ಮುಂಬಯಿ : ‘ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪನೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸೇರಿದಂತೆ 2014ರ ಮಹಾ ಚುನಾವಣೆಯಲ್ಲಿ ನೀಡಿದ್ದ ಆಶ್ವಾಸನೆಗಳ ಬಗೆಗಿನ ಪ್ರಶ್ನೆಗಳನ್ನು ಉತ್ತರಿಸಲು ಸಿದ್ಧರಾಗಿರಿ’ ಎಂದು ಶಿವಸೇನೆ ತನ್ನ ಮಿತ್ರ ಪಕ್ಷವಾಗಿರುವ ಬಿಜೆಪಿಗೆ ಎಚ್ಚರಿಕೆ ನೀಡಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಈ ತನಕ ರೇಡಿಯೋದಲ್ಲಿ ತಮ್ಮ ಮನ್ ಕೀ ಬಾತ್ ಹೇಳುತ್ತಿದ್ದರು. ಈಗಿನ್ನು ಅವರು ಮೇ 23ರಂದು ಜನರ ಮನ್ ಕೀ ಬಾತ್ ಆಲಿಸಬೇಕಾಗಿದೆ ‘ ಎಂಬ ಎಚ್ಚರಿಕೆಯನ್ನೂ ಶಿವಸೇನೆ ನೀಡಿತು.
‘ಇತಿಹಾಸ ತಿಳಿಸುವಂತೆ ನೀವು ದೀರ್ಘಕಾಲ ಜನರನ್ನು ಮೂರ್ಖರನ್ನಾಗಿ ಮಾಡಲಾರಿರಿ. ಜನರು ತಮ್ಮಲ್ಲಿನ ಪ್ರಶ್ನೆಗಳಿಗೆ ಮತ ಪಟ್ಟಿಗೆಗಳ ಮೂಲಕವೇ ಉತ್ತರವನ್ನು ಬಯಸುತ್ತಾರೆ’ ಎಂದು ಶಿವಸೇನೆ ತನ್ನ ಸಾಮ್ನಾ ಮುಖವಾಣಿಯ ಸಂಪಾದಕೀಯದಲ್ಲಿ ಬರೆದಿದೆ.
ಲೋಕಸಭಾ ಚುನಾವಣೆ ಎಪ್ರಿಲ್ 11ರಿಂದ ಮೇ 19ರ ವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು ಮೇ 23ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬರಲಿದೆ.
ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪನೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಇವೇ ಎರಡು ಮುಖ್ಯ ಆಶ್ವಾಸನೆಗಳ ನೆಲೆಯಲ್ಲಿ ಬಿಜೆಪಿ 2014ರ ಮಹಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಅಧಿಕಾರಕ್ಕೆ ಬಂದ ಐದು ವರ್ಷಗಳಲ್ಲಿ ಈ ಎರಡೂ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.