Advertisement

2019ಕ್ಕೂಮೋದಿ, ಶಾ ದರ್ಬಾರ್‌?

10:20 AM Mar 13, 2017 | Team Udayavani |

ನವದೆಹಲಿ: “ಪ್ರಸ್ತುತ ಪರಿಸ್ಥಿತಿ ನೋಡಿದರೆ 2019ಕ್ಕೆ ಬಿಜೆಪಿ ಅಥವಾ ಮೋದಿ ಅವರನ್ನು ಎದುರಿಸಲು ಯಾವ ನಾಯಕರೂ ಇಲ್ಲವೆಂದೆನಿಸುತ್ತದೆ. ಹೀಗಾಗಿ 2019 ಅನ್ನು ಮರೆತು 2024ಕ್ಕೆ ಸಿದ್ಧವಾಗಬಹುದು”.

Advertisement

ಇದು ಪಂಚರಾಜ್ಯಗಳ ಫ‌ಲಿತಾಂಶ ಹೊರಬೀಳುತ್ತಲೇ ಶನಿವಾರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಮಾಡಿದ ಟ್ವೀಟ್‌. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ಗಮನಿಸಿ, ಮಾಡಲಾಗಿರುವ ಈ ಟ್ವೀಟ್‌ನಲ್ಲಿ ಭಾರಿ ಗೂಢಾರ್ಥಗಳೇ ಇವೆ. ಉತ್ತರ ಪ್ರದೇಶದ ಆದಿಯಾಗಿ ಹಿಂದಿನ ಹಲವಾರು ಚುನಾವಣೆಗಳಲ್ಲಿನ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಸೋಲು ಕೂಡ ಈ ಟ್ವೀಟಿನಲ್ಲಿ ಅಡಗಿದೆ. ಹೀಗಾಗಿಯೇ ಅವರು, 2019ರ ಲೋಕಸಭೆ ಚುನಾವಣೆ ಮರೆತು, 2024 ಲೋಕಸಭೆ ಚುನಾವಣೆಗೆ ಸಿದ್ಧವಾಗಬಹುದು ಎಂದು ಟ್ವೀಟ್‌ ಮಾಡಿರ್ಲಿಕ್ಕೂ ಸಾಕು!

ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ದೇಶದಲ್ಲಿ ಯಾವೊಬ್ಬ ನಾಯಕರೂ ಇಲ್ಲವೇ ಎಂಬ ಪ್ರಶ್ನೆ ಕೂಡ ಪ್ರಸಕ್ತ ಸನ್ನಿವೇಶದಲ್ಲಿ ಎದುರಾಗುತ್ತದೆ. ಬಿಹಾರ ವಿಧಾನಸಭೆ ಚುನಾವಣೆ ವೇಳೆ ಹುಟ್ಟಿಕೊಂಡಿದ್ದ ಮಹಾಘಟಬಂಧನ್‌ ಕೂಡ ಮೋದಿಗೆ
ಪರ್ಯಾಯವಾಗಬಲ್ಲದು ಎಂದು ಭಾವಿಸಲಾಗಿತ್ತು. ಆದರೆ ಅದರೊಳಗಿನ ನಾಯಕರ ಮಹತ್ವಾಕಾಂಕ್ಷೆ ಗಳು ಮೋದಿಗೆ ಪರ್ಯಾಯವಾಗಿ ನಾಯಕರೊ ಬ್ಬರು ರೂಪುಗೊಳ್ಳಲು ಬಿಡುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ ಅಖಂಡ ಭಾರತದಲ್ಲಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲ ನಾಯಕರು ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಾಗಿ, ರಾಹುಲ್‌ ಗಾಂಧಿ ಹೊರತುಪಡಿಸಿ, ನಿತೀಶ್‌ ಕುಮಾರ್‌, ಮುಲಾಯಂ ಸಿಂಗ್‌ಯಾದವ್‌, ಕೇಜ್ರಿವಾಲ್‌,ಮಾಯಾವತಿ, ಮಮತಾಬ್ಯಾನರ್ಜಿ ಕಾಣಿಸುತ್ತಾರೆ. 

ಇಲ್ಲಿ ಕಾಂಗ್ರೆಸ್ ಮಾತ್ರ ಎಲ್ಲ ರಾಜ್ಯಗಳಲ್ಲೂ ಕಾಣಸಿಗುವ ಪಕ್ಷ. ಉಳಿದಂತೆ ನಿತೀಶ್‌, ಮಾಯಾ, ಮುಲಾಯಂ, ಕೇಜ್ರಿವಾಲ್‌, ಮಮತಾ ತಮ್ಮ ತಮ್ಮ ರಾಜ್ಯಗಳಿಗಷ್ಟೇ ಸೀಮಿತವಾ ಗುತ್ತಾರೆ. ಆದರೂ,ಇವರೆಲ್ಲರೂ ಸೇರಿ ನಿತೀಶ್‌ ಕುಮಾರ್‌ ಅವರನ್ನು  ಮೋದಿಗೆ ಪರ್ಯಾಯವಾಗಿ ರೂಪಿಸಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಾರೆ. ಈ ಚರ್ಚೆ ಉತ್ತರ ಪ್ರದೇಶ ಚುನಾವಣೆ ಫ‌ಲಿತಾಂಶದ ಬಳಿಕವೂ ಮತ್ತೆ ನಡೆದಿದೆ. ಆದರೆ ತೃತೀಯ ರಂಗದ ಈ ನಾಯಕರಲ್ಲೇ ಒಡ ಕುಗಳಿವೆ. ಏಕೆಂದರೆ, ಇವರೆಲ್ಲರಿಗೂ ಒಂದಲ್ಲ ಒಂದು ದಿನ ಪ್ರಧಾನಿಯಾಗಲೇಬೇಕು ಎಂಬ ಮಹದಾಸೆ ಇದೆ. ಈ ಆಸೆ ಅದುಮಿಕೊಂಡು ಒಬ್ಬ ನಾಯಕರನ್ನು ಬೆಳೆಸುವುದು ಅಸಾಧ್ಯದ ಮಾತು ಎಂದೇ ಹೇಳಲಾಗುತ್ತಿದೆ. ಹೀಗಾಗಿ ನಿತೀಶ್‌ ಕುಮಾರ್‌ ಅವರನ್ನು ತಮ್ಮ ನಾಯಕರನ್ನಾಗಿ ಆರಿಸುವುದು ಕಷ್ಟ. ಇಲ್ಲಿ ಮುಲಾಯಂ ಅವರೂ ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದರೆ, ಕೇಜ್ರಿವಾಲ್‌, ಮೋದಿ ಯನ್ನೇ ಸೋಲಿಸುತ್ತೇನೆ ಎಂದು ವಾರಾಣಸಿಗೆ ಹೋಗಿ ಬಂದವರು. 

ಮಮತಾ ಬ್ಯಾನರ್ಜಿ ಮತ್ತು ಮಾಯಾವತಿ ಅವರಿಗೆ ಪ್ರಧಾನಿಯಾಗುವ ಆಸೆ ಇದ್ದರೂ ತೋರ್ಪಡಿಸಿ ಕೊಳ್ಳಲಾಗದ ಸ್ಥಿತಿ ಇದೆ. ಕಾರಣ ಮಾಯಾಗೆ ಮುಲಾಯಂ ಬೆಂಬಲ ಕೊಡುವುದು ಕಷ್ಟ. ಹಾಗೆಯೇ ಮಮತಾಗೆ ಎಡ ಪಕ್ಷಗಳ ಸಹಕಾರ ಸಿಗಲ್ಲ. ಈ ರೀತಿಯ ಒಂದಿಲ್ಲೊಂದು ಕಾರಣದಿಂದಾಗಿ ತೃತೀಯ ರಂಗ ಮುಂದೆ ಬರುತ್ತಿಲ್ಲ, ಒಗ್ಗೂಡುತ್ತಿಲ್ಲ ಎನ್ನಲಾಗುತ್ತಿದೆ.

Advertisement

ಆದರೆ ಇದುವರೆಗೂ ರಾಹುಲ್‌ ಗಾಂಧಿ ಅವರನ್ನೇ ಪಾನ್‌ ಇಂಡಿಯಾ ನಾಯಕರನ್ನಾಗಿ ಬಿಂಬಿಸಿ ನೋಡಲಾ ಗುತ್ತಿತ್ತು. ಆದರೆ ಇವರೇ ಹೊಣೆ ತೆಗೆದುಕೊಂಡು ಎದುರಿಸಿದ ಬಹುತೇಕ ಚುನಾವಣೆಗಳಲ್ಲಿ ವಿಫ‌ಲರಾಗಿದ್ದಾರೆ. ಹೀಗಾಗಿ ಮುಂದೆ ರಾಹುಲ್‌ ಅವರನ್ನೂ ತೃತೀಯ ರಂಗದ ನಾಯಕರು ಒಪ್ಪಿಕೊಳ್ಳುತ್ತಾರೆಯೇ ಎಂಬ ಸಂದೇಹಗಳು ಸೃಷ್ಟಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next