ಬೆಂಗಳೂರು: ನಗರದ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೊ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣಕ್ಕೆ ಇನ್ಫೋಸಿಸ್ ಫೌಂಡೇಶನ್ 200 ಕೋಟಿ ರೂ. ದೇಣಿಗೆ ನೀಡಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಶನಿವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ್ದು, ಈ ಕುರಿತು ಮೆಟ್ರೊ ನಿಗಮ ಹಾಗೂ ಇನ್ಫೋಸಿಸ್ ಫೌಂಡೇಶನ್ ಜತೆ ಜುಲೈ 19 ರಂದು ಅಧಿಕೃತವಾಗಿ ಒಪ್ಪಂದವಾಗಲಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇನ್ಫೋಸಿಸ್ ಪ್ರತಿಷ್ಠಾನದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಹಲವಾರು ಕಾರ್ಯ ಮಾಡಲಾಗಿದೆ. ಇದೀಗ ಮೆಟ್ರೊ ನಿಲ್ದಾಣ ಮತ್ತು ಹಳಿಗಳ ನಿರ್ಮಾಣಕ್ಕೆ 200 ಕೋಟಿ ರೂ. ದೇಣಿಗೆ ನೀಡಲು ತೀರ್ಮಾನಿಸಿದ್ದಾರೆ.
ಬೆಂಗಳೂರು ಕಿದ್ವಾಯಿ ಆಸ್ಪತ್ರೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡುವ ಮೂಲಕ ಸುಧಾ ಮೂರ್ತಿಯವರು ಕಾರ್ಪೊರೇಟ್ ಸಂಸ್ಥೆಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ ಎಂದು ಶ್ಲಾ ಸಿದ್ದಾರೆ.
ಮೆಟ್ರೊ ನಿಲ್ದಾಣ ಮತ್ತು ಹಳಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ 30 ವರ್ಷಗಳವರೆಗೆ ಅದರ ನಿರ್ವಹಣೆಯನ್ನು ಇನ್ಫೋಸಿಸ್ ಪ್ರತಿಷ್ಠಾನದಿಂದ ಕೈಗೊಳ್ಳಲಾಗುವುದು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ತಿಳಿಸಿದರು.
ಆಡದೆ ಮಾಡುವವನು ರೂಢಿಯೊಳಗುತ್ತಮನು ಎಂಬ ಬಸವಣ್ಣನ ವಚನದಂತೆ ದುಡಿದ ಹಣವನ್ನು ಜನರಿಗಾಗಿ ವೆಚ್ಚ ಮಾಡುವುದರಲ್ಲಿನ ಸಂತೋಷ ಬೇರೆ ಯಾವುದರಲ್ಲಿಯೂ ಇಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಉಪಸ್ಥಿತರಿದ್ದರು.