Advertisement

23 October 1824; ಕಿತ್ತೂರಿನ ಮೊದಲ ವಿಜಯೋತ್ಸವಕ್ಕೆ 200 ವರ್ಷ

12:35 AM Oct 22, 2024 | Team Udayavani |

ಕನ್ನಡದ ನೆಲದಲ್ಲಿ ಬ್ರಿಟಿಷರ ಎದುರು ನಡೆದ ಕಿತ್ತೂರಿನ ಯುದ್ಧಕ್ಕೆ ಈಗ 200 ವರ್ಷಗಳಾಗುತ್ತಿವೆ (23 ಅಕ್ಟೋಬರ್‌ 1824). ಈ ಎರಡು ನೂರು ವರ್ಷಗಳಲ್ಲಿ ದೇಶದಲ್ಲಿ ಏನೆಲ್ಲ ಘಟಿಸಿವೆ. ರಾಜಪ್ರಭುತ್ವಗಳು ಇಲ್ಲವಾಗಿ ಪ್ರಜಾಪ್ರಭುತ್ವ ನಮ್ಮದಾಗಿದೆ. ಆದರೆ ಕಿತ್ತೂರಿನ ಇತಿಹಾಸವನ್ನು ನಾವು ಸುಸಂಬದ್ಧವಾಗಿ ಕಾಲಾನುಕ್ರಮದಲ್ಲಿ ದಾಖಲೆ ಸಹಿತ ಹೇಳುವಂತೆ ಇತಿಹಾಸ ರಚನೆಗೊಂಡಿಲ್ಲ. ಏನಿದ್ದರೂ ನಾವು ಲಾವಣಿಗಳ ಮೂಲಕ, ಜನಪದರ ಹಾಡುಗಳ ಮೂಲಕ, ತೋಂಡಿ ಸಂಪ್ರದಾಯದ ಕಥೆಗಳ ಮೂಲಕ ಆ ಇತಿಹಾಸವನ್ನು ಕಟ್ಟಿಕೊಳ್ಳಬೇಕಾಗಿದೆ. ಬಹು ಇತಿಹಾಸ ಪಠ್ಯಗಳು ಗೊಂದಲವನ್ನೂ ಸೃಷ್ಟಿಸಿವೆ. ಹಾಗಾಗಿ ಸತ್ಯಕ್ಕೆ ಹತ್ತಿರವಿರುವ ಜನಪದ ಸಾಹಿತ್ಯ, ಲಾವಣಿ ಹಾಡುಗಳನ್ನೇ ಆಕರ ಮಾಡಿಕೊಳ್ಳಬೇಕಾಗಿದೆ.

Advertisement

ಕೆಂಗಣ್ಣಿಗೆ ಗುರಿಯಾದ ದತ್ತು ಮಕ್ಕಳ ಕಾಯ್ದೆ
ಭಾರತದ ಸಣ್ಣ ಪುಟ್ಟ ದೇಸಗತ್ತಿ ಮತ್ತು ರಾಜಸತ್ತೆಗಳಿಂದ ಮೊದಲುಗೊಂಡು ದೊಡ್ಡ ದೊಡ್ಡ ರಾಜವಂಶಗಳು ಆಗಿನ ಬ್ರಿಟಿಷರ ವಿರುದ್ಧ ಸಣ್ಣದಾಗಿ ಬಂಡಾಯ ಏಳುತ್ತಿದ್ದ ಕಾಲವದು. ಬ್ರಿಟಿಷರಿಗೆ ಕಪ್ಪು ಕಾಣಿಕೆ ಕೊಡುವ ವಿಚಾರ, ಅವರ ಕಾಯ್ದೆಗಳು ಒಪ್ಪಿತವಾಗದೆ ಇರುವುದು ಈ ಬಂಡಾಯಗಳಿಗೆ ಕಾರಣವಾಗಿತ್ತು. ಒಂದೊಮ್ಮೆ ಬ್ರಿಟಿಷ್‌ ಪ್ರಭುತ್ವಕ್ಕೆ ಹತ್ತಿರವಾಗಿ ತಮ್ಮ ರಾಜಕೀಯ ಜೀವನ ನಡೆಸುತ್ತಿದ್ದ ಈ ಅರಸೊತ್ತಿಗೆಗಳು ಬ್ರಿಟಿಷರ ಇಬ್ಬಗೆಯ ನೀತಿಗೆ ವಿರುದ್ಧವಾಗಿ ಬಹಿರಂಗವಾಗಿಯೇ ತೊಡೆತಟ್ಟಿ ಯುದ್ಧದ ಆಹ್ವಾನ ಕೊಡತೊಡಗಿದವು. ಉತ್ತರ ಭಾರತದಲ್ಲಿ ಆರಂಭವಾದ ಈ ಹೋರಾಟ ದಕ್ಷಿಣದ ರಾಜ್ಯಗಳಿಗೂ ಹಬ್ಬಿತು. “ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ಬ್ರಿಟಿಷರ ಕಾಯ್ದೆಯನ್ನು ದತ್ತು ಸ್ವೀಕರಿಸಿ ರಾಜ್ಯಭಾರವನ್ನು ಮಾಡುತ್ತಿದ್ದ ದೇಶೀ ರಾಜ ಪ್ರಭುತ್ವಗಳು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದವು. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರಿಂದ ಆರಂಭವಾದ ಈ ಹೋರಾಟ ದಕ್ಷಿಣದ ಕಿತ್ತೂರಿಗೂ ತಲುಪಿತು.

