ಬೆಂಗಳೂರು: ನಗರದಲ್ಲಿ ನಿರ್ಮಾಣವಾಗಿರುವ ಸಮುತ್ಛಯಗಳಿಂದ ತೆರಿಗೆ ಸಂಗ್ರಹಿಸುವಲ್ಲಿ ಪಾಲಿಕೆಯ ಕೆಳಹಂತದ ಅಧಿಕಾರಿಗಳು ಲೋಪವೆಸಗಿದ್ದು, ಪಾಲಿಕೆಗೆ 200 ಕೋಟಿ ರೂ. ನಷ್ಟವಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ನೂರಾರು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದೆ. ಜತೆಗೆ ಪಾಲಿಕೆಯಿಂದ ನಾಲ್ಕೈದು ವರ್ಷಗಳ ಹಿಂದೆಯೇ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಆದರೂ, ಪಾಲಿಕೆ ಅಧಿಕಾರಿಗಳು ಅವುಗಳಿಗೆ ತೆರಿಗೆ ಮಾಪನ ಮಾಡಿ ಆಸ್ತಿ ತೆರಿಗೆ ಸಂಗ್ರಹಿಸುತ್ತಿಲ್ಲ.
ಲಭ್ಯವಾಗಿರುವ ಮಾಹಿತಿಯಂತೆ ಪಾಲಿಕೆಯ ವ್ಯಾಪ್ತಿಯಲ್ಲಿ 343 ಗಗನಚುಂಬಿ ವಸತಿ ಸಮುತ್ಛಯಗಳಲ್ಲಿನ 25 ಸಾವಿರ ಮನೆಗಳಿಗೆ ಪಾಲಿಕೆಯಿಂದ ಒಸಿ ನೀಡಿ ನಾಲ್ಕೈದು ವರ್ಷಗಳು ಕಳೆದಿವೆ. ಇಂತಹ ಕಟ್ಟಡಗಳಿಗೆ ಅಧಿಕಾರಿಗಳು ಆಸ್ತಿ ತೆರಿಗೆ ನಿಗದಿಪಡಿಸಿಲ್ಲ.
ಇದರೊಂದಿಗೆ ಕೆಲವು ಕಡೆಗಳಲ್ಲಿ ಅಧಿಕಾರಿಗಳು ಮಾಲೀಕರೊಂದಿಗೆ ಶಾಮೀಲಾಗಿ ನಾಲ್ಕೈದು ವರ್ಷಗಳ ತೆರಿಗೆ ಬದಲಿಗೆ ಕೇವಲ ಒಂದು ವರ್ಷದ ತೆರಿಗೆ ಸಂಗ್ರಹಿಸಿರುವ ದೂರುಗಳು ಬಂದಿವೆ. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತ ಹಾಗೂ ಪ್ರಕರಣ ತನಿಖೆ ನಡೆಸುವಂತೆ ಬಿಬಿಎಂಪಿ ಪುನರ್ ರಚನಾ ಸಮಿತಿಯನ್ನು ಕೋರಲಾಗುವುದು ಎಂದರು.
ಪಾಲಿಕೆ ಕೇಂದ್ರ ಕಚೇರಿಯ ನಗರ ಯೋಜನೆ ವಿಭಾಗದಿಂದ ಒಸಿ ನೀಡಿರುವ ಆಸ್ತಿಗಳಿಂದಲೇ ಇಷ್ಟು ಪ್ರಮಾಣದ ತೆರಿಗೆ ವಂಚನೆಯಾಗಿದೆ. ವಲಯ ಮಟ್ಟದಲ್ಲಿ ಕಟ್ಟಡಗಳಿಗೆ ನೀಡಲಾಗಿರುವ ಒಸಿಗಳ ಮಾಹಿತಿ ನೀಡುವಂತೆ ಕೋರಿ ಹಲವು ದಿನಗಳು ಕಳೆದರೂ ಮಾಹಿತಿ ನೀಡಿಲ್ಲ. ಈ ಕುರಿತು ಅಧಿಕಾರಿಗಳು ಹಾಗೂ ಆಯುಕ್ತರಿಗೆ 15 ಪತ್ರಗಳನ್ನು ಬರೆಯಲಾಗಿದೆ. ಜತೆಗೆ ಆಯುಕ್ತರು ಮಾಹಿತಿಯನ್ನು ಕೋರಿದರೂ ಈವರೆಗೆ ಯಾವುದೇ ಮಾಹಿತಿ ವಲಯಗಳಿಂದ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಯುಕ್ತರಿಗೆ ಹಿಡಿತವಿಲ್ಲ: ಬಿಬಿಎಂಪಿ ಸುಮಾರು 800 ಚದರ ಮೀಟರ್ ವ್ಯಾಪ್ತಿಯಿರುವುದರಿಂದ ಒಬ್ಬರು ಆಯುಕ್ತರಿಂದ ಆಡಳಿತ ನಡೆಸುವುದು ಕಷ್ಟ. ಪಾಲಿಕೆಯ ಕೆಳ ಹಂತದ ಅಧಿಕಾರಿಗಳು ಆಯುಕ್ತರ ಆದೇಶಕ್ಕೂ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಯುಕ್ತರು ಸ್ವಲ್ಪಮಟ್ಟಿಗೆ ವಿಫಲವಾಗಿದ್ದಾರೆ ಎಂದು ಗುಣಶೇಖರ್ ತಿಳಿಸಿದರು.