Advertisement
ವೇಗದ ಬದುಕಿನಲ್ಲಿ ಮಾನವ ತನ್ನ ಸ್ವಾರ್ಥ ಚಿಂತನೆಯಿಂದ ಪ್ರಕೃತಿಯನ್ನೇ ನಾಶ ಮಾಡಿ ಕಾಂಕ್ರಿಟ್ ಕಾನನವನ್ನು ನಿರ್ಮಿಸಿ ಪ್ರಕೃತಿಯ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದ್ದಾನೆ. ಪ್ರಕೃತಿ ಮನುಷ್ಯನೊಬ್ಬನ ಸ್ವತ್ತಲ್ಲ , ಬದಲಾಗಿ ಎಂಬತ್ತು ಕೋಟಿ ಜೀವರಾಶಿಗಳಿಗೆ ಸೇರಿದ್ದು, ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಸಿಲುಕಿ ನಿಸರ್ಗದಲ್ಲಿನ ಗಾಳಿ, ನೀರು ಎಲ್ಲ ಕಲುಷಿತಗೊಳ್ಳುತ್ತಿದ್ದು ಪ್ರಕೃತಿ ಕೂಗು, ಕೊರಗು ಹೇಗಿರಬಹುದು ? ಈ ಪ್ರಶ್ನೆಯೊಂದಿಗೆ ರೂಪುಗೊಂಡ ನಾಟಕ ಗಜಕರ್ಣ. ಇಡೀ ನಾಟಕ ಕೇಂದ್ರ ಬಿಂದುವಾದ ಅಗಲ ಕಿವಿಯ ಅರಿವುಗಾರನಾಗಿ ಈ ಪ್ರಕೃತಿಯ ವಿರುದ್ಧ ಅಟ್ಟಹಾಸ ಮೆರೆಯುತ್ತಿರುವ ಈ ಮನುಕುಲಕ್ಕೆ ಕಟ್ಟ ಕಡೆಯ ಸಂದೇಶ ನೀಡಿ, ಸಮಾಜಕ್ಕೆ ಅರಿವು ಮೂಡಿಸುವ ಆಶಯದೊಂದಿಗೆ ಅಭಿವ್ಯಕ್ತಿಗೊಂಡಿದೆ.
ನಾಟಕದಲ್ಲಿ ಕೇಡಾಪುರ ಇಂದಿನ ಆಧುನಿಕ ಸಿಟಿಯಾಗಿದೆ. ಈ ಕೇಡಾಪುರದಿಂದ ಪುರಾತನ ರಾಜನ ಕಾಲಕ್ಕೆ ಹೋಗುವ ಗಜಕರ್ಣ ಇಲ್ಲಿನ ವಾಸ್ತವ ಸ್ಥಿತಿಯನ್ನು ಹೇಳುತ್ತಾನೆ. ಕೇಡಾಪುರದಲ್ಲಿ ಮಕ್ಕಳು ಮೊದಲಿಗೆ ಕಿವಿಗಳನ್ನು ಎಳೆದು ಅಮಾನವೀಯವಾಗಿ ಆಟವಾಡಿದರೆ , ದೊಡ್ಡವರು ಇವನ ಕಿವಿಗಳಿಗೆ ಪ್ರಕೃತಿಯ ಮಾತು ಕೇಳಿಸಿಕೊಳ್ಳುವ ಮಾಂತ್ರಿಕ ಶಕ್ತಿ ಇದೆ ಎಂದು ಅರಿತು ಪ್ರಕೃತಿಯ ಗುಟ್ಟನ್ನು ತಿಳಿಯಲು ಗಜಕರ್ಣನನ್ನು ಪೀಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗಜಕರ್ಣ ಊರುಬಿಟ್ಟು ಹೊರಟು ಕಾಡುದಾರಿಯಲ್ಲಿ ಎದುರಾಗುವ ಪ್ರಕೃತಿಯ ಮಕ್ಕಳು , ಪ್ರಕೃತಿ ನಾಶದ ಬಗ್ಗೆ ಆಗುವ ವಿಕೋಪಗಳ ಬಗ್ಗೆ ಎಚ್ಚರಿಸುವ ದೃಶ್ಯಗಳು ಹಾಗೂ ತೆರೆಯ ಹಿಂದೆ ತೇಲಿ ಬರುವ ಪರಿಸರ ಗೀತೆ ಪ್ರೇಕ್ಷಕನನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊಯ್ಯುತ್ತದೆ.ಅಗಲ ಕಿವಿಯ ಅರಿವುಗಾರನಾದ ಗಜಕರ್ಣನ ಮಾತಿಗೆ ಪ್ರೇರೇಪಿತರಾದ ಮಕ್ಕಳು ದೊಡ್ಡವರ ಮಾತು ಕೇಳದಾದರೂ, ಈ ಭುವಿಯೊಳಗಿನ ಚಿನ್ನ ತೋರಿಸುವಂತೆ ಪೀಡಿಸುತ್ತಾರೆ ನಂತರ ಅನ್ಯ ಮಾರ್ಗವಿಲ್ಲದೆ ಅಗಲ ಕಿವಿಯ ಅರಿವುಗಾರ ಗಜಕರ್ಣ ನಿಧಿ ಇರುವ ಜಾಗವನ್ನು ತೋರಿಸಿದಾಗ ಜನರೆಲ್ಲ ಚಿನ್ನ ಅಗೆಯುತ್ತಿದ್ದಾಗ ರಾಜಭಟರು ಗಜಕರ್ಣನನ್ನು ಸೆರೆಹಿಡಿದು ರಾಜರ ಬಳಿಗೆ ಕರೆದಾಗ ಈ ಕತೆಯನ್ನು ರಾಜನ ಬಳಿ ಹೇಳುತ್ತಾನೆ. ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