ಆಗ ಕಿತ್ತೂರನ್ನು ದೊರೆ ಮಲ್ಲಸರ್ಜ ಆಳುತ್ತಿದ್ದ. ಅವರ ಪಟ್ಟದ ರಾಣಿ ರಾಜಮಾತೆ ರುದ್ರಮ್ಮ ಮತ್ತು ಯುವರಾಜ ಶಿವಲಿಂಗರುದ್ರ ಸರ್ಜ. ನೆಮ್ಮದಿಯ ರಾಜ್ಯಭಾರ ನಡೆಸುತ್ತಿದ್ದ ಕಾಲದಲ್ಲೇ ದೊರೆ ಮಲ್ಲಸರ್ಜ ಕಾಕತಿಯ ಚೆನ್ನಮ್ಮಳನ್ನು ಎರಡನೆಯ ಮದುವೆಯಾಗಿ ಕಿತ್ತೂರಿಗೆ ಕರೆತಂದ. ಚೆನ್ನಮ್ಮ ಪಟ್ಟದ ರಾಣಿಯಾಗಿರದಿದ್ದರೂ ರಾಜ್ಯದ ಆಗುಹೋಗುಗಳನ್ನು ನಿಧಾನವಾಗಿ, ಧೈರ್ಯ ಸಾಹಸಗಳಿಂದ ಮುನ್ನೆಡೆಸುತ್ತ ಮಹಾರಾಣಿ ರುದ್ರಮ್ಮರಿಗೆ, ಮಲ್ಲಸರ್ಜ ದೊರೆಗೆ ಹಾಗೂ ಕಿತ್ತೂರಿನ ನಾಡ ಜನತೆಗೆ ಅಚ್ಚು ಮೆಚ್ಚಿನವಳಾದಳು.

ಹೀಗಿರುವಾಗ ಯುವರಾಜ ಶಿವಲಿಂಗರುದ್ರ ಸರ್ಜ ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ. ಈಗ ಕಿತ್ತೂರಿಗೆ ಉತ್ತರಾಧಿಕಾರಿ ಯಾರು? ಸಮಸ್ಯೆ ಉದ್ಭವಿಸಿತು. ಆಗ ಚೆನ್ನಮ್ಮ ದತ್ತು ಸ್ವೀಕರಿಸಲು ಮುಂದಾದಳು. ಇದು ಬ್ರಿಟಿಷರಿಗೆ ಸಹಿಸದ ವಿಚಾರವಾಯಿತು. ಆಗ ಕಿತ್ತೂರು ಬ್ರಿಟಿಷರೊಂದಿಗೆ ಹಾಗೂ ನೆರೆಯ ಮರಾಠಾ ಪೇಶ್ವೆಗಳೊಂದಿಗೆ ಹಗೆತನ ಹೊಂದಿತ್ತು. ಮಲ್ಲಸರ್ಜ ದೊರೆಯನ್ನು ಮೋಸದಿಂದ ಪೇಶ್ವೆಗಳು ಸೆರೆ ಹಿಡಿದು ಗೃಹ ಬಂಧನದಲ್ಲಿ ಇಟ್ಟಿದ್ದರು. ಆಗಿನ ಮಂತ್ರಿಗಳಾಗಿದ್ದ ಸರ್ದಾರ ಗುರುಸಿದ್ಧಪ್ಪ ಹಾಗೂ ಯೋಧ ಅಮಟೂರ ಬಾಳಪ್ಪ ಪೇಶ್ವಗಳಿಂದ ದೊರೆ ಮಲ್ಲಸರ್ಜನನ್ನು ಬಿಡಿಸಿಕೊಂಡು ಬಂದಿದ್ದರು.

