Advertisement

ಗಾಂಧಿ ಕೋಟೆಗೆ ಬಿಜೆಪಿ ಲಗ್ಗೆ?ರಾಯ್‌ಬರೇಲಿ 6 ಕ್ಷೇತ್ರಗಳನ್ನು ತೆಕ್ಕೆಗೆ ಪಡೆಯಲು ಕಾರ್ಯತಂತ್ರ

11:34 PM Feb 01, 2022 | Team Udayavani |

ಹೊಸದಿಲ್ಲಿ: ಅಮೇಠಿಯಲ್ಲಿ ಕಾಂಗ್ರೆಸ್‌ಗೆ ಸೋಲಿನ ರುಚಿ ಉಣಿಸಿರುವ ಬಿಜೆಪಿ, ಈಗ ಕಾಂಗ್ರೆಸ್‌ನ ಮತ್ತೊಂದು ಭದ್ರಕೋಟೆಯಾದ ರಾಯ್‌ಬರೇಲಿಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳನ್ನು ತೆಕ್ಕೆಗೆ ಪಡೆದುಕೊಳ್ಳಲು ಸಜ್ಜಾಗಿದೆ.

Advertisement

ಉತ್ತರಪ್ರದೇಶದಲ್ಲಿ ಈಗ ಉಳಿದಿರುವ ಗಾಂಧಿ ಕುಟುಂಬದ ಏಕೈಕ ಕೋಟೆಯೆಂದರೆ ರಾಯ್‌ಬರೇಲಿ. 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ಕೈ ತಪ್ಪಿ, ಸ್ಮತಿ ಇರಾನಿ ತೆಕ್ಕೆಗೆ ಬಿದ್ದಿತ್ತು. ರಾಯ್‌ಬರೇಲಿಯಲ್ಲಿ ಮಾತ್ರ ಕಾಂಗ್ರೆಸ್‌ ಜಯ ಸಾಧಿಸಿತ್ತು. 2017ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 2 ವಿಧಾನಸಭಾ ಸೀಟುಗಳು (ರಾಯ್‌ಬರೇಲಿ ಸಾದರ್‌ ಮತ್ತು ಹರ್‌ಚಂದ್‌ಪುರ) ಮಾತ್ರ “ಕೈ’ ಹಿಡಿದಿದ್ದವು. ಈ ಕ್ಷೇತ್ರಗಳಲ್ಲಿ ಗೆದ್ದಿದ್ದ ಇಬ್ಬರು ಅಭ್ಯರ್ಥಿಗಳೂ ಈಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಯ್‌ಬರೇಲಿ ವ್ಯಾಪ್ತಿಯಲ್ಲಿ 6 ಕ್ಷೇತ್ರಗಳು ಬರುತ್ತವೆ. ಈ ಎಲ್ಲ ಕ್ಷೇತ್ರಗಳಲ್ಲೂ ಜಯ ಸಾಧಿಸಲು ಹಲವು ತಿಂಗಳುಗಳಿಂದಲೇ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಾ ಬಂದಿದೆ. ಬೇರು ಮಟ್ಟದಲ್ಲೇ ಪಕ್ಷ ಸಂಘಟನೆ ಕೆಲಸ ನಡೆದಿದೆ. 2022ರ ಅಸೆಂಬ್ಲಿ ಚುನಾವಣೆಯೇ ನಮ್ಮ ಈಗಿನ ಗುರಿ. ಅದಾದ ಬಳಿಕ ನಮ್ಮದು “ಮಿಷನ್‌ 2024′ ಎಂದು ಬಿಜೆಪಿ ಜಿಲ್ಲಾ ಧ್ಯಕ್ಷ ರಾಮ್‌ದೇವ್‌ ಪಾಲ್‌ ಹೇಳಿದ್ದಾರೆ.

ನಮಗೆ “ನೋಟಾ’ ಗತಿಯೆಂದ ರೈತರು! ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು “ನೋಟಾ’ (ಮೇಲಿನ ಯಾರೂ ಅಲ್ಲ) ಆಯ್ಕೆಗೇ ಮತ ಚಲಾಯಿಸುತ್ತೇವೆ ಎಂದು ಉ.ಪ್ರದೇಶದ ಲಖೀಂಪುರದ ರೈತರು ಹೇಳಿದ್ದಾರೆ. ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ನಮ್ಮನ್ನು ವಂಚಿಸಿದೆ. ಉಳಿದ ಪಕ್ಷಗಳು “ಪರಿಣಾಮಕಾರಿಯಾಗಿಲ್ಲ’. ಹೀಗಾಗಿ ನಾವು ಬಿಜೆಪಿಗೂ ಮತ ಹಾಕಲ್ಲ, ಎಸ್ಪಿಗೂ ಹಾಕಲ್ಲ. ನೋಟಾವನ್ನೇ ಆಯ್ಕೆ ಮಾಡುತ್ತೇವೆ ಎಂದು ರೈತರು ಹೇಳಿದ್ದಾರೆ.

