಂದುಕೊಟ್ಟಿದೆ. 2023ರ ಮೊದಲಾರ್ಧದಲ್ಲಿ 1450 ಕೋಟಿ ರೂ.ಗಳಿಕೆ ಕಂಡಿತು. 2024ರ ಮೊದಲಾರ್ಧ 1081ಕೋಟಿ ರೂ. ಗಳಿಕೆ ಕಂಡಿದೆ. ಹಿಂದಿನ ವರ್ಷಕ್ಕಿಂತ 25 ಪ್ರತಿಶತದಷ್ಟು ಇಳಿಕೆಯಾಗಿದೆ.

ಆ ವರ್ಷ ʼಪಠಾಣ್‌ʼಗೆ ಸಿಕ್ಕಿದ್ದು ಅದ್ಭುತ ಗೆಲುವು.. ಈ ವರ್ಷ.. 2023ರ ಆರಂಭದಲ್ಲಿ ಅಂದರೆ ಜನವರಿ 25ರಂದು ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ ಅವರ ʼಪಠಾಣ್‌ʼ ಸಿನಿಮಾ ರಿಲೀಸ್‌ ಆಗಿತ್ತು. ಚಿತ್ರಕ್ಕೆ ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್‌ ಕೇಳಿ ಬಂದಿತ್ತು. ಪರಿಣಾಮ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ʼಪಠಾಣ್‌ʼ 515 ಕೋಟಿ ಗಳಿಕೆ ಕಾಣುವ ಮೂಲಕ ವರ್ಷದ ಆರಂಭದಲ್ಲೇ ಬಿಟೌನ್‌ ಸದ್ದು ಮಾಡುವಂತೆ ಮಾಡಿತ್ತು.

ವರ್ಷದ ಆರಂಭದಲ್ಲಿ ತೆರೆಕಾಣುವ ಸಿನಿಮಾದ ಮೇಲೆ ಸಾಮಾನ್ಯವಾಗಿ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಅದು ಕೂಡ ಆ ಸಿನಿಮಾ ಟಾಪ್‌ ಸ್ಟಾರ್‌ ಗಳ ಸಿನಿಮಾವಾಗಿದ್ದರೆ ನಿರೀಕ್ಷೆ ತುಸು ಹೆಚ್ಚೇ ಇರುತ್ತದೆ. ವಿಜಯ್‌ ಸೇತುಪತಿ ಹಾಗೂ ಕತ್ರಿನಾ ಕೈಫ್‌ ಅವರನ್ನು ಇಟ್ಟುಕೊಂಡು ವಿಭಿನ್ನ ಕಥಾಹಂದರವುಳ್ಳ ಶ್ರೀರಾಮ್ ರಾಘವನ್ ಮಾಡಿದ್ದರು. ʼಮೇರಿ ಕ್ರಿಸ್ಮಸ್‌ʼ ರಿಲೀಸ್‌ ವೇಳೆಯೇ ಸಿನಿಮಾ ನಿಧಾನವಾಗಿ ಸಾಗುತ್ತದೆನ್ನುವ ವಿಮರ್ಶೆ ಎಲ್ಲೆಡೆ ಕೇಳಿ ಬಂದರೂ, ಕೆಲ ದಿನಗಳ ಬಳಿಕ ಬಾಕ್ಸ್‌ ಆಫೀಸ್‌ ನಲ್ಲಿ ಗಳಿಕೆ ಕಾಣಲು ಶುರು ಮಾಡಿದ್ದರೂ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಕೇವಲ 15 ಕೋಟಿ ರೂ.ವನ್ನು ಮಾತ್ರ ಗಳಿಸಿತು.

Advertisement

ಮಾರ್ಯಾದೆ ಉಳಿಸಿದ ಹೃತಿಕ್‌ ʼಫೈಟರ್‌ʼ: ʼಮೇರಿ ಕ್ರಿಸ್ಮಸ್‌ʼ ಬಳಿಕ  ಬಾಲಿವುಡ್‌ ಕಂಡ ದೊಡ್ಡ ರಿಲೀಸ್‌ ಎಂದರೆ ಅದು ಹೃತಿಕ್‌ ರೋಷನ್‌ ಅವರ ʼಫೈಟರ್‌ʼ ರಿಪಬ್ಲಿಕ್‌ ಡೇ ಸಮಯದಲ್ಲಿ ತೆರೆಕಂಡ ಈ ಸಿನಿಮಾ ಬಿಟೌನ್‌ ನಲ್ಲಿ ಸಖತ್‌ ಸದ್ದು ಮಾಡಿತು. ಸಿದ್ದಾರ್ಥ್‌ ಆನಂದ್‌ ಅವರಿಗೆ ʼಪಠಾಣ್‌ʼ ಬಳಿಕ ʼಫೈಟರ್‌ʼ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ತಂದುಕೊಟ್ಟಿತು. ಭಾರತದಲ್ಲಿ  201.50 ಕೋಟಿ ರೂ.ಗಳಿಕೆ ಕಾಣುವ ಮೂಲಕ ವರ್ಷದ ಮೊದಲಾರ್ಧದ ಗಳಿಕೆಯಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಿದೆ.

ಅನಿರೀಕ್ಷಿತವಾಗಿ ಹಿಟ್‌ ಕೊಟ್ಟ ಸಿನಿಮಾಗಳು: ಹೆಚ್ಚು ಹೈಪ್‌ ಇಲ್ಲದೆ, ಹೆಚ್ಚು ಪ್ರಚಾರವೂ ಇಲ್ಲದೆ, ಕೊನೆಯದಾಗಿ ಖ್ಯಾತ ಕಲಾವಿದರೂ ಇಲ್ಲದೆ ಕೆಲವೊಂದು ಸಿನಿಮಾಗಳು ಸದ್ದಿಲ್ಲದೆ ರಿಲೀಸ್‌ ಆಗುತ್ತವೆ. ಸಾಮಾನ್ಯವಾಗಿ ಇಂತಹ ಸಿನಿಮಾಗಳನ್ನು ನೋಡುವುದರಲ್ಲಿ ಪ್ರೇಕ್ಷಕರು ಹಿಂದೇಟು ಹಾಕುವುದು ಹೆಚ್ಚು. ನೇರವಾಗಿ ಓಟಿಟಿಗೆ ಬಂದರೆ ಒಂದೊಮ್ಮೆ ಈ ಸಿನಿಮಾಗಳನ್ನು ನೋಡುತ್ತಾರೆ ವಿನಃ ಥಿಯೇಟರ್‌ ಗೆ ಹೋಗಿ ನೋಡುವುದರಲ್ಲಿ ನಮ್ಮ ಪ್ರೇಕ್ಷಕರು ಸ್ವಲ್ಪ ಹಿಂದೆಯೇ.

ಬಿಟೌನ್‌ ನಲ್ಲಿ ವರ್ಷದ ಮೊದಲಾರ್ಧದಲ್ಲಿ ಇಂತಹ ಸಿನಿಮಾಗಳು ರಿಲೀಸ್‌ ಆಗಿ ಕೋಟಿ ಗಳಿಕೆ ಕಂಡಿದೆ. ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ ʼತೇರಿ ಬಾತೊಂ ಮೇ ಐಸೆ ಉಲ್ಜಾ ಜಿಯಾʼ ನಿಧಾನವಾಗಿ ಪ್ರೇಕ್ಷಕರನ್ನು ಥಿಯೇಟರ್‌ ಗೆ ಕರೆತಂದು ಚಿತ್ರ ನೋಡುವಂತೆ ಮಾಡಿತು.  ಈ ಚಿತ್ರ 84 ಕೋಟಿ ರೂಪಾಯಿಗಳ ಸಾರ್ವಕಾಲಿಕ ಕಲೆಕ್ಷನ್‌ನೊಂದಿಗೆ ಹಿಟ್‌ ಸಿನಿಮಾವಾಗಿ ಹೊರಹೊಮ್ಮಿತು.

ರಾಜಕೀಯ ವಲಯದಲ್ಲಿಯೂ ಸದ್ದು ಮಾಡಿದ ಯಾಮಿ ಗೌತಮ್ ಅವರ ʼಆರ್ಟಿಕಲ್ 370ʼ ಚೆನ್ನಾಗಿದೆ ಎನ್ನುವ ಬಾಯಿ ಮಾತಿನ ಪ್ರಚಾರದಿಂದಲೇ ಹೆಚ್ಚು ದಿನ ಥಿಯೇಟರ್‌ ನಲ್ಲಿ ಓಡಿತು ಎಂದರೆ ತಪ್ಪಾಗದು. 77 ಕೋಟಿ ರೂ. ಗಳಿಕೆ ಕಾಣುವ ಮೂಲಕ ಚಿತ್ರ ಹಿಟ್‌ ಲಿಸ್ಟ್‌ ಗೆ ಸೇರಿತು.

ಇನ್ನು ನಟ ಆಮೀರ್‌ ಖಾನ್‌ ನಿರ್ಮಾಣದ, ಕಿರಣ್‌ ರಾವ್‌ ನಿರ್ದೇಶನದಲ್ಲಿ ಬಂದ ʼಲಾಪತಾ ಲೇಡೀಸ್ʼ ನಿಧಾನವಾಗಿ ಥಿಯೇಟರ್‌ ನತ್ತ ಜನರನ್ನು ಕರೆತಂದ ಮತ್ತೊಂದು ಸಿನಿಮಾ. ಥಿಯೇಟರ್‌ ನಲ್ಲಿ 12 ವಾರಗಳ ಥಿಯೇಟರ್‌ ನಲ್ಲಿ ಓಡಿದ ಈ ಸಿನಿಮಾ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ರೂ. 20 ಕೋಟಿ ಗಳಿಸುವ ಮೂಲಕ ಸಾಧಾರಣವಾಗಿ ಹಿಟ್‌ ಆಯಿತು.

ಕರೀನಾ ಕಪೂರ್, ಟಬು ಮತ್ತು ಕೃತಿ ಸನೋನ್ ಅವರ ʼಕ್ರ್ಯೂʼ ದೇಶಿಯ ಬಾಕ್ಸ್‌ ಆಫೀಸ್‌ ನಲ್ಲಿ 82 ಕೋಟಿ ರೂ. ಗಳಿಸುವ ಮೂಲಕ ಬಿಟೌನ್‌ ಹಿಟ್‌ ಲಿಸ್ಟ್‌ ಗೆ ಸೇರಿತು.

ಗೆದ್ದು ಬೀಗಿದ ಅಜಯ್‌ ದೇವಗನ್‌ ʼಸೈತಾನ್”:‌ ಸೌತ್‌ ಸ್ಟಾರ್‌ ಆರ್.‌ ಮಾಧವನ್‌,ನಟಿ ಜ್ಯೋತಿಕಾ ಹಾಗೂ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅಭಿನಯದ ಸೈಕಾಲಿಜಿಕಲ್‌ ಥ್ರಿಲ್ಲರ್‌ ʼಸೈತಾನ್‌ʼ ವರ್ಷದ ಮೊದಲಾರ್ಧದಲ್ಲಿ ಹಿಟ್‌ ದೊಡ್ಡ ಸಿನಿಮಾಗಳ ಪೈಕಿ ಒಂದು. ಭಾರತದಲ್ಲಿ ಈ ಚಿತ್ರ145 ಕೋಟಿ ರೂ. ಗಳಿಕೆ ಕಂಡಿತು.

ಭಾರೀ ನಿರೀಕ್ಷೆ ಮೂಡಿಸಿ ಠುಸ್‌ ಆದ ʼಯೋಧʼ: ಎರಡು ಮೂರು ರಿಲೀಸ್‌ ಡೇಟ್‌ ಮುಂದೂಡಿ ದೊಡ್ಡ ಸಿನಿಮಾಗಳ ಪೈಪೋಟಿಯಿಂದ ತಪ್ಪಿ ಥಿಯೇಟರ್‌ ನಲ್ಲಿ ರಿಲೀಸ್‌ ಆದ ʼಯೋಧʼ ಬಂದು ಹೋದದ್ದೇ ಗೊತ್ತಾಗಿಲ್ಲ. ಕೇವಲ 32 ಕೋಟಿ ಗಳಿಸುವ ಮೂಲಕ ದೊಡ್ಡ ಫ್ಲಾಪ್‌ ಆಗಿ ಸಿನಿಮಾ ಹೊರಹೊಮ್ಮಿತು.

ಈ ವರ್ಕೌಟ್‌ ಆದಗ ಈದ್‌ ರಿಲೀಸ್‌ : ಪ್ರತಿ ವರ್ಷ ಬಾಲಿವುಡ್‌ ನಲ್ಲಿ ಈದ್‌ ಹಬ್ಬಕ್ಕೆ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ ಆಗುವ ಟ್ರೆಂಡ್‌ ಇದೆ. ಈ ವರ್ಷವೂ ಒಂದಷ್ಟು ಕಾರಣಗಳಿಂದ ಸದ್ದು ಮಾಡಿದ ಸಿನಿಮಾಗಳು ಈದ್‌ ಹಬ್ಬದ ವೇಳೆಯೇ ರಿಲೀಸ್‌ ಆಗಿತ್ತು. ಆದರೆ ಈ ಬಾರಿ ಮಾತ್ರ ಈ ಮಂತ್ರ ವರ್ಕೌಟ್‌ ಆಗದೆ ರಿಲೀಸ್‌ ಚಿತ್ರಗಳು ಮಕಾಡೆ ಮಲಗಿತು.

ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌ ಅವರ ʼಬಡೇ ಮಿಯಾನ್ ಚೋಟೆ ಮಿಯಾನ್ʼ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಕೇವಲ 59 ಕೋಟ ರೂ.ಗಳಿಸುವ ಮೂಲಕ ಹೀನಾಯವಾಗಿ ಸೋತಿತು. 3-4 ವರ್ಷಗಳ ಹಿಂದೆಯೇ ರಿಲೀಸ್‌ ಆಗಬೇಕಿದ್ದ ಅಜಯ್‌ ದೇವಗನ್‌ ಅವರ ʼಮೈದಾನ್‌ʼ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿತು. ಚಿತ್ರ 51 ಕೋಟಿ ರೂ.ವನ್ನು ಮಾತ್ರ ಗಳಿಸಿತು.

ಐಪಿಎಲ್‌ , ಚುನಾವಣೆ ಭರಾಟೆಯ ನಡುವೇ ರಿಲೀಸ್‌ ಆದ ರಾಜ್‌ ಕುಮಾರ್‌ ರಾವ್‌ ಅವರ ರಿಯಲ್‌ ಲೈಫ್‌ ʼಶ್ರೀಕಾಂತ್‌ʼ ಭಾರತದಲ್ಲಿ 48 ಕೋಟಿ ರೂ. ಗಳಿಸುವ ಮೂಲಕ ಸೆಮಿ ಹಿಟ್‌ ಲಿಸ್ಟ್‌ ಗೆ ಸೇರಿತು.

ರಾಜ್‌ ಕುಮಾರ್‌ ರಾವ್‌, ಜಾಹ್ನವಿ ಕಪೂರ್‌ ಅವರ ʼಮಿ.&ಮಿಸೆಸ್‌ ಮಹಿʼ 36 ಕೋಟಿ ಕೋಟಿ ಗಳಿಸುವ ಮೂಲಕ ಸಾಧಾರಣವಾಗಿ ಸದ್ದು ಮಾಡಿತು.

ಸ್ಟಾರ್‌ ಕಲಾವಿದರಿಲ್ಲ, ಹೆಚ್ಚು ಪ್ರಚಾರವಿಲ್ಲದೆ ಕೋಟಿ ಕೊಳ್ಳೆ ಹೊಡೆದ ʼಮುಂಜ್ಯʼ: ಬಾಲಿವುಡ್‌ ಕೊನೆಯದಾಗಿ ಕಾರ್ತಿಕ್‌ ಆರ್ಯಾನ್‌ ಅವರ  ಹಾರಾರ್‌ ಕಾಮಿಡಿ ʼ ಭೂಲ್ ಭುಲೈಯಾ 2ʼಹಿಟ್‌ ಆಗಿತ್ತು. 2024ರಲ್ಲಿ ಹಾರರ್‌ ಕಾಮಿಡಿ ಚಿತ್ರವೊಂದು ದೊಡ್ಡ ಹಿಟ್‌ ಆಗಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಯಾವುದೇ ಸ್ಟಾರ್‌ ನಟರಿಲ್ಲ. ವಿಎಫ್‌ ಎಕ್ಸ್‌ ನಿಂದಲೂ ಸದ್ದು ಮಾಡಿರುವ ʼಮುಂಜ್ಯʼ ಭಾರತದಲ್ಲಿ 100 ಕೋಟಿ ಗಳಿಕೆ ಕಂಡಿದೆ. ಆ ಮೂಲಕ ಸೂಪರ್‌ ಹಿಟ್‌ ಆಗಿದೆ. ದಿನೇಶ್ ವಿಜನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನು ಜೂನ್‌ ತಿಂಗಳಿನಲ್ಲಿ ಬಂದ ಮತ್ತೊಂದು ಚಿತ್ರ ಅದು ಕಬೀರ್‌ ಖಾನ್‌ ಅವರ ʼಚಂದು ಚಾಂಪಿಯನ್‌ʼ ಕಾರ್ತಿಕ್‌ ಆರ್ಯನ್‌ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ವಿನಃ 60 ಕೋಟಿ ಗಳಿಕೆ ಕಂಡಿರುವ ಈ ಚಿತ್ರ ಹೇಳಿಕೊಳ್ಳುವಷ್ಟು ಸದ್ದು ಮಾಡಿಲ್ಲ.

ಮೊದಲಾರ್ಧ ಮುಕ್ತಾಯ ಕಾಣುವುದು ʼಕಲ್ಕಿ2898ʼ ಚಿತ್ರದಿಂದ. ಈ ಚಿತ್ರದ ಹಿಂದಿ ಡಬ್ಬಿಂಗ್‌ 250 ಕೋಟಿ ರೂ. ಗಳಿಕೆ ಕಂಡು ಸೂಪರ್‌ ಹಿಟ್‌ ಆಗಿದೆ.

ವರ್ಷದ ಮೊದಲಾರ್ಧ: ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಕಾರ್ಡ್:‌

ಮೇರಿ ಕ್ರಿಸ್ಮಸ್‌ – ಫ್ಲಾಪ್‌ – ಗಳಿಕೆ -15 ಕೋಟಿ ರೂ.

ಫೈಟರ್‌ – ಹಿಟ್‌ – ಗಳಿಕೆ- 201.50 ಕೋಟಿ ರೂ.

ತೇರಿ ಬಾತೊನ್ ಮೇ ಐಸಾ ಉಲ್ಜಾ ಜಿಯಾ – ಹಿಟ್-‌ 84 ಕೋಟಿ ರೂ.

ಕ್ರ್ಯಾಕ್ – ಫ್ಲಾಪ್ – 12.50 ಕೋಟಿ ರೂ.‌

ಆರ್ಟಿಕಲ್‌ 370 – ಹಿಟ್‌ – 77 ಕೋಟಿ ರೂ.

ʼಲಾಪತಾ ಲೇಡೀಸ್ʼ – ಸಾಧಾರಣ ಹಿಟ್‌ – 20ಕೋಟಿ ರೂ.

ಸೈತಾನ್‌ – ಹಿಟ್‌ – 145 ಕೋಟಿ ರೂ.

ಯೋಧ – ಫ್ಲಾಪ್‌ – 32 ಕೋಟಿ ರೂ.

ಮಡಗಾಂವ್ ಎಕ್ಸ್‌ಪ್ರೆಸ್ – ಸೆಮಿ ಹಿಟ್‌ – 36 ಕೋಟಿ ರೂ.

ಸ್ವತಂತ್ರ ವೀರ್ ಸಾವರ್ಕರ್‌ –  ಫ್ಲಾಪ್‌ – 26 ಕೋಟಿ ರೂ.

ಕ್ರ್ಯೂ –  ಸೆಮಿ ಹಿಟ್‌ – 82 ಕೋಟಿ ರೂ.

ಬಡೇ ಮಿಯಾನ್ ಚೋಟೆ ಮಿಯಾನ್ – ಫ್ಲಾಪ್‌ – 59 ಕೋಟಿ ರೂ.

ಮೈದಾನ್‌ – ಫ್ಲಾಪ್‌ – 51 ಕೋಟಿ ರೂ.

ಶ್ರೀಕಾಂತ್‌ – ಸೆಮಿ ಹಿಟ್‌ – 48 ಕೋಟಿ ರೂ.

ಮಿ. &ಮಿಸೆಸ್‌ ಮಹಿ – ಸಾಧಾರಣ ಹಿಟ್‌ – 36 ಕೋಟಿ ರೂ.

ಮುಂಜ್ಯ – ಸೂಪರ್‌ ಹಿಟ್‌ – 100+

ಚಂದು ಚಾಂಪಿಯನ್‌ – ಫ್ಲಾಪ್‌ – 60 ಕೋಟಿ

2024ರ ಮೊದಲಾರ್ಧದಲ್ಲಿ 9 ಸಿನಿಮಾಗಳು ಸಕ್ಸಸ್‌ ಕಂಡಿವೆ. ಇದರಲ್ಲಿ 4 ಚಿತ್ರಗಳು ಸೂಪರ್‌ ಹಿಟ್‌ ಆಗಿವೆ.

ಈ ವರ್ಷ ಹನುಮಾನ್ (ಮೂಲ- ತೆಲುಗು: ಹಿಂದಿಯಲ್ಲಿ ಡಬ್ ಮಾಡಲಾಗಿದೆ) ನಂತಹ ಕೆಲವು ಯಶಸ್ವಿ ಚಲನಚಿತ್ರಗಳೊಂದಿಗೆ ಹಾಲಿವುಡ್ ನ ʼಡ್ಯೂನ್ʼ, ʼಕಾಂಗ್ ವರ್ಸಸ್ ಗಾಡ್ಜಿಲ್ಲಾʼ, ಕುಂಗ್ ಫೂ ಪಾಂಡ 4ʼ ಮತ್ತು ಇನ್ಸೈಡ್ ಔಟ್ ಇತರೆ ಚಿತ್ರಗಳು ಹಿಂದಿಯಲ್ಲಿ ಡಬ್‌ ಆಗಿ ರಿಲೀಸ್‌ ಆಗಿವೆ.

*ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next