Advertisement

ಬಂಗಾರ ಗೆದ್ದ 200 ಅದೃಷ್ಟಶಾಲಿಗಳು

06:34 AM Feb 04, 2019 | Team Udayavani |

ಬೆಂಗಳೂರು: ಪೈ ಇಂಟರ್‌ನ್ಯಾಷನಲ್‌ ನ್ಯೂ ಇಯರ್‌ ಸೂಪರ್‌ ಸೇಲ್‌ ಜಿನ್ಯೂನ್‌ ಲಕ್ಕಿ ಡ್ರಾನಲ್ಲಿ 200 ಅದೃಷ್ಟಶಾಲಿ ಗ್ರಾಹಕರು ಒಟ್ಟು 5.5 ಕೆ.ಜಿ ಬಂಗಾರವನ್ನು ಬಹುಮಾನವಾಗಿ ಪಡೆದಿದ್ದು, 55,100 ಗ್ರಾಹಕರು 5,000 ರೂ, 1,000 ರೂ. ಹಾಗೂ 500 ರೂ. ಮೌಲ್ಯದ ಶಾಪಿಂಗ್‌ ಕೂಪನ್‌ಗಳನ್ನು ತಮ್ಮದಾಗಿಸಿಕೊಂಡರು.

Advertisement

ಹೊಸ ವರ್ಷದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನ್ಯೂ ಇಯರ್‌ ಸೂಪರ್‌ ಸೇಲ್‌ ಸಂದರ್ಭದಲ್ಲಿ ವಿವಿಧ ಉತ್ಪನ್ನಗಳನ್ನು ಖರೀದಿಸಿದ್ದ ಗ್ರಾಹಕರಿಗೆ ಈ ಬಂಪರ್‌ ಬಹುಮಾನಗಳನ್ನು ನಿಗದಿಪಡಿಸಿ ಕೂಪನ್‌ ವಿತರಿಸಲಾಗಿತ್ತು. ಅದರಂತೆ ಭಾನುವಾರ ಲಕ್ಕಿ ಡ್ರಾ ನಡೆದಿದ್ದು, ಒಟ್ಟು 5,300 ಗ್ರಾಹಕರಿಗೆ ಬಹುಮಾನಗಳನ್ನು ಪೈ ಇಂಟರ್‌ನ್ಯಾಷನಲ್‌ ವಿತರಿಸಿದೆ.

ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಗ್ರಾಹಕರ ಸಮ್ಮುಖದಲ್ಲೇ, ಅದೃಷ್ಟಶಾಲಿ ಕೂಪನ್‌ ಸಂಖ್ಯೆಗಳನ್ನು ಮಕ್ಕಳ ಮೂಲಕ ಆಯ್ಕೆ ಮಾಡಲಾಯಿತು. ಅವುಗಳಲ್ಲಿ ಮೊದಲನೆ ಬಹುಮಾನವಾಗಿ 100 ಗ್ರಾಹಕರು 1 ಲಕ್ಷ ರೂ. ಮೌಲ್ಯದ ಬಂಗಾರ, ಎರಡನೇ ಬಹುಮಾನವಾಗಿ 100 ಗ್ರಾಹಕರು 50,000 ಮೌಲ್ಯದ ಬಂಗಾರ,

ಮೂರನೇ ಬಹುಮಾನವಾಗಿ 100 ಗ್ರಾಹಕರು 5,000 ರೂ. ಶಾಪಿಂಗ್‌ ಕೂಪನ್‌, ನಾಲ್ಕನೇ ಬಹುಮಾನವಾಗಿ 5,000 ಗ್ರಾಹಕರು 1,000 ರೂ. ಶಾಪಿಂಗ್‌ ಕೂಪನ್‌ ಹಾಗೂ ಐದನೇ ಬಹುಮಾನವಾಗಿ 50,000 ಗ್ರಾಹಕರು 500 ರೂ. ಮೌಲ್ಯದ ಶಾಪಿಂಗ್‌ ಕೂಪನ್‌ ಗಳಿಸಿದರು. ಇವುಗಳ ಜತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲ ಅದೃಷ್ಟಶಾಲಿಗಳು ವಿಶೇಷ ಬಹುಮಾನ ಕೊಳ್ಳೆ ಹೊಡೆದರು.

ಲಕ್ಕಿ ಡ್ರಾಗೂ ಮುನ್ನ ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌ ಪೈ ಅವರು ಮಾತನಾಡಿ, “ಸಂಸ್ಥೆಗೆ ಗ್ರಾಹಕರ ಹಿತವೇ ಮುಖ್ಯವಾಗಿದೆ. ಹೀಗಾಗಿ, ನೂರಕ್ಕೆ ನೂರು ಗುಣಮಟ್ಟದ ಉತ್ಪನ್ನಗಳ ಮಾರಾಟಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ.

Advertisement

ಇವುಗಳ ಜತೆಗೆ ಇತರೆಡೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂದು ಕೆಲ ಎಲೆಕ್ಟ್ರಾನಿಕ್‌ ಕಂಪನಿಗಳು ಸರ್ವಿಸ್‌ ಹೆಸರಿನಲ್ಲಿ ಗ್ರಾಹಕರಿಂದ ಸಾಕಷ್ಟು ಹಣ ಪಡೆಯುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದಲೇ ಸರ್ವಿಸ್‌ ವಿಭಾಗ ಆರಂಭಿಸಲಾಗುತ್ತದೆ. ಜತೆಗೆ ಒಂದು ಸಹಾಯವಾಣಿ ಆರಂಭಿಸಿ ಕರೆ ಮಾಡಿದ ಪೈ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸಲಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಒಂದು ಮಳಿಗೆಯೊಂದಿಗೆ ಸಂಸ್ಥೆ ಆರಂಭಗೊಂಡಿತ್ತು. ಇಂದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಿವೆ. ಇತ್ತೀಚೆಗೆ ಹೈದರಾಬಾದ್‌ನ ಚಾರ್‌ಮಿನಾರ್‌ ಬಳಿ ಹೊಸ ಮಳಿಗೆಯನ್ನು ಆರಂಭಿಸಲಾಯಿತು. ಸಂಸ್ಥೆಯು 2018-19ರಲ್ಲಿ 1,400 ಕೋಟಿ ರೂ. ವಹಿವಾಟು ನಡೆಸಿದ್ದು, ಮುಂದಿನ ದಿನದಲ್ಲಿ ವಹಿವಾಟನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಈ ಬಾರಿ ನ್ಯೂ ಇಯರ್‌ ಸೂಪರ್‌ ಸೇಲ್‌ನಲ್ಲಿ 55,300 ಬಹುಮಾನಗಳನ್ನು ನಿಗದಿಪಡಿಸಿ ಒಟ್ಟು 6 ಲಕ್ಷ ಕೂಪನ್‌ಗಳನ್ನು ಮುದ್ರಿಸಲಾಗಿತ್ತು. ಅವುಗಳಲ್ಲಿ 4,67,381 ಕೂಪನ್‌ಗಳನ್ನು ನಮ್ಮ ಮಳಿಗೆಗಳಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ವಿತರಿಸಲಾಗಿತ್ತು. ಪ್ರಸ್ತುತ ಪಾರದರ್ಶಕ ರೀತಿಯಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ.

ಈ ಪಾರದರ್ಶಕ ಲಕ್ಕಿ ಡ್ರಾ ಮುಂದುವರಿಯಲಿದ್ದು, ಇನ್ನು ಈ ಬಾರಿ ಲಕ್ಕಿ ಡ್ರಾ ವಿಜೇತರ ಹೆಸರು, ವಿಳಾಸ ಹಾಗೂ ಬಹುಮಾನದ ಮಾಹಿತಿಗಳು ಎಲ್ಲಾ ಪೈ ಇಂಟರ್‌ನ್ಯಾಷನಲ್‌ ಮಳಿಗೆಗಳಲ್ಲಿ ಪ್ರಕಟಿಸಲಾಗುವುದು. ಜತೆಗೆ ಎಲ್ಲಾ ವಿಜೇತರಿಗೆ ಬಹುಮಾನ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದು, 2018ರಲ್ಲಿ 20 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. ಮುಂದಿನ ವರ್ಷ 2 ಲಕ್ಷ ನೊಟ್‌ ಬುಕ್‌ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. 

ತೆಲಂಗಾಣ, ಆಂಧ್ರದಲ್ಲಿ ಹೊಸ ಮಳಿಗೆಗಳನ್ನು ಆರಂಭಿಸಿ ಪೈ ಇಂಟರ್‌ನ್ಯಾಷನಲ್‌ ಉದ್ಯಮವನ್ನು ವಿಸ್ತರಿಸುತ್ತಿದ್ದು, 2020ರ ವೇಳೆಗೆ 3,000 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ.
-ರಾಜ್‌ಕುಮಾರ್‌ ಪೈ, ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಲಿ., ಎಂ.ಡಿ

Advertisement

Udayavani is now on Telegram. Click here to join our channel and stay updated with the latest news.

Next