50,000 ಮತಗಳಿಂದ ಗೆಲ್ಲಿಸಿ
ಸಾಹಿಬ್‌ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು, ತಮ್ಮನ್ನು ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ. ಸಾಹಿಬ್‌ನಲ್ಲಿ ಛನ್ನಿ ಸೋಲು ಖಚಿತ ಎಂದು ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಹೇಳಿದ ಬೆನ್ನಲ್ಲೇ ಚನ್ನಿಯಿಂದ ಈ ಕೋರಿಕೆ ಹೊರಬಿದ್ದಿದೆ. “ನಾನು ನಿಮ್ಮ ಮಗ ಮತ್ತು ಸಹೋದರ. 15 ವರ್ಷಗಳಿಂದಲೂ ನಿಮ್ಮ ಜತೆಗಿದ್ದೇನೆ. ನಿಮ್ಮನ್ನು ಬಿಟ್ಟು ನಾನು ಎಲ್ಲೂ ಹೋಗಿಲ್ಲ. ನೀವಿಲ್ಲದೆ ನಾನು ಏನೂ ಅಲ್ಲ’ ಎಂದು ಭಾವುಕರಾಗಿ ನುಡಿದಿದ್ದಾರೆ.

ನಿಮಗಿರುವುದು ಎರಡೇ ಆಯ್ಕೆ
“ಗೋವಾದ ಜನರಿಗೆ ಇರುವುದು ಎರಡೇ ಆಯ್ಕೆ. ಒಂದು ಬಿಜೆಪಿ, ಮತ್ತೊಂದು ಆಪ್‌. ಒಂದು ವೇಳೆ ನೀವು ಆಮ್‌ ಆದ್ಮಿ ಪಕ್ಷಕ್ಕೆ ಮತ ಹಾಕದೇ ಇದ್ದರೆ, ನೀವು ಪರೋಕ್ಷವಾಗಿ ಬಿಜೆಪಿಗೇ ಮತ ಚಲಾಯಿಸಿದಂತೆ’ ಎಂದು ಆಪ್‌ ನಾಯಕ, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಮಂಗಳವಾರ ಗೋವಾದಲ್ಲಿ ಚುನಾವಣ ಪ್ರಚಾರದಲ್ಲಿ ಪಾಲ್ಗೊಂಡ ಅವರು, “ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಗೆದ್ದರೂ ಮುಂದೆ ಬಿಜೆಪಿಗೇ ಹೋಗುತ್ತಾರೆ. ಹೀಗಾಗಿ ನಮ್ಮ ಪಕ್ಷಕ್ಕೆ ಓಟು ಹಾಕದಿದ್ದರೆ, ನೀವೆಲ್ಲರೂ ಬಿಜೆಪಿಗೇ ಮತ ಹಾಕಿದಂತೆ’ ಎಂದಿದ್ದಾರೆ.

Advertisement

ಪ್ರಚಾರಕ್ಕೆ ಧಮಿ, ಖಟ್ಟರ್‌ ಚಾಲನೆ
ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಹಾಗೂ ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಮಂಗಳವಾರ ರಾಜ್ಯದಲ್ಲಿ ಬಿಜೆಪಿ ಚುನಾವಣ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಗರ್ವಾಲ್‌, ಕುಮಾನ್‌ ಪ್ರದೇಶಗಳಲ್ಲಿ ಸಾರ್ವಜನಿಕ ರ್‍ಯಾಲಿಗಳನ್ನು ಆಯೋಜಿಸಿ, ಮನೆ-ಮನೆ ಪ್ರಚಾರವನ್ನೂ ಕೈಗೊಂಡಿದ್ದಾರೆ.

ಉತ್ತರಪ್ರದೇಶದ ಜನರು ಈಗಾಗಲೇ ಎಸ್‌ಪಿ, ಬಿಎಸ್‌ಪಿ ಮತ್ತು ಬಿಜೆಪಿಯ ಆಡಳಿತವನ್ನು ನೋಡಿದ್ದಾರೆ. ಈಗ ಇಲ್ಲಿನ ಜನರಿಗೆ ಕಾಂಗ್ರೆಸ್‌ ಅತ್ಯುತ್ತಮ ಪರ್ಯಾಯ ಪಕ್ಷವಾಗಿದ್ದು, ಕಾಂಗ್ರೆಸ್‌ಗೂ ಒಂದು ಛಾನ್ಸ್‌ ಕೊಡುತ್ತೀರೆಂಬ ವಿಶ್ವಾಸವಿದೆ.
-ಸಚಿನ್‌ ಪೈಲಟ್‌, ಕಾಂಗ್ರೆಸ್‌ ನಾಯಕ

ಉಚಿತ ಡಬಲ್‌ ಡೋಸ್‌ ಲಸಿಕೆಯ ಮಾದರಿಯಲ್ಲೇ, ಇನ್ನು ಮುಂದೆ ಉ.ಪ್ರದೇಶದ ಪ್ರತೀ ಕುಟುಂಬಕ್ಕೂ ತಿಂಗಳಿಗೆ ಡಬಲ್‌ ಡೋಸ್‌ ಪಡಿತರ ನೀಡಲಾಗುತ್ತದೆ.
-ಯೋಗಿ ಆದಿತ್ಯನಾಥ್‌, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next