ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳಿಗೆ ಆರ್ಥಿಕ ಹೊಡೆತ ಬಿದ್ದಿದೆ. ಆದರೆ, ಹಾಪ್‌ಕಾಮ್ಸ್ ನ ಚಿತ್ರಣ ಇದಕ್ಕೆ ತದ್ವಿರು ದ್ಧವಾಗಿದ್ದು, ವ್ಯಾಪಾರ ವಹಿವಾಟು ದ್ವಿಗುಣಗೊಂಡಿದೆ. ಕೆಲವೇ ದಿನಗಳಲ್ಲಿ ಸುಮಾರು 20 ಕೋಟಿ ರೂ.ವಹಿವಾಟು ನಡೆಸಿದೆ. ಈ ಹಿಂದೆ ಹಾಪ್‌ಕಾಮ್ಸ್ ಪ್ರತಿ ತಿಂಗಳು ಸುಮಾರು 8 ಕೋಟಿ ರೂ.ಗಳಷ್ಟು ವಹಿವಾಟು ನಡೆಸುತ್ತಿತ್ತು. ಆದರೆ ಕೊರೊನಾ ನಂತರದಲ್ಲಿ ತನ್ನ ವ್ಯಾಪಾರ ವೃದ್ಧಿಸಿಕೊಂಡಿದೆ. ಮನೆ ಬಾಗಿಲಿಗೇ ಹಣ್