ಬೆಂಗಳೂರು:ಮೈಸೂರು ಮಿನರಲ್ಸ್ ಸಂಸ್ಥೆ ಮೂಲಕ ಎರಡು ಸಾವಿರ ಕೋಟಿ ರೂ ಮೌಲ್ಯದ ಅದಿರು ಆಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ಅದಿರು ಅಕ್ರಮವಾಗಿ ರಫ್ತು ಮಾಡಿರುವ ಕುರಿತ ದಾಖಲೆ ಬಿಡುಗಡೆ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಲೇಬೇಕಾಗುತ್ತದೆ ಎಂದು ಹೇಳಿದರು.
ನಮ್ಮದು ಪಾರದರ್ಶಕ ಸರ್ಕಾರ, ನುಡಿದಂತೆ ನಡೆಯುವ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳುವ ಸಿದ್ದರಾಮಯ್ಯನವರು ಈ ಅದಿರು ಹೇಗೆ ರಫ್ತು ಆಯಿತು? ಯಾರು ರಫ್ತು ಮಾಡಿದರು? ಎಂಬುದರ ಬಗ್ಗೆ ಹೇಳದೆ ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ಎರಡು ಸಾವಿರ ಕೋಟಿ ರೂ. ಮೌಲ್ಯದ ಅದಿರು ರಫ್ತು ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಚಾತನ ಬಯಲಾಗಲಿದೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆತಂಕ ಸೃಷ್ಟಿಸಿದೆ. ಹೊನ್ನಾವರ ಘಟನೆ ಆದಾಗಲೇ ಮುನ್ನಚ್ಚರಿಕೆ ವಹಿಸಬೇಕಿತ್ತು. ಸರ್ಕಾರ ಎಡವಿದ ಕಾರಣ ಇದೀಗ ದೊಡ್ಡ ಮಟ್ಟದ ಅವಾಂತರ ಸೃಷ್ಟಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.