ಕಿತ್ತೂರು ವೀರ ಯೋಧರ ಪಡೆ
ಮಂತ್ರಿ ಸರ್ದಾರ ಗುರುಸಿದ್ದಪ್ಪ ಮತ್ತು ರಾಣಿ ಚೆನ್ನಮ್ಮ ಸೇರಿ ಕಿತ್ತೂರಿನಲ್ಲಿ ಸುಸಜ್ಜಿತ ಸೈನ್ಯ ಕಟ್ಟಿದರು. ಮಹಾಗುರಿಕಾರ ಅಮಟೂರ ಬಾಳಪ್ಪ, ಅಮಟೂರಿನ ಮತ್ತೋರ್ವ ಯೋಧ ಬಿಚ್ಚುಗತ್ತಿ ಚೆನ್ನಬಸಪ್ಪ, ವಡ್ಡರ ಯಲ್ಲಣ್ಣ, ಸಂಗೊಳ್ಳಿ ರಾಯಣ್ಣ, ಅಶ್ವದಳದ ಮುಖ್ಯಸ್ಥನಾಗಿದ್ದ ಹಿಮ್ಮತ್‌ ಸಿಂಗ್ರಂಥ ಧೈರ್ಯಶಾಲಿಗಳು, ಕೆಚ್ಚೆದೆಯ ಹೋರಾಟಗಾರರು ಕಿತ್ತೂರಿನ ಸೈನ್ಯಕ್ಕೆ ಬಲ ತುಂಬಿದ್ದರು. ಆದರೆ ನಮ್ಮವರಿಂದಲೇ ಮೋಸವಾ­ಗುತ್ತಿದ್ದ ಕಾರಣ ಕಿತ್ತೂರ ಸಂಸ್ಥಾನ ಸದಾ ಆತಂಕ ಎದುರಿಸುತ್ತಿತ್ತು.

Advertisement

ಮುಂದೆ ಮಲ್ಲಸರ್ಜ ದೊರೆ ಕೆಲವೇ ದಿನಗಳಲ್ಲಿ ವಿಧಿವಶ­ರಾದರು. ಒಂದು ಕಡೆ ದೊರೆಯಿಲ್ಲದ ರಾಜ್ಯ, ಇನೊಂದೆಡೆ ಬ್ರಿಟಿಷರ ಉಪಟಳ… ಚೆನ್ನಮ್ಮ ಸೈನ್ಯ ಬಲ­ಗೊಳಿಸಲು ಸಜ್ಜಾದಳು. ಶಸ್ತ್ರಾಗಾರದ ಅಭಿಯೋಜಕರು, ಕೋಟೆ ಕಾಯುವ ಕಿಲ್ಲೆದಾರರು, ಖಜಾನೆ ಉಸ್ತುವಾರಿ­ಗಳು, ಗೋಲಂ­ದಾಜರು, ಮದ್ದು ಗುಂಡು­ಗಳನ್ನು ತಯಾರಿಸುವ ಮದ್ದು ಕಾಯುವ ತೋಪಖಾನೆಯವರು, ಅಶ್ವದಳದ ಮುಖ್ಯಸ್ಥರು, ತರಬೇತುದಾರರು, ಕುದುರೆ­ಗಳನ್ನು ಸಾಕುವ ಹುಲ್ಸಾರ ಮತ್ತು ಕಾತ್ಸಾರಗಳು… ಹೀಗೆ ಬಲಾಡ್ಯ ಸೈನ್ಯ ಸಜ್ಜುಗೊಂಡಿತು. ಅದಕ್ಕೆ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಚೆನ್ನಬಸಪ್ಪ, ವಡ್ಡರ ಯಲ್ಲಣ್ಣ, ಹಿಮ್ಮತ್‌ ಸಿಂಗ್‌… ಹೀಗೆ ಶೂರ ಕಲಿಗಳು ಒಂದೊಂದು ವಿಭಾಗದ ನೇತೃತ್ವ ವಹಿಸಿಸಿದ್ದರು. ಇದರೊಂದಿಗೆ ಕಿತ್ತೂರು ಮತ್ತದರ ಸುತ್ತಮುತ್ತಲಿನ ವೀರ ಯುವಕರೂ ಸೈನ್ಯದಲ್ಲಿ ಸೇರ್ಪಡೆಗೊಂಡರು. ಕಿತ್ತೂರು ಈಗ ಅಭೇದ್ಯ ಕೋಟೆಯಾಯಿತು.

