Advertisement

ಬೆನ್ ‘ಧಮ್’ ಪವರ್!: ಸೂಪರ್‌ ಓವರಿಗೂ ಮೊದಲು ‘ಸಿಗರೇಟ್‌ ಬ್ರೇಕ್‌’ಪಡೆದಿದ್ದ ಸ್ಟೋಕ್ಸ್‌!

02:35 AM Jul 15, 2020 | Hari Prasad |

ಲಂಡನ್: 2019ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಅನೇಕ ಕಾರಣಗಳಿಗಾಗಿ ಮರೆಯುವಂತಿಲ್ಲ.

Advertisement

ಇದರಷ್ಟು ರೋಚಕವಾಗಿ ಸಾಗಿದ ಹಾಗೂ ಇಷ್ಟೊಂದು ವಿವಾದಾತ್ಮಕ ಕ್ರಿಕೆಟ್‌ ಫೈನಲ್‌ ಖಂಡಿತ ಇನ್ನೊಂದಿಲ್ಲ! ಇದಕ್ಕೆ ಮಂಗಳವಾರ ಮೊದಲ ವರ್ಷದ ಸಂಭ್ರಮ.

ಆದರೆ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಂಗ್ಲೆಂಡ್‌ ಇಲ್ಲ. ಕಾರಣ, ವೆಸ್ಟ್‌ ಇಂಡೀಸ್‌ ವಿರುದ್ಧ ಸೌತಾಂಪ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಅನುಭವಿಸಿದ ಸೋಲು.

ಬೆನ್‌ ಸ್ಟೋಕ್ಸ್‌ ನಾಯಕತ್ವದ ಮೊದಲ ಟೆಸ್ಟ್‌ ಪಂದ್ಯದಲ್ಲೇ ಇಂಗ್ಲೆಂಡ್‌ ಆಘಾತಕಾರಿ ಸೋಲಿಗೆ ತುತ್ತಾಗಿದೆ. ಇದೇ ಸ್ಟೋಕ್ಸ್‌ ವರ್ಷದ ಹಿಂದೆ ಇಂಗ್ಲೆಂಡಿನ ವಿಶ್ವಕಪ್‌ ಗೆಲುವಿನ ರೂವಾರಿಯಾಗಿದ್ದರು!

ಆದರೆ ಅಂದಿನ ಫೈನಲ್‌ ಪಂದ್ಯದ ಸೂಪರ್‌ ಓವರ್‌ಗೂ ಮುನ್ನ ಏನು ನಡೆಯಿತು, ಇಂಗ್ಲೆಂಡ್‌ ಮತ್ತು ಬೆನ್‌ ಸ್ಟೋಕ್ಸ್‌ ಈ ಸೂಪರ್‌ ಓವರ್‌ ಎದುರಿಸಲು ಮಾನಸಿಕವಾಗಿ ಹೇಗೆ ಸಿದ್ಧರಾದರು…

Advertisement

ಇಂಥ ಸ್ವಾರಸ್ಯಕರ ಘಟನೆಗಳನ್ನೊಳಗೊಂಡ ಪುಸ್ತಕವೊಂದು ಬಿಡುಗಡೆಯಾಗಿದೆ. ಹೆಸರು-‘ಮಾರ್ಗನ್ಸ್‌ ಮೆನ್‌: ದ ಸ್ಟೋರಿ ಆಫ್‌ ಇಂಗ್ಲೆಂಡ್ಸ್‌ ರೈಸ್‌ ಫ್ರಮ್‌ ಕ್ರಿಕೆಟ್‌ ವರ್ಲ್ಡ್ ಕಪ್‌ ಹ್ಯುಮಿಲಿಯೇಶನ್‌ ಟು ಗ್ಲೋರಿ’. ನಿಕ್‌ ಹೌಲ್ಟ್ ಮತ್ತು ಸ್ಟೀವ್‌ ಜೇಮ್ಸ್‌ ಸೇರಿಕೊಂಡು ಈ ಪುಸ್ತಕ ಬರೆದಿದ್ದಾರೆ.

ಒತ್ತಡ ನೀಗಿಸುವ ಪ್ರಯತ್ನ
‘ಲಾರ್ಡ್ಸ್‌ ಕ್ರೀಡಾಂಗಣ 27 ಸಾವಿರ ವೀಕ್ಷಕರಿಂದ ಕಿಕ್ಕಿರಿದಿತ್ತು. ಸೂಪರ್‌ ಓವರ್‌ ಘೋಷಣೆಯಾದಾಗ ಟಿವಿ ಕೆಮರಾಗಳೆಲ್ಲ ಆಟಗಾರರ ಮೇಲೆಯೇ ಫೋಕಸ್‌ ಆಗಿದ್ದವು. ಲಾರ್ಡ್ಸ್‌ ಲಾಂಗ್‌ ರೂಮ್‌, ಅಲ್ಲಿನ ಡ್ರೆಸ್ಸಿಂಗ್‌ ರೂಮ್‌ಗಳನ್ನು ಪದೇಪದೆ ತೋರಿಸಲಾಗುತ್ತಿತ್ತು. ಆಟಗಾರರೆಲ್ಲ ಭಾರೀ ಒತ್ತಡದಲ್ಲಿದ್ದರು. ಮಾರ್ಗನ್‌ ಎಲ್ಲರ ಒತ್ತಡವನ್ನು ನೀಗಿಸುವ ಪ್ರಯತ್ನದಲ್ಲಿದ್ದರು…’ ಎಂದು ಬರೆದ ಲೇಖಕರು ಬಳಿಕ ಸ್ಟೋಕ್ಸ್‌ ಸ್ಥಿತಿಯತ್ತ ಲೇಖನಿ ಓಡಿಸಿದ್ದರು.

‘ಸ್ಟೋಕ್ಸ್‌ ಜೆರ್ಸಿಗೆ ಧೂಳು, ಕೆಸರು ಮೆತ್ತಿತ್ತು. ಜತೆಗೆ ಬೆವರು ಸುರಿಯುತ್ತಿತ್ತು. ಆಗಲೇ ಅವರು 2 ಗಂಟೆ, 27 ನಿಮಿಷಗಳ ಕಾಲ ಕ್ರೀಸಿನಲ್ಲಿ ನಿಂತಿದ್ದರು. ಲಾರ್ಡ್ಸ್‌ನಲ್ಲಿ ಆಡಿದ ಧಾರಾಳ ಅನುಭವ ಇತ್ತಾದರೂ ಒತ್ತಡದಿಂದ ಅವರೂ ಮುಕ್ತರಾಗಿರಲಿಲ್ಲ.

ಆಗ ಡ್ರೆಸ್ಸಿಂಗ್‌ ರೂಮ್‌ನಿಂದ ಹೊರಬಂದು ಸಿಗರೇಟ್‌ ಒಂದಕ್ಕೆ ಬೆಂಕಿ ಹಚ್ಚಿ ಧಮ್‌ ಎಳೆಯತೊಡಗಿದರು. ಒಂದೆರಡು ನಿಮಿಷ ಒಬ್ಬರೇ ಆಲೋಚಿಸುತ್ತ ನಿಂತರು…’ ಮುಂದಿನದು ಇತಿಹಾಸ. ಅಜೇಯ 84 ರನ್‌ ಜತೆಗೆ ಸೂಪರ್‌ ಓವರ್‌ನಲ್ಲಿ 8 ರನ್‌ ಬಾರಿಸಿದ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಆ ‘ಧಮ್‌’ ಅವರಿಗೆ ಸ್ಫೂರ್ತಿ ಕೊಟ್ಟಿರಲಿಕ್ಕೂ ಸಾಕು!

3 ಸಲ ಫೈನಲ್‌ ವೀಕ್ಷಿಸಿದ ಮಾರ್ಗನ್‌
ಕ್ರಿಕೆಟ್‌ ಜನಕರಾದ ಇಂಗ್ಲೆಂಡಿಗೆ ವಿಶ್ವಕಪ್‌ ಎತ್ತುವ ಯೋಗವಿಲ್ಲ ಎಂಬುದನ್ನು ಸುಳ್ಳು ಮಾಡಿದ ನಾಯಕ ಇಯಾನ್‌ ಮಾರ್ಗನ್‌. ವಿಶ್ವಕಪ್‌ ಆರಂಭಗೊಂಡು 44 ವರ್ಷಗಳ ಬಳಿಕ ಅವರು ಮೊದಲ ಸಲ ಇಂಗ್ಲೆಂಡನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.

ಕಳೆದ ವರ್ಷದ ಈ ಫೈನಲ್‌ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಮಾರ್ಗನ್‌, ಕೋವಿಡ್‌-19 ಲಾಕ್‌ಡೌನ್‌ ವೇಳೆ ತಾನು 3 ಸಲ ನ್ಯೂಜಿಲ್ಯಾಂಡ್‌ ಎದುರಿನ ಫೈನಲ್‌ ಪಂದ್ಯವನ್ನು ವೀಕ್ಷಿಸಿದೆ ಎಂಬುದಾಗಿ ಹೇಳಿದ್ದಾರೆ.

‘ಕಳೆದ 4 ತಿಂಗಳು ನಿಜಕ್ಕೂ ಭಾರೀ ಸವಾಲಿನದ್ದಾಗಿದ್ದವು. ನಾನು ಮನೆಯಲ್ಲೇ ಕುಳಿತು 3 ಸಲ ವಿಶ್ವಕಪ್‌ ಫೈನಲ್‌ ಮುಖಾಮುಖಿಯನ್ನು ವೀಕ್ಷಿಸಿದೆ. ಈ ಅನುಭವ ಖುಷಿ ಕೊಟ್ಟಿತು. ಆದರೆ ಆಗ ಕೂಡ ಒತ್ತಡದಿಂದ ನಾನು ಮುಕ್ತನಾಗಿರಲಿಲ್ಲ. ಇದು ನಮ್ಮೆಲ್ಲರ ಬದುಕನ್ನು ಬದಲಿಸಿದ ಪಂದ್ಯವಾಗಿತ್ತು…’ ಎಂಬುದಾಗಿ ಮಾರ್ಗನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next