ಏನ್ಲೇಪ್ಪಾ..! ಸುದ್ದಿನ ಇಲ್ಲಲ್ಲ! ಬಾಳಾ ವರ್ಸ ಆತು? ಎಲ್ಲದೀ? ಆರಾಮಾ?’ ಅಂತ ಅವಸರದಾಗ ಕೇಳಿದ ನನಗ ಆ ಕಡಿಂದ ಸಣ್ಣ ದನಿಯಾಗ “ಹಂಗ ನಡದತ್ಲೇ ಹರ ಕಂಗೀ, ಯಾಳ್ಡು ವರ್ಸ ಆತು ಕ್ಯಾನ್ಸರ್ ಬಂದು, 2 ಆಪರೇಷನ್ ಫೇಲ ಆದವೂ, ಇನ್ನೂ ಕೀಮೋ ನಡ್ಯಾಕತ್ತೇತಿ’ ಅಂದ ಅಷ್ಟ..! ಏನು ಮಾತಾಡಬೇಕು? ಯಾವಾಗಾತು? ಹೆಂಗಾತು? ನಿನಗ್ಯಾಕಾತು? ಮುಂದೇನು? ಏನೂ ತಿಳೀಲಿಲ್ಲ.. ಐದತ್ತು ಸೆಕೆಂಡ್ ಸುಮ್ಮನಾಗಿಬಿಟ್ಟೆ, ಅವನೇ ಆ ಕಡಿಂದ “ಇನ್ನೂ ಸತ್ತಿಲ್ಲ ಮಾತಾಡ್ಲೆàಪ್ಪ’ ಅಂದ..! -ಪಿಯುಸಿಯೊಳಗ ಎರಡು ವರ್ಷ ನನ್ನ ಜತೀಗೆ ಓದಿದ ಗೆಳೆಯ. ಕ್ಲಾಸು, ಸಿನಿಮಾ ಟ್ಯೂಷನ್, ಎಕ್ಸಾಂ ಇದ್ದಾಗ ಜತೀಗೆ ಓದೋದು.. ಬಹಳ ಆತ್ಮೀಯರಿದ್ವಿ. ಆಮೇಲೆ ಅವನು ಬಿ. ಎಸ್ಸಿ ಮತ್ತ ನಾನು ಬಿ. ಇ ಬೇರೆ ಬೇರೆ ದಾರಿ ಅಯ್ತು ಜೀವನ. ಕಡೀಗೆ ಐದಾರು ವರ್ಷ ಆದ ಮ್ಯಾಲೆ 2009ರಾಗ ಫೇಸ್‌ಬುಕ್‌ನಾಗ ರಿಕ್ವೆಸ್ಟ್ ಕಳಸಿ ನಂಬರ್ ಕಳಿಸಿದ, ಆಫ್ರಿಕಾದ ಮೈನಿಂಗ್ ಕಂಪನಿಯಲ್ಲಿ ಚೆನ್ನಾಗಿ ದುಡೀತಿದ್ದ. “ಒಳ್ಳೇ ಸಂಬಳ, ದುಡ್ಡು ಉಳಸಾಕತ್ತೇನ್ಲೇ ಮನಿ ಕಟ್ಟಸಬೇಕು’ ಅಂದ ಹಿಂಗ ಮೂರ್ನಾಲ್ಕು ವರ್ಷ ಅವಾಗವಾಗ ಮಾತಾಡತಿದ್ವಿ. 2015ರಾಗ ನನಗ ಮದುವಿ ಆತು, ಅದನ್ನೂ ಹೇಳ್ದಿ. ಒಂದ್ ವರ್ಷ ಆದ ಮೇಲೆ ನಾನು ಕುಟುಂಬ ಸಮೇತ ದುಬೈಗೆ ಬಂದೆ. ಅವಾಗೂ ಮಾತಾಡಿದ್ವಿ, “ವೈನಿ ಹೆಂಗದಾರ ಮಗ ಹೆಂಗದಾನ?’ ಅಂತ ಕೇಳಿದ. “ಮನೆ ಕಟ್ಟಿಸಿದೆ°ಲೇ’ ಅಂದ, “ಆತು ಬಿಡು, ಇನ್ನು ನೀನು ಸಂಸಾರ ಚಲುವು ಮಾಡು’ ಅಂತ ನಾನೂ ಹೇಳಿದೆ. ಆಮೇಲೆ ನಾನು ಇಲ್ದೆ ದುಬೈದಾಗ ಬಿಜಿಯಾದೆ, 2017-18 ಅನ್ನಸ್ತತಿ ಕಡೇ ಸಲ ಮಾತಾಡಿದ್ದು, ಈ ಸಲ ಭಾರತಕ್ಕ ಊರಿಗೆ ಹೋಗಿದ್ದನ್ನ ಫೇಸ್ಬುಕ್ನ್ಯಾಗ ಅಪ್ಡೇಟ್ ಮಾಡಿದ್ದು ನೋಡಿ ಮೆಸೇಜ್ ಮಾಡಿ ಇಂಡಿಯಾ ನಂಬರ್ ಕಳಿಸಿದ, ನಾನು “ಏನಪಾ ಬಾಳಾ ವರ್ಷ ಆತಲ್ಲ’ ಅಂತ ಖುಷಿಯಿಂದ ಇಮಿಡಿಯೇಟ್ ಫೋನ್ ಮಾಡೇ ಬಿಟ್ಟೆ, ಆದರ ಮುಂದಿನದು ಮಾತ್ರ ಎದೆಗಿಳಿದು ಕೊರೆದ ನೋವು..!
ಹತ್ ಹತ್ರ ಆರು ತಿಂಗಳಾತು ಮಾತಾಡಿ..! ಎಲ್ಲಾ ಮರತು ನಡೀತಿರಬೇಕಾದ್ರ, ಏನೋ ಕೆಲಸದ ನಡುವ ಯಾವದೊ ಪುಸ್ತಕ ಓದಬೇಕಾದ್ರ ಯಾವುದೋ ಪೋಸ್ಟ್ ಯಾವುದೋ ವಿಡಿಯೋ ನೋಡಿ ಥಟ್ ಅಂತ ನೆನಪಾಗಿ ಕರುಳು ಹಿಂಡಿದಹಂಗಾಕತಿ ಕೀಮೋ ಮಾಡಿದ್ರ ಜೀವ ಹೋದಂಗಾಕತ್ಲೆà, ಮುಂದ ಏನೇನೈತೊ ಗೊತ್ತಿಲ್ಲ ಅಂತ ಹೇಳಿದ್ದು ಕಿವಿಗೆ ಅಪ್ಪಳಸ್ತತಿ, ಫೋನ್ ಮೆಸೇಜ್ ಮಾಡಾಕ ಧೈರ್ಯ ಆಗೋದಿಲ್ಲ.. ! ಮತ್ತೆ ಉಸರು ಬಿಟ್ಟು ಒಳ್ಳೇದಾಗಲಿ ಅಂತ ಬೇಡಿಕೊಳ್ಳತಾ..
– ಪ್ರಭುಹರಕಂಗಿ,ದುಬೈ