ಥ್ಯಾಕರೆ ಬಲಿಪಡೆದ ಬಾಳಪ್ಪ
ಆಗ ಸೇಂಟ್‌ ಜಾನ್‌ ಥ್ಯಾಕರೆ ಆಗ ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ. ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಕಿತ್ತೂರಿನ ಸಂಸ್ಥಾನ ವಶಪಡಿಸಿಕೊಳ್ಳಲು ಒಂದು ಹದ್ದಿನ ಕಣ್ಣಿಟ್ಟಿದ್ದ. ಕಪ್ಪ ಕಾಣಿಕೆ ಕೊಡುವ ವಿಚಾರದಲ್ಲಿ ಚೆನ್ನಮ್ಮ ಒಪ್ಪದಿದ್ದಾಗ, ಥ್ಯಾಕರೆ ಕಿತ್ತೂರಿನ ಮೇಲೆ ಯುದ್ಧ ಸಾರಿದ. ಅದು 1824 ಅಕ್ಟೋಬರ್‌ 23 ಕಿತ್ತೂರು ಸೈನ್ಯ ಹಾಗೂ ಬ್ರಿಟಿಷರ ನಡುವೆ ಮೊದಲ ಯುದ್ಧ ನಡೆದ ದಿನ. ಯುದ್ಧದ ತೀವ್ರಗೊಂಡ ಸಂದರ್ಭದಲ್ಲಿ ಥ್ಯಾಕರೆ, ಚೆನ್ನಮ್ಮಳನ್ನು ಕೊಲ್ಲಲು ಮುಂದಾದಾಗ, ಕೂಡಲೇ ಅಮಟೂರ ಬಾಳಪ್ಪ ಥ್ಯಾಕರೆ ಮೇಲೆ ಗುಂಡು ಹಾರಿಸಿ, ಯುದ್ಧದ ವಿಜಯ ಸಾರುತ್ತಾನೆ. ಬ್ರಿಟಿಷ್‌ ಸೈನ್ಯವೆಲ್ಲ ಥ್ಯಾಕರೆ ಸಾವಿನ ಸುದ್ದಿ ತಿಳಿದು ದಿಕ್ಕೆಟ್ಟು ಪಲಾಯನ ಮಾಡಿತು ಮತ್ತು ಸೈನಿಕರು ಬಂಧಿತರಾದರು.

ಇನ್ನೊಂದು ದೃಷ್ಟಿಕೋನ
ಇದೊಂದು ಕಥಾನಕವಾದರೆ, ಇನ್ನೊಂದು ಕಥೆಯ ಪ್ರಕಾರ, ಥ್ಯಾಕರೆ ಸ್ನೇಹಪೂರ್ವಕವಾಗಿ ನಿಮ್ಮ ಅರಮನೆಗೆ ಸೌಹಾರ್ದ ಭೇಟಿಗೆ ಬರುತ್ತೇನೆ. ನಾನು ಬರುವಾಗ ಅಲ್ಲಿ ಯಾವ ಸಶಸ್ತ್ರ ಯೋಧರು ಇರಬಾರದು ಎಂಬ ಕರಾರಿನ ಪತ್ರವೊಂದನ್ನು ಚೆನ್ನಮ್ಮಳಿಗೆ ಕಳಿಸಿದ್ದ. ಚೆನ್ನಮ್ಮ ಕೂಡ ಇದಕ್ಕೆ ಸಮ್ಮತಿಸಿದ್ದಳು. ಆದರೆ, ಇದರಲ್ಲೇನೋ ಸಂಚಿರಬಹುದೆಂದು ಅಮಟೂರ ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣನಿಗೆ ಅನಿಸಿತು. ಅದಕ್ಕಾಗಿ ಚೆನ್ನಮ್ಮಳಿಗೂ ತಿಳಿಸಿದೆ, ಜಂಗಮರ ವೇಷದಲ್ಲಿ ಲಿಂಗಪೂಜೆಗಾಗಿ ಅವರು ಅಲ್ಲಿರುತ್ತಾರೆ

