ನವದೆಹಲಿ: ಗುಲ್‌ಬರ್ಗ್ ಹತ್ಯಾಕಾಂಡ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾಕಿಯಾ ಜಾಫ್ರಿ ಅವರು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಗುರುವಾರ ತಿರಸ್ಕರಿಸುವ ಮೂಲಕ ಕ್ಲೀನ್ ಚಿಟ್ ನೀಡಿರುವುದನ್ನು ಎತ್ತಿಹಿಡಿದಿದೆ.
ಈ ಹಿನ್ನೆಲೆಯಲ್ಲಿ ಜಾಕಿಯಾ ಜಾಫ್ರಿ ಮರು ತನಿಖೆ ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಹೋಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
2002ರ ಫೆಬ್ರುವರಿ 28ರಂದು ಅಹಮದಾಬಾದ್ ನ ಗುಲ್ ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಮಾಜಿ ಮುಖಂಡ ಇಶಾನ್ ಜಾಫ್ರಿ ಸೇರಿದಂತೆ 68 ಮಂದಿ ಬಲಿಯಾಗಿದ್ದರು. 2008ರಲ್ಲಿ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಎಸ್ಐಟಿ ತನಿಖಾ ತಂಡ ಮೋದಿ ಅವರನ್ನು 2010ರಲ್ಲಿ ಸುಮಾರು 9 ತಾಸುಗಳ ಕಾಲ ವಿಚಾರಣೆ ನಡೆಸಿತ್ತು.
ಆದರೆ ಪ್ರಕರಣದಲ್ಲಿ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ 59 ಮಂದಿ ಇತರರಿಗೆ ಕ್ಲೀನ್ ಚಿಟ್ ನೀಡಿತ್ತು. ಮೋದಿ ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಾಧಾರ ಇಲ್ಲ ಎಂದು ಕೋರ್ಟ್ ಗೆ ಸಲ್ಲಿಸಿದ್ದ ವರದಿಯಲ್ಲಿ ಎಸ್ಐಟಿ ತಿಳಿಸಿತ್ತು. ಬಳಿಕ ಮೋದಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಜಾಫ್ರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಗುಜರಾತ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.