Advertisement

ಯುಎಸ್‌ ಓಪನ್‌ ಡ್ರಾ ಪ್ರಕಟ; ಜೊಕೋ ಮೊದಲ ಎದುರಾಳಿ ದಮಿರ್‌ ಜುಮುರ್‌

07:10 PM Aug 28, 2020 | mahesh |

ನ್ಯೂಯಾರ್ಕ್‌: ಕೋವಿಡ್ ಕಾಲದ ಮೊದಲ ಗ್ರಾನ್‌ಸ್ಲಾಮ್‌ ಪಂದ್ಯಾವಳಿಗೆ ಕ್ಷಣಗಣನೆ ಆರಂಭಗೊಂಡಿದೆ. ಸೋಮವಾರದಿಂದ ಯುಎಸ್‌ ಓಪನ್‌ ಪಂದ್ಯಾವಳಿ ಮೊದಲ್ಗೊಳ್ಳಲಿದ್ದು, ಇದರ ಡ್ರಾ ನಡೆದಿದೆ.

Advertisement

ಈ ವರ್ಷದ ಏಕೈಕ ಗ್ರಾನ್‌ಸ್ಲಾಮ್‌ ವಿಜೇತ ಟೆನಿಸಿಗ, ವಿಶ್ವದ ನಂ. 1 ಆಟಗಾರ ನೊವಾಕ್‌ ಜೊಕೋವಿಕ್‌ ಮೊದಲ ಸುತ್ತಿನಲ್ಲಿ ಬೋಸ್ನಿಯಾದ ದಮಿರ್‌ ಜುಮುರ್‌ ವಿರುದ್ಧ ಆಡಲಿದ್ದಾರೆ. ಜೊಕೋವಿಕ್‌ ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌, 5 ಬಾರಿಯ ವಿಜೇತ ರೋಜರ್‌ ಫೆಡರರ್‌ ಮೊದಲಾದವರೆಲ್ಲ ಈ ಪಂದ್ಯಾವಳಿಯಿಂದ ದೂರ ಉಳಿದಿರುವ ಕಾರಣ, ಜೊಕೋವಿಕ್‌ ಯುಎಸ್‌ ಓಪನ್‌ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದಾರೆ.

ಕಳೆದ ವರ್ಷದ ರನ್ನರ್‌ ಅಪ್‌ ಡ್ಯಾನಿಲ್‌ ಮೆಡ್ವಡೇವ್‌ 3ನೇ, ಸ್ಟೆಫ‌ನಸ್‌ ಸಿಸಿಪಸ್‌ 4ನೇ ಹಾಗೂ ಅಲೆಕ್ಸಾಂಡರ್‌ ಜ್ವೆರೇವ್‌ 5ನೇ ಶ್ರೇಯಾಂಕ ಪಡೆದಿದ್ದಾರೆ. ಇವರಲ್ಲಿ ಜ್ವೆರೇವ್‌ಗೆ ಮೊದಲ ಸುತ್ತಿನಲ್ಲೇ ಕಠಿನ ಸವಾಲು ಎದುರಾಗಿದೆ. ಅವರು 2017ರ ಫೈನಲಿಸ್ಟ್‌, ಬಿಗ್‌ ಸರ್ವಿಂಗ್‌ ಖ್ಯಾತಿಯ ಕೆವಿನ್‌ ಆ್ಯಂಡರ್ಸನ್‌ ವಿರುದ್ಧ ಸೆಣಸಲಿದ್ದಾರೆ. ಡೊಮಿನಿಕ್‌ ಥೀಮ್‌ ಸ್ಪೇನಿನ ಜೇಮ್‌ ಮುನಾರ್‌ ವಿರುದ್ಧ, ಆ್ಯಂಡಿ ಮರ್ರೆ ಜಪಾನಿನ ಯೊಶಿಟೊ ನಿಶಿಯೋಕ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ಪ್ಲಿಸ್ಕೋವಾಗೆ ಅಗ್ರ ಶ್ರೇಯಾಂಕ
ಅಗ್ರ 10 ಆಟಗಾರ್ತಿಯರಲ್ಲಿ 6 ಮಂದಿ ದೂರ ಉಳಿದಿರುವ ಕಾರಣ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾಗೆ ವನಿತಾ ಸಿಂಗಲ್ಸ್‌ ವಿಭಾಗದ ಅಗ್ರ ಶ್ರೇಯಾಂಕ ಲಭಿಸಿದೆ. ಇವರ ಮೊದಲ ಸುತ್ತಿನ ಎದುರಾಳಿ ಉಕ್ರೇನಿನ ಅನೇಲಿನಾ ಕಲಿನಿನಾ. ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಸೋಫಿಯಾ ಕೆನಿನ್‌ 2ನೇ ಶ್ರೇಯಾಂಕ ಪಡೆದಿದ್ದು, ಬೆಲ್ಜಿಯಂನ ಯಾನಿನಾ ವಿಕ್‌ವೆುಯರ್‌ ವಿರುದ್ಧ ಆಡಲಿದ್ದಾರೆ. 24ನೇ ಗ್ರಾನ್‌ಸ್ಲಾಮ್‌ ದಾಖಲೆಯನ್ನು ಸರಿದೂಗಿಸುವ ಹಾದಿಯಲ್ಲಿರುವ ತವರಿನ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ 3ನೇ ಶ್ರೇಯಾಂಕ ಪಡೆದಿದ್ದಾರೆ. ತಮ್ಮದೇ ದೇಶದ ಕ್ರಿಸ್ಟಿ ಆ್ಯನ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ವೀನಸ್‌ ವಿಲಿಯಮ್ಸ್‌ 40ನೇ ವರ್ಷದಲ್ಲಿ 22ನೇ ಯುಎಸ್‌ ಓಪನ್‌ ಆಡಲಿದ್ದು, 20ನೇ ಶ್ರೇಯಾಂಕದ ಕ್ಯಾರೊಲಿನಾ ಮುಖೋವಾ ವಿರುದ್ಧ ಆಡಲಿದ್ದಾರೆ. ಮಾಜಿ ಚಾಂಪಿಯನ್‌ ನವೋಮಿ ಒಸಾಕಾ ಎದುರಾಳಿ ಜಪಾನಿನವರೇ ಆದ ಮಿಸಾಕಿ ಡೋಯಿ.

Advertisement

Udayavani is now on Telegram. Click here to join our channel and stay updated with the latest news.

Next