ಅರಮನೆಯಲ್ಲಿರುವಾಗ ಸಮಯ ನೋಡಿ ಚೆನ್ನಮ್ಮಳ ಹತ್ಯೆಗೈಯಬೇಕೆಂಬ ಸಂಚು ಅವನದ್ದಾಗಿತ್ತು. ಲಿಂಗ ಪೂಜೆ ನಡೆಯುವ ಸಮಯಕ್ಕೆ ಥ್ಯಾಕರೆ ಒಮ್ಮೆಲೇ ಚೆನ್ನಮ್ಮಳನ್ನು ಬಂಧಿಸಲು ಆಜ್ಞೆಯಿತ್ತ. ಕೂಡಲೇ ಮಾರುವೇಷದಲ್ಲಿದ್ದ ಅಮಟೂರ ಬಾಳಪ್ಪ ಕ್ಷಣ ಮಾತ್ರದಲ್ಲಿ ಥ್ಯಾಕರೆ ಮೇಲೆ ಗುಂಡು ಹಾರಿಸಿ ಹತ್ಯೆಗೈದ. ಏಷಿಯಾಟಿಕ್‌ ಜರ್ನಲ್‌ ಸಂಪುಟ 3, 1830 ದಾಖಲೆಯಲ್ಲಿ ಈ ಘಟನೆಯ ಉಲ್ಲೇಖ ಕಾಣಬಹುದು. ‘ಥ್ಯಾಕರೆಯನ್ನು ಕೊಂದ ಕಿತ್ತೂರಿನ ಯೋಧ ಅಮಟೂರ ಬಾಳಪ್ಪ’ ಎಂಬ ವರದಿ ಇಲ್ಲಿ ಲಭ್ಯವಿದೆ.

ಅಮಟೂರ ಬಾಳಪ್ಪನ ಕುರಿತಾಗಿ ಲಭ್ಯವಿರುವ ಅಧಿಕೃತ ದಾಖಲೆ ಇದೊಂದೆ. ಅಷ್ಟಕ್ಕೂ ಅವನ ಹಿನ್ನೆಲೆ, ಕುಟುಂಬ ಮತ್ತಿತರ ವಿವರ ಇನ್ನೂ ಅಸ್ಪಷ್ಟ. ಎರಡನೇ ಯುದ್ಧದ ಸಂದರ್ಭದಲ್ಲಿ ಆತ ಅಸುನೀಗಿದ ಎಂದು ಕೆಲ ಜನಪದರು ಹೇಳಿದರೆ, ಯುದ್ಧದ ಸೋಲು ಸಹಿಸಲಾಗದೇ ಉತ್ತರ ಭಾರತದತ್ತ ದೇಶಾಂತರ ಹೋದನೆಂದು ಕೆಲವು ಕಡೆ ಹೇಳಲಾಗಿದೆ. ಕಥನಗಳು ಏನೇ ಇರಲಿ ಈ ಎಲ್ಲ ಘಟನೆಗಳು ನಡೆದಿದ್ದು 1824ರಲ್ಲಿ. ಅಂದರೆ ಇಂದಿಗೆ ಬರೊಬ್ಬರಿ ಇನ್ನೂರು ವರ್ಷಗಳ ಹಿಂದೆ. ಥ್ಯಾಕರೆ ವಿರುದ್ಧ ಜಯ ಸಾಧಿಸಿದ್ದು, ಇಡೀ ಬ್ರಿಟಿಷರ ಜಂಗಾಬಲ ಅಡಗಿಸಿದ್ದಂತೂ ನಿಜ. ಈ ಕ್ಷಣಕ್ಕೆ ನಮ್ಮ ಕಣ್ಮುಂದೆ ಉಳಿಯುವುದು ರಾಣಿ ಚೆನ್ನಮ್ಮಳ ದಿಟ್ಟತನ, ಅಮಟೂರ ಬಾಳಪ್ಪನೆಂಬ ಯೋಧನ ಧೀರತನವಷ್ಟೇ… ಅದೆಂದಿಗೂ ಕನ್ನಡಿಗರ ಹೃದಯದಲ್ಲಿ ಶಾಶ್ವತ.

ಬಾಳಾಸಾಹೇಬ ಲೋಕಾಪುರ, ಅಥಣಿ

Advertisement

Udayavani is now on Telegram. Click here to join our channel and stay updated with the latest news.

Next