ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ (ನವೆಂಬರ್ 26) ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್.ಪಾಟೀಲ್ ಉಪಸ್ಥಿತರಿದ್ದರು.
ಇದನ್ನೂ ಓದಿ:ವಿಡಿಯೋ: ತಲೆಯ ಮೇಲೆ ಬೈಕ್ ಹೊತ್ತುಕೊಂಡು ಸಾಗಿದ ವ್ಯಕ್ತಿ; ಇವರೇ ರಿಯಲ್ ಬಾಹುಬಲಿ ಎಂದ ನೆಟ್ಟಿಗರು
ಆಡಳಿತಾರೂಢ ಬಿಜೆಪಿ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಯುವ ಜನರಿಗೆ 20 ಲಕ್ಷ ಉದ್ಯೋಗ, ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತ ವಿದ್ಯುತ್, ಸಮಾಜ ವಿರೋಧಿ ನಿಗ್ರಹ ದಳವನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ.
“ನಾವು ಗುಜರಾತ್ ನಲ್ಲಿ ಸಮಾಜ ವಿರೋಧಿ ಶಕ್ತಿಗಳನ್ನು ಗುರುತಿಸುವ, ಸಂಭಾವ್ಯ ಬೆದರಿಕೆ, ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್, ಭಾರತ ವಿರೋಧಿ ಶಕ್ತಿಗಳನ್ನು ನಿಗ್ರಹಿಸಲು ಸಮಾಜ ವಿರೋಧಿ ನಿಗ್ರಹ ದಳವನ್ನು ರಚಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಗುಜರಾತ್ ನಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಬದ್ಧರಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ನಡ್ಡಾ ಹೇಳಿದರು. ಗಲಾಟೆ, ಹೋರಾಟದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ, ಪಾಸ್ತಿ ನಷ್ಟ ಉಂಟು ಮಾಡಿದರೆ ಗಲಭೆಕೋರರಿಂದಲೇ ದಂಡ ವಸೂಲಿ ಮಾಡುವ ಕಾನೂನು ಜಾರಿಗೊಳಿಸುವುದಾಗಿ ನಡ್ಡಾ ತಿಳಿಸಿದ್ದಾರೆ.
ಗುಜರಾತ್ ನ ಆರ್ಥಿಕತೆ ಒಂದು ಟ್ರಿಲಿಯನ್ ಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ವಿದೇಶಿ ಬಂಡವಾಳದ ನೇರ ಹೂಡಿಕೆಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.