ಜೈಪುರ : ರಾಜಸ್ಥಾನದ ಪಾಕ್ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ದಾಂತಲ್ ಎಂಬ ಗ್ರಾಮದಲ್ಲಿ ನಡೆದ ಅತ್ಯಂತ ಕಳವಳಕಾರಿ ವಿದ್ಯಮಾನವೊಂದರಲ್ಲಿ ಮುಸ್ಲಿಂ ಜನಪದ ಗಾಯಕರೊಬ್ಬರು ಹತ್ಯೆಗೀಡಾಗಿದ್ದು , ಕೊಲೆ ಬಳಿಕ ಭಯಭೀತರಾಗಿರುವ 200 ಕ್ಕೂ ಹೆಚ್ಚು ಮುಸ್ಲಿಮರು ಗ್ರಾಮದಿಂದ ಪಲಾಯನಗೈದಿದ್ದಾರೆ.
ಸೆಪ್ಟೆಂಬರ್ 27 ರಂದು ಘಟನೆ ನಡೆದಿದ್ದು, ಮುಸ್ಲಿಂ ಜನಪದ ಗಾಯಕ 45 ರ ಹರೆಯದ ಅಹಮದ್ ಖಾನ್ ಎನ್ನುವವರು ಸಮಾರಂಭವೊಂದರಲ್ಲಿ ಹಾಡುತ್ತಿರುವ ವೇಳೆ ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಪಠಿಸಿದ್ದಾರೆ. ಈ ವೇಳೆ ತಕರಾರು ತೆಗೆದ ಅರ್ಚಕ ರಮೇಶ್ ಸುತಾರ್ ಎಂಬಾತ ತನ್ನ ಬೆಂಬಲಿಗರೊಂದಿಗೆ ಬಂದು ಸಂಗೀತ ಪರಿಕರಗಳನ್ನು ಧ್ವಂಸಗೈದು ಮಾರಣಾಂತಿಕವಾಗಿ ಥಳಿಸಿ ಖಾನ್ ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದಲ್ಲಿ ಶತಮಾನಗಳಿಂದ ಮುಸ್ಲಿಮರು ಮತ್ತು ಹಿಂದೂಗಳು ಭಾವೈಕ್ಯತೆಯಿಂತ ಬಾಳುವೆ ನಡೆಸುತ್ತಿದ್ದರು.ಲಾಂಗ ಮಂಗನಿಯಾರ್ ಜನಾಂಗಕ್ಕೆ ಸೇರಿದ ಗಾಯಕ ಖಾನ್ ಅವರು ಹಿಂದೂ ದೇವರ ಗೀತೆಗಳನ್ನು ದೇವಾಲಯದಲ್ಲೂ ಹಾಡುತ್ತಿದ್ದರು ಎಂದು ಹೇಳಲಾಗಿದೆ. ತಲೆಮಾರುಗಳಿಂದ ಅವರ ಕುಟುಂಬ ಈ ಸಂಪ್ರದಾಯ ಆಚರಿಸಿಕೊಂಡು ಬಂದಿತ್ತು ಎನ್ನಲಾಗಿದೆ.
ಘಟನೆಯ ಬಳಿಕ ಗ್ರಾಮದಲ್ಲಿದ್ದ 200 ಕ್ಕೂ ಹೆಚ್ಚು ಮುಸ್ಲಿಮರು ಪಲಾಯನಗೈದು ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳ ಬಳಿ ಆಶ್ರಯ ಪಡೆದಿದ್ದಾರೆ.
ಗ್ರಾಮಕ್ಕೆ ಸರ್ಕಾರ ಪ್ಯಾರಾ ಮಿಲಿಟರಿ ಪಡೆಗಳನ್ನು ಕಳುಹಿಸಿ ಭದ್ರತೆ ಕೈಗೊಂಡಿದೆಯಾದರೂ ಮುಸ್ಲಿಮರು ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ.
ಹತ್ಯೆಯ ಪ್ರಮುಖ ಆರೋಪಿ ರಮೇಶ್ ಸುತಾರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೊಂದಿಗೆ ಕೃತ್ಯದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ಒಂದು ಸಣ್ಣ ತಪ್ಪಿಗೆ ನನ್ನ ಸಹೋದರನ್ನು ಹಿಂದೂಗಳು ಹತ್ಯೆಗೈದರು ಎಂದು ಅಹಮದ್ ಖಾನ್ ಸಹೋದರಿ ರಖಾ ಖಾನ್ ಕಣ್ಣೀರಿಟ್ಟಿದ್ದಾರೆ.