ನವದೆಹಲಿ: ದೇಶದ ಬೃಹತ್ ಗ್ರಾಹಕರ ಸಂಪರ್ಕ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ 2018ರ ಹೊಸ ವರ್ಷವನ್ನು “ಇಯರ್ ಆಫ್ ಟ್ರಸ್ಟ್’ (ಭರವಸೆಯ ವರ್ಷ) ಎಂದು ಅಳವಡಿಸಿಕೊಂಡಿದೆ.
ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯಡಿ (ಪಿಎಂಯುವೈ) ನೂತನ ವರ್ಷದಲ್ಲಿ ಪ್ರತಿ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಿಸಲಿದೆ. ಅಲ್ಲದೆ, ಏ.1, 2018ರೊಳಗೆ ದೆಹಲಿಯಲ್ಲಿ ಬಿಎಸ್-6 ಇಂಧನವನ್ನು ಪೂರೈಸುವ ನಿರ್ಧಾರಕ್ಕೆ ಬರಲಿದೆ.
ದೆಹಲಿಯಲ್ಲಿ ಇಯರ್ ಆಫ್ ಟ್ರಸ್ಟ್ ಲೋಗೋವನ್ನು ಇಂಡಿಯನ್ ಆಯಿಲ್ ಸಂಸ್ಥೆ ಅಧ್ಯಕ್ಷ ಸಂಜೀವ್ ಸಿಂಗ್ ಅವರು ಬಿಡುಗಡೆ ಮಾಡಿ ಮಾತನಾಡಿದರು. 2018ರ ಇಯರ್ ಆಫ್ ಟ್ರಸ್ಟ್ ಆಚರಣೆ ಮೂಲಕ ಕಂಪನಿಯು ತನ್ನ ಸಾಮರ್ಥ್ಯ ಹಾಗೂ ಸಮಗ್ರತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಇಂಡಿಯನ್ ಆಯಿಲ್ ಒಂದು ಸ್ವಾಯತ್ತ ಸಂಸ್ಥೆಯಾಗಿ ತನ್ನ ಮೌಲ್ಯಗಳನ್ನು ಹಾಗೂ ಉತ್ತಮ ಸೇವೆಯನ್ನು ನೀಡಲು ಈ ಕಾರ್ಯಕ್ರಮ ಸ್ಫೂರ್ತಿಯಾಗಲಿದ್ದು, ಗ್ರಾಹಕರಲ್ಲಿ ಹಾಗೂ ಪಾಲುದಾರರಲ್ಲಿ ನಂಬಿಕೆ ಉಳಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಇಯರ್ ಆಫ್ ಟ್ರಸ್ಟ್ ಬಹುದೊಡ್ಡ ಯೋಜನೆಯಾಗಿದ್ದು ಈ ಕಾರ್ಯದಲ್ಲಿ ನಮ್ಮ ಆಂತರಿಕ ಶಕ್ತಿಗಳು ತಂಡವಾಗಿ ಹಾಗೂ ಬೆನ್ನಲುಬಾಗಿ ಕೆಲಸ ಮಾಡಲಿವೆ.
ಇದರಿಂದ ಸಂಸ್ಥೆಯ ಪೂರೈಕೆ ಸರಪಳಿಯಲ್ಲಿ ನಂಬಿಕೆ ಎಂಬ ನಿರಂತರ ಮೌಲ್ಯವನ್ನು ಕಾಪಾಡಲು ಅನುಕೂಲವಾಗಲಿದೆ. ನಮ್ಮಲ್ಲಿರುವ 47 ಸಾವಿರಕ್ಕೂ ಅಧಿಕ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಇಂಡಿಯನ್ ಆಯಿಲ್ ಸಿಬ್ಬಂದಿ, ಚಾನೆಲ್ ಪಾಲುದಾರರು ಹಾಗೂ ಅವರ ತಂಡ ಪ್ರತಿ ಎರಡನೇ ಭಾರತೀಯನನ್ನು ಸಂಪರ್ಕಿಸಲಿದ್ದಾರೆ ಎಂದು ಅವರು ತಿಳಿಸಿದರು.