Advertisement

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

08:57 PM May 25, 2024 | Team Udayavani |

ಗಾಂಧಿನಗರ: ಗೇಮಿಂಗ್‌ ಜೋನ್‌ ವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಕನಿಷ್ಠ 20 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಗುಜರಾತ್‌ನ ರಾಜ್‌ಕೋಟ್‌ ನಲ್ಲಿ ಶನಿವಾರ(ಮೇ.25 ರಂದು) ಸಂಜೆ ನಡೆದಿರುವುದು ವರದಿಯಾಗಿದೆ.

Advertisement

ಟಿಆರ್‌ಪಿ ಎಂಬ ಗೇಮಿಂಗ್‌ ಜೋನ್‌ ನಲ್ಲಿ ಈ ಅವಘಡ ಸಂಭವಿಸಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಸಿಲುಕಿಕೊಂಡಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ 20 ಮಂದಿ ಬೆಂಕಿಯ ಕೆನ್ನಾಲಗೆಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವೀಕೆಂಡ್‌ ಇರುವ ಕಾರಣ ಗೇಮಿಂಗ್‌ ಜೋನ್‌ ಕಟ್ಟಡಕ್ಕೆ ಹಲವು ಜನರು ಬಂದಿದ್ದರು. ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಎಲ್ಲೆಡೆ ಆವರಿಸಿದೆ.

ಘಟನೆ ನಡೆದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ.

ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವುದಕ್ಕೆ ಇದುವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಮಾರು 20 ಮೃತದೇಹಗಳು ಪತ್ತೆಯಾಗಿವೆ ಎಂದು ರಾಜ್‌ಕೋಟ್ ಪೊಲೀಸ್ ಆಯುಕ್ತ ರಾಜು ಭಾರ್ಗವ ಖಚಿತಪಡಿಸಿದ್ದಾರೆ.

Advertisement

ವಿಪರೀತ ಗಾಳಿ ಬೀಸುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಟ್ಟಡದಲ್ಲಿ ಇನ್ನು ಅನೇಕರು ಸಿಲುಕಿಕೊಂಡಿರುವ ಸಾಧ್ಯತೆಯಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಈ ಗೇಮಿಂಗ್ ಜೋನ್‌ ಯುವರಾಜ್ ಸಿಂಗ್ ಸೋಲಂಕಿ ಎನ್ನುವವರ ಒಡೆತನದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.