Advertisement

ವಿಳಂಬವಾಗಿ ಶೈಕ್ಷಣಿಕ ವರ್ಷ ಶುರು? ; ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್‌ ಸುಳಿವು

11:58 AM Apr 20, 2020 | Hari Prasad |

ಹೊಸದಿಲ್ಲಿ: ದೇಶದಲ್ಲಿ ಸದ್ಯದ ಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷ ವಿಳಂಬವಾಗಿ ಶುರುವಾಗುವ ಸಾಧ್ಯತೆ ಇದೆ. ಕಾಲೇಜುಗಳು ಮತ್ತು ವಿವಿಗಳಲ್ಲಿನ ಫೈನಲ್‌ ಸೆಮೆಸ್ಟರ್‌ನ ಪರೀಕ್ಷೆಗಳನ್ನು ಅವುಗಳು ಪುನಾರಂಭವಾದ ಬಳಿಕ ನಡೆಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್‌ ಪೋಖ್ರಿಯಾಲ್‌ ತಿಳಿಸಿದ್ದಾರೆ.

Advertisement

‘ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಲೇಜು, ವಿವಿಗಳು ಪುನಾರಂಭವಾದ ಬಳಿಕ ಅಂತಿಮ ಹಂತದ ಪರೀಕ್ಷೆಗಳು ನಡೆಯಲಿವೆ. ಬಳಿಕ ಹೊಸತಾಗಿ ಕೋರ್ಸ್‌ ಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆಲ್ಲ ಸರಿ ಸುಮಾರು ಒಂದು ತಿಂಗಳು ಬೇಕಾಗಬಹುದು. ಹಾಲಿ ಇರುವ ಬ್ಯಾಚ್‌ಗಳಿಗೆ ಕೊಂಚ ಬೇಗನೇ ತರಗತಿಗಳು ಶುರುವಾಗಲಿದೆ ಎಂದಿದ್ದಾರೆ.

ಜೂನ್‌ನಲ್ಲಿ ಪರೀಕ್ಷೆ: ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿ), ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಇನ್ ಫಾರ್ಮೇಶನ್‌ ಟೆಕ್ನಾಲಜಿ (ಐಐಐಟಿ) ಹಾಗೂ ಕೇಂದ್ರದ ಅನುದಾನ ಆಧಾರಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ (ಸಿಎಫ್ಟಿಐ) ಪ್ರವೇಶಕ್ಕಾಗಿ ಪ್ರತಿ ವರ್ಷ ಆಯೋಜಿಸಲಾಗುವ ಜಾಯಿಂಟ್‌ ಎಂಟ್ರೆನ್ಸ್‌ ಎಕ್ಸಾಮಿನೇಷನ್‌ – ಮೈನ್‌ (ಜೆಇಇ-ಮುಖ್ಯ ಪರೀಕ್ಷೆ) ಈ ವರ್ಷ ಜೂನ್‌ನಲ್ಲಿ ನಡೆಯಬಹುದು.

ಈ ಕುರಿತಂತೆ, ಎಲ್ಲಾ ಐಐಟಿಗಳು, ಎನ್‌ಐಟಿಗಳು, ಸಿಎಟಿಐಗಳು ಹಾಗೂ ಇನ್ನಿತರ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆಯೇ ನಮ್ಮ ಧ್ಯೇಯವಾಗಿದೆ ಎಂದಿದ್ದಾರೆ.

ಪರಿಶೀಲನೆ: ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳಿಗೆ 2021ರಲ್ಲಿ ವಿಶೇಷವಾಗಿ 10 ಮತ್ತು 12ನೇ
ತರಗತಿಗಳಿಗೆ ವಾರ್ಷಿಕ ಪರೀಕ್ಷೆಯ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿ ಕಡಿಮೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ. ಈ ಬಗ್ಗೆ ಮಂಡಳಿ ಕಾರ್ಯೋನ್ಮುಖವಾಗಿದೆ ಎಂದಿದ್ದಾರೆ ಪೋಖ್ರಿಯಾಲ್‌.

Advertisement

ಸ್ವಯಂ ಪ್ರಭ ಚಾನೆಲ್‌ ಮೂಲಕ ಶೈಕ್ಷಣಿಕ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಟಿವಿ ಇಲ್ಲದೇ ಇರುವ ವಿದ್ಯಾರ್ಥಿಗಳಿಗೆ ಆಕಾಶವಾಣಿ ಮೂಲಕ ಪಾಠ ಪ್ರವಚನ ನಡೆಸುವುದಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರಗಳ ಜತೆಗೆ ಸಹಭಾಗಿತ್ವ ಸಾಧಿಸಲು ಯತ್ನಗಳು ನಡೆದಿವೆ ಎಂದರು.

ಉದ್ಯೋಗ ಆಹ್ವಾನ ವಾಪಸ್‌ ಬೇಡ
ಕ್ಯಾಂಪಸ್‌ಗಳಿಂದ ಕಂಪೆನಿಗಳಿಗೆ ಉದ್ಯೋಗಕ್ಕೆ ಆಯ್ಕೆಯಾದವರನ್ನು ನಿರಾಕರಿಸುವುದು ಬೇಡ ಎಂದು ಈಗಾಗಲೇ ಮನವಿ ಮಾಡಲಾಗಿದೆ. ಕೋವಿಡ್ 19 ವೈರಸ್ ನಿಂದ ಅರ್ಥವ್ಯವಸ್ಥೆಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಐಐಟಿಯ ನಿರ್ದೇಶಕರ ಜತೆಗೆ ಕೂಡ ಚರ್ಚೆ ನಡೆಸಲಾಗಿದೆ. ಸದ್ಯದ ಪರಿಸ್ಥಿತಿಯಿಂದ ಕ್ಯಾಂಪಸ್‌ ನೇಮಕಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂದು ಪೋಖ್ರಿಯಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next