ಕಲ್ಲಿಕೋಟೆ: ಕೇರಳದಲ್ಲಿ ನಿಫಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಚಿಕಿತ್ಸೆಗೆ ಅಗತ್ಯವಾದ ಪ್ರತಿಕಾಯಗಳ ಆಮದನ್ನು ಹೆಚ್ಚಿಸಲು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ(ಐಸಿಎಂಆರ್) ನಿರ್ಧರಿಸಿದೆ.
ಸದ್ಯ 10 ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಮೊನೋಕ್ಲೋನಲ್ ಪ್ರತಿಕಾಯ ಲಭ್ಯವಿದ್ದು, ಮತ್ತೆ 20 ಡೋಸ್ ಪ್ರತಿಕಾಯಗಳನ್ನು ಆಸ್ಟ್ರೇಲಿಯಾದಿಂದ ಆಮದು ಮಾಡಲಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ. ಸೋಂಕಿನ ಆರಂಭಿಕ ಹಂತದಲ್ಲಿ ಈ ಔಷಧವನ್ನು ನೀಡಲಾಗುತ್ತದೆ.
ಈ ಮಧ್ಯೆ, ಕೇರಳದಲ್ಲಿ ನಿಫಾ ಸೋಂಕು ಮೊದಲು ಹಬ್ಬಲು ಕಾರಣವಾದ ವ್ಯಕ್ತಿ ಯನ್ನು ಪತ್ತೆ ಹಚ್ಚಲಾಗಿದ್ದು, ಆತನಿಗೆ ಯಾವ ಮೂಲದಿಂದ ಮತ್ತು ಯಾವ ಪ್ರದೇಶದಲ್ಲಿ ಸೋಂಕು ತಗಲಿತು ಎಂಬುದನ್ನು ಕಂಡುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕೇರಳ ಸರಕಾರ ತಿಳಿಸಿದೆ. ಇದಕ್ಕಾಗಿ ಆತನ ಮೊಬೈಲ್ ಟವರ್ ಲೊಕೇಶನ್‌ನ ವಿವರಗಳನ್ನೂ ಪಡೆಯ ಲಾಗುತ್ತಿದೆ ಎಂದೂ ಮಾಹಿತಿ ನೀಡಿದೆ.
ಅನಿರ್ದಿಷ್ಟಾವಧಿಗೆ ರಜೆ: ಸೋಂಕು ಹಿನ್ನೆಲೆಯಲ್ಲಿ ಕೋಯಿಕ್ಕೋಡ್‌ನ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಲಾಗಿದೆ. ನರ್ಸರಿ ಶಾಲೆಗಳು ಮತ್ತು ಮದ್ರಸಾಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜತೆಗೆ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸ ಲಾಗಿದೆ. ಇದೇ ವೇಳೆ, ಬೇಪೂರ್ ಫಿಶಿಂಗ್ ಹಾರ್ಬರ್ ಮತ್ತು ಫಿಶ್ ಲ್ಯಾಂಡಿಂಗ್ ಸೆಂಟರ್ ಅನ್ನೂ ಮುಚ್ಚಲು ಆದೇ ಶಿಸಲಾಗಿದೆ.