ಚೆನ್ನೈ: ನಿಷೇಧಿತ ಸೌಮ್ಯಜಿತ್ ಘೋಷ್ ಬದಲು ಸನಿಲ್ ಶೆಟ್ಟಿ ಅವರನ್ನು ಭಾರತದ ಕಾಮನ್ವೆಲ್ತ್ ಗೇಮ್ಸ್ ಟೇಬಲ್ ಟೆನಿಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಬದಲಾವಣೆಗೆ ಐಒಎ ಮತ್ತು ಸಿಡಬ್ಲ್ಯುಜಿ ಒಪ್ಪಿಗೆ ನೀಡಿದ್ದು, ಶನಿವಾರವೇ ಸನಿಲ್ ಟಿಟಿಎಫ್ಐ ಕಾರ್ಯದರ್ಶಿ ಎಂ.ಪಿ. ಸಿಂಗ್ ಜತೆ ಗೋಲ್ಡ್ ಕೋಸ್ಟ್‌ಗೆ ಪಯಣಿಸಿದರು.
ಯುವತಿಯೋರ್ವಳಿಂದ ಅತ್ಯಾಚಾರದ ಆರೋಪಕ್ಕೊಳಗಾಗಿ ತನಿಖೆ ಎದುರಿಸುತ್ತಿರುವ ಸೌಮ್ಯಜಿತ್ ಘೋಷ್ ಅವರನ್ನು ಗೇಮ್ಸ್ ಟಿಟಿ ತಂಡದಿಂದ ಕೈಬಿಡಲಾಗಿತ್ತು.
ಕಾಮನ್ವೆಲ್ತ್ ಗೇಮ್ಸ್‌ಗಾಗಿ ಮಾನಸಿಕವಾಗಿ ಸಜ್ಜಾಗಿದ್ದೇನೆ ಎಂದಿರುವ ಮುಂಬಯಿಯ ದಾದರ್ ನಿವಾಸಿಯಾಗಿರುವ ಸನಿಲ್ ಶೆಟ್ಟಿ, ಈ ಅವಕಾಶಕ್ಕಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
“ಕೊನೆಗೂ ನನಗೊಂದು ಅವಕಾಶ ಸಿಕ್ಕಿತು. ನಮ್ಮದು ಅತ್ಯಂತ ಬಲಿಷ್ಠ ತಂಡವಾಗಿದ್ದು, ಸಾಕಷ್ಟು ಪದಕಗಳನ್ನು ಗೆಲ್ಲುವ ಅವಕಾಶವಿದೆ. ಇಂಗ್ಲೆಂಡ್ ಮತ್ತು ಸಿಂಗಾಪುರ್ ವಿರುದ್ಧ ಡಬಲ್ಸ್ ಹಾಗೂ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಲಿದ್ದೇವೆ. ನೈಜೀರಿಯಾದ ಅರುಣಾ ಖದ್ರಿ, ಇಂಗ್ಲೆಂಡಿನ ಲಿಯಮ್ ಪಿಚ್‌ಫೋರ್ಡ್ ಅವರಂಥ ಅಗ್ರಮಾನ್ಯ ಆಟಗಾರರನ್ನು ಎದುರಿಸಲಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮವರು ಅನೇಕ ಮಂದಿ ಅಗ್ರ ರ್‍ಯಾಂಕಿಂಗ್ ಆಟಗಾರರನ್ನು ಮಣಿಸಿದ್ದಾರೆ.
ಹೀಗಾಗಿ ಆತ್ಮವಿಶ್ವಾಸ ಹೆಚ್ಚಿದೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ನಾವು ಯಾವತ್ತೂ ಉತ್ತಮ ನಿರ್ವಹಣೆ ತೋರಿದ್ದೇವೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಪದಕಗಳೊಂದಿಗೆ ಮರಳುವ ವಿಶ್ವಾಸವಿದೆ’ ಎಂದು ಸನಿಲ್ ಶೆಟ್ಟಿ ಹೇಳಿದರು. ಭಾರತ ತಂಡದ ಉಳಿದ ಸದಸ್ಯರೆಲ್ಲ ಶುಕ್ರವಾರವೇ ಗೋಲ್ಡ್ ಕೋಸ್ಟ್‌ಗೆ ಪಯಣಿಸಿದ್ದರು. ಎ. ಶರತ್ ಕಮಲ್, ಹರ್ಮೀತ್ ದೇಸಾಯಿ, ಜಿ. ಸಥಿಯನ್, ಆ್ಯಂಟನಿ ಅಮಲ್‌ರಾಜ್, ಮಣಿಕಾ ಬಾತ್ರಾ, ಮೌಮಾ ದಾಸ್, ಮಧುರಿಕಾ ಪಾಟ್ಕರ್, ಪೂಜಾ ಸಹಸ್ರಬುಧೆ, ಸುತೀರ್ಥ ಮುಖರ್ಜಿ ಅವರೆಲ್ಲ ಗೇಮ್ಸ್ ಟಿಟಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
28ರ ಹರೆಯದ ಸನಿಲ್ ಶೆಟ್ಟಿ ಈಗ ಕೋಚ್ ಆಗಿ ಕರ್ತವ್ಯ ನಿಭಾಯಿಸುತ್ತಿರುವ ಮಾಜಿ ಟಿಟಿ ಆಟಗಾರ ಸಚಿನ್ ಶೆಟ್ಟಿ ಅವರ ಸಹೋದರ. ಕರ್ನಾಟಕ ಮೂಲದವರಾಗಿದ್ದು, ತಂದೆ ಶಂಕರ್ ಶೆಟ್ಟಿ ಬ್ಯಾಂಕ್ ಮೆನೇಜರ್ ಆಗಿದ್ದಾರೆ.