Advertisement
ದೇಶದ ಯುವಜನತೆಯನ್ನು “ಅಮೃತ ಪೀಳಿಗೆ’ ಎಂದು ಬಣ್ಣಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯವಸಮೂಹದ ಸಶಕ್ತೀಕರಣ ಮತ್ತು ಅವರ ಕನಸುಗಳನ್ನು ನನಸಾಗಿಸಲು ಮತ್ತು ಅವರ ಕೌಶಲವರ್ಧನೆಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರಕಾರ ರೂಪಿಸಿದೆ. ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ವ್ಯಾಪಾರ ಅವಕಾಶಗಳನ್ನು ಬೆಂಬಲಿಸುವ ಆರ್ಥಿಕ ನೀತಿಗಳನ್ನು ಸರಕಾರ ಜಾರಿಗೊಳಿಸಲಿದೆ ಎಂದರು.
Related Articles
Advertisement
ಏಕತಾ ಮಾಲ್ಕೇಂದ್ರ ಸರಕಾರದ ಇನ್ನೊಂದು ಮಹತ್ತರ ಉಪಕ್ರಮವಾದ “ಒಂದು ಜಿಲ್ಲೆ ಒಂದು ಉತ್ಪನ್ನ'(ಒಡಿಒಪಿ)ಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಜ್ಯಗಳ ರಾಜಧಾನಿ ಅಥವಾ ಪ್ರಮುಖ ಪ್ರವಾಸಿ ತಾಣ ಅಥವಾ ಆರ್ಥಿಕ ರಾಜಧಾನಿಗಳಲ್ಲಿ ಯೂನಿಟಿ ಮಾಲ್(ಏಕತಾ ಮಾಲ್)ಗಳನ್ನು ತೆರೆಯಲು ರಾಜ್ಯಗಳಿಗೆ ಉತ್ತೇಜನ ನೀಡಲಾಗುವುದು. ಈ ಕೇಂದ್ರಗಳಲ್ಲಿ ಒಡಿಒಪಿ ಗಳಲ್ಲದೆ ಜಿಐ ಉತ್ಪನ್ನಗಳು, ಇತರ ಕರಕುಶಲ ವಸ್ತುಗಳು, ಮತ್ತು ಇತರ ರಾಜ್ಯಗಳ ಇಂತಹ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಇದು
ಕೂಡ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ನಮ್ಮ ದೇಶ ನೋಡಬನ್ನಿ …
ಕೌಶಲ ಮತ್ತು ಉದ್ಯಮಶೀಲತೆಯನ್ನು ಒಳಗೊಂಡಂತೆ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ “ನಮ್ಮ ದೇಶ ನೋಡಬನ್ನಿ’ (ದೇಖೋ ಅಪ್ನಾ ದೇಶ್) ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ಉದ್ದೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ಈ ಯೋಜನೆಯನ್ನು ರೂಪಿಸಲಾಗಿದ್ದು ಮಧ್ಯಮ ವರ್ಗವನ್ನು ಗುರಿಯಾಗಿರಿಸಿಕೊಂಡು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕಿಂತ ದೇಸೀ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶ ಇದರ ಹಿಂದಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಅಂದರೆ, ಈ ಯೋಜನೆಯ ಮೂಲಕ ಮಧ್ಯಮ ವರ್ಗದ ಮಂದಿ ದೇಶದ ಒಳಗೇ ಪ್ರವಾಸ ಹೋಗಿ, ಪ್ರಮುಖ ತಾಣಗಳನ್ನು ನೋಡಿ ಬರಲಿ ಎಂಬುದು ಇದರ ಪ್ರಮುಖ ಉದ್ದೇಶ. ಜತೆಗೆ, ದೇಶದ ಪ್ರವಾಸಿ ತಾಣಗಳನ್ನೂ ಈ ಯೋಜನೆಯ ಮೂಲಕವೇ ಅಭಿವೃದ್ಧಿಗೊಳಿಸಲಾಗುತ್ತದೆ. ಅಲ್ಲದೆ, ಇದರಲ್ಲಿ ಹೊಟೇಲ್ ದರಗಳ ಇಳಿಕೆ, ಪ್ರಯಾಣ ದರ, ಪ್ರವೇಶ ಶುಲ್ಕವನ್ನು ಕಡಿಮೆಗೊಳಿಸುವುದು. ಜತೆಗೆ ಪ್ರವಾಸಿಗರಿಗೆ ಹಣಕಾಸಿನ ಸೌಲಭ್ಯ ಒದಗಿಸುವುದೂ ಸೇರಿದೆ. ಇದರ ಜತೆಗೆ, ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ “ಸ್ವದೇಶ್ ದರ್ಶನ್’ ಯೋಜನೆಯನ್ನು ಆರಂಭಿಸಲಾಗುವುದು. “ವೈಬ್ರೆಂಟ್ ವಿಲೇಜಸ್’ ಯೋಜನೆಯಡಿಯಲ್ಲಿ ಗಡಿ ಪ್ರದೇಶದ ಹಳ್ಳಿಗಳಲ್ಲಿ ಪ್ರವಾಸೋದ್ಯಮಕ್ಕೆ ಅತ್ಯಗತ್ಯವಾಗಿರುವ ಮೂಲ ಸೌಕರ್ಯ, ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗುವುದು.ವಿದೇಶಿ ಪ್ರವಾಸಿಗರನ್ನು ದೇಶದತ್ತ ಆಕರ್ಷಿಸುವ ಜತೆಯಲ್ಲಿ ದೇಶೀಯ ಪ್ರವಾಸೋದ್ಯಕ್ಕೆ ಹೆಚ್ಚಿನ ಬಲ ತುಂಬುವ ಮೂಲಕ ದೇಶದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಕಲ್ಪ ತೊಡಲಾಗಿದೆ ಎಂದವರು ಹೇಳಿದರು. ಪ್ರವಾಸೋದ್ಯಮ ವಲಯ ಕೂಡ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು ಇದರಿಂದ ಇನ್ನಷ್ಟು ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು. ಪ್ರವಾಸಿ ಮಾರ್ಗದರ್ಶಿ ಆ್ಯಪ್ ಅಭಿವೃದ್ಧಿ
ದೇಶದಲ್ಲಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿನೂತನ ಯೋಜನೆಯೊಂದನ್ನು ಪ್ರಕಟಿಸಿದೆ. ಅಷ್ಟು ಮಾತ್ರವಲ್ಲದೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ಹಲವಾರು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅದರಂತೆ ಕನಿಷ್ಠ 50 ಸ್ಥಳ ಆಯ್ಕೆ ಮಾಡಿ, ಈ ಸ್ಥಳಗಳಿಗೆ ಸಂಪರ್ಕ, ಪ್ರವಾಸಿ ಮಾರ್ಗದರ್ಶ ಕರು, ಗುಣಮಟ್ಟದ ಆಹಾರ ವ್ಯವಸ್ಥೆ, ಪ್ರವಾಸಿಗರ ಸುರಕ್ಷೆ ಸಹಿತ ಸಮಗ್ರ ಮಾಹಿತಿಗಳನ್ನು ಒಳಗೊಂಡಿರುವ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿಯೊಂದು ಸ್ಥಳವನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಈ ಕೇಂದ್ರದತ್ತ ಆಕರ್ಷಿಸಲಾಗುವುದು. ಇದರಿಂದ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸಲಿದೆ ಎಂದು ಸಚಿವರು ಹೇಳಿದರು.