Advertisement

ಆರು ತಿಂಗಳಾದರೂ ಮುಗಿಯದ 200 ಮೀ. ರಸ್ತೆ ಕಾಮಗಾರಿ 

02:48 PM May 27, 2018 | |

ಮೂಲ್ಕಿ : ಕೇವಲ 200 ಮೀಟರ್‌ ರಸ್ತೆ ಕಾಮಗಾರಿ ಆರಂಭ ವಾಗಿ ಸುಮಾರು ಆರು ತಿಂಗಳಾದರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪ್ರಯಾಣಿಕರು ನಿತ್ಯವೂ ಪರದಾಡಬೇಕಾದ ಸ್ಥಿತಿ ಕಾರ್ನಾಡು ಗೇರು ಕಟ್ಟೆಯಲ್ಲಿದೆ. ರಾಜ್ಯ ಹೆದ್ದಾರಿ ಇಲಾಖೆಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬೆಳ್ತಂಗಡಿ- ಮೂಡಬಿದಿರೆ- ಮೂಲ್ಕಿ ರಸ್ತೆಯ ಕಾರ್ನಾಡು ಗೇರುಕಟ್ಟೆಯಿಂದ ಗಾಂಧಿ ಮೈದಾನದವರೆಗಿನ 200 ಮೀಟರ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಆರಂಭದಿಂದ ನಿತ್ಯವೂ ಈ ರಸ್ತೆಯಲ್ಲಿ ಬರುವ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ.

Advertisement

ದೂರದೂರಿನವರಿಗೆ ಸಂಕಷ್ಟ
ಕಿನ್ನಿಗೋಳಿ ಮಾರ್ಗವಾಗಿ ಧರ್ಮಸ್ಥಳ, ಕಟೀಲು, ವೇಣೂರು ಮತ್ತು ಬಜ್ಪೆ ವಿಮಾನ ನಿಲ್ದಾಣದಂತಹ ಪ್ರಮುಖ ಸ್ಥಳಗಳಿಗೆ ಉಡುಪಿಯಿಂದ ಮೂಲ್ಕಿ ಮಾರ್ಗವಾಗಿ ಹೋಗಬೇಕಾದವರಿಗೆ ಈ ರಸ್ತೆಯನ್ನು ಉಪಯೋಗಿಸುವುದು ಅನಿವಾರ್ಯ ವಾಗಿದೆ. ಆದರೆ ವಿಳಂಬಗೊಂಡಿರುವ ಕಾಮಗಾರಿಯಿಂದಾಗಿ ದೂರ ದೂರಿನಿಂದ ಬರುವ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾಗಿದೆ.

ಇಲಾಖೆಗಳ ಸಹಕಾರ ಇಲ್ಲ
ಈ ಬಗ್ಗೆ ಹೆದ್ದಾರಿ ಇಲಾಖೆಯ ಉಸ್ತುವಾರಿ ಅಧಿಕಾರಿಗಳಿಗೆ ಕೇಳಿದರೆ ಅವರು ಗುತ್ತಿಗೆದಾರರತ್ತ ಬೆರಳು ತೋರಿಸುತ್ತಾರೆ. ಇನ್ನು ಗುತ್ತಿಗೆದಾರರಲ್ಲಿ ಕೇಳಿದರೆ ಕಾಮಗಾರಿ ವೇಳೆ ಮುಖ್ಯವಾಗಿ ಆಗಬೇಕಿರುವ ಮರ, ವಿದ್ಯುತ್‌ ಕಂಬಗಳ ತೆರವು ಪ್ರಕ್ರಿಯೆ ನಡೆಯದೇ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಇಲಾಖೆಗಳ ನಡುವೆ ಸಹಕಾರ ಇಲ್ಲದೇ ಇರುವುದೇ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇಲಾಖೆಯ ಮೂಲಗಳ ಪ್ರಕಾರ ಕಿನ್ನಿಗೋಳಿ ಮೂರು ಕಾವೇರಿಯಿಂದ ಮೂಲ್ಕಿಯ ಕಾರ್ನಾಡು ಜಂಕ್ಷನ್‌ ವರೆಗೆ 10 ಕಿ.ಮೀ. ರಸ್ತೆಯನ್ನು ಐದೂವರೆ ಮೀಟರ್‌ನಿಂದ 7 ಮೀಟರ್‌ಗೆ ದ್ವಿಪಥ ರಸ್ತೆ ನಿರ್ಮಾಣದ ಕೆಲಸದ ಗುತ್ತಿಗೆಯನ್ನು ಮಂಗಳೂರಿನ ಗುತ್ತಿಗೆದಾರರಿಗೆ ವಹಿಸಲಾ ಗಿದೆ. ಇದರಲ್ಲಿ ಹೆದ್ದಾರಿಯ ಇಕ್ಕೆಲಗಳ ಎರಡೂ ಬದಿಯಲ್ಲಿ ಒಂದು ಮೀಟರ್‌ ನಂತೆ ಡಾಮರೀಕರಣಗೊಳಿಸಿ ಅಗಲಗೊಳಿಸ ಲಾಗುವುದು. ಇದರಲ್ಲಿ ಈ ಇನ್ನೂರು ಮೀಟರ್‌ ಪ್ರದೇಶದಲ್ಲಿ ನೀರು ಹೋಗಲು ಚರಂಡಿ ನಿರ್ಮಿಸಲು ಜಾಗವಿಲ್ಲದಂತಾಗಿದೆ. ಕಾರಣ ರಸ್ತೆಯ ಎರಡೂ ಬದಿಯಲ್ಲಿ ಪಟ್ಟಾ ಮಾಲಕತ್ವದ ಜಮೀನು ಇದೆ. ಒಂದು ವೇಳೆ ಚರಂಡಿ ನಿರ್ಮಿಸದೇ ಇದ್ದರೆ ರಸ್ತೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿ ಕೇವಲ 200 ಮೀಟರ್‌ ರಸ್ತೆ ಕಾಂಕ್ರೀಟ್‌ ಮಾಡಲಾಗುತ್ತಿದೆ.

ಮುಕ್ತಾಯ ಹಂತವನ್ನೇ ಕಾಣುತ್ತಿಲ್ಲ 
ಟೆಂಡರ್‌ ಪ್ರಕಾರ ಗುತ್ತಿಗೆದಾರರು ಇದನ್ನು ಮಾತ್ರವಲ್ಲ ಅವ ರಿಗೆ ವಹಿಸಲಾದ 10 ಕಿ.ಮೀ. ನಲ್ಲಿ ಅವರಿಗೆ ವಹಿಸಲಾದ ಕಾಮಗಾರಿಯನ್ನು ಮೇ ತಿಂಗಳಾಂತ್ಯಕ್ಕೆ ಮುಗಿಸಿಕೊಡಬೇಕಿತ್ತು. ಈ ರಸ್ತೆ ಕಾಮಗಾರಿ ಆರಂಭಗೊಂಡ ಬಳಿಕ ಮೂಲ್ಕಿ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳು ಆರಂಭಗೊಂಡು ಮುಕ್ತಾಯವಾಗಿವೆ. ಆದರೆ ಈ ರಸ್ತೆ ಕಾಮಗಾರಿ ಮಾತ್ರ ಮುಕ್ತಾಯ ಹಂತವನ್ನೇ ಕಾಣುತ್ತಿಲ್ಲ.

Advertisement

ಮರು ಟೆಂಡರ್‌ಗೆ ಶಿಫಾರಸು
ಹಲವು ಸಮಸ್ಯೆಗಳು ಇರುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸ ಲಾಗುತ್ತಿಲ್ಲ. ಸದ್ಯ ಇಲ್ಲಿ 200 ಮೀಟರ್‌ ರಸ್ತೆಯನ್ನು ಮಾತ್ರ ಮುಗಿಸಿಕೊಡಲು ತಿಳಿಸಲಾಗಿದೆ. ಉಳಿದ ಕಾಮಗಾರಿ ಅವಧಿಯ ಒಳಗೆ ಮುಗಿಸಲಾರದೇ ಇದ್ದರೆ ಮರುಟೆಂಡರ್‌ ಕರೆದು ಬೇರೆಯವರಿಗೆ ವಹಿಸಿಕೊಡಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಸದ್ಯ ಮಳೆಗಾಲ ಆರಂಭವಾಗಲಿರುವುದರಿಂದ ಮಳೆಗಾಲ ಬಳಿಕ ಮತ್ತೆ ಕಾಮಗಾರಿ ಪ್ರಾರಂಭಿಸಲಾಗುವುದು.
– ಗಣೇಶ್‌ ಅರಳೀಕಟ್ಟೆ, ಕಾರ್ಯಪಾಲಕ ಎಂಜಿನಿಯರ್‌,
ಪಿಡಬ್ಲ್ಯೂಡಿ ರಾಜ್ಯ ಹೆದ್ದಾರಿ-70
ಬೆಳ್ತಂಗಡಿ- ಮೂಡಬಿದಿರೆ- ಮೂಲ್ಕಿ ವಿಭಾಗ

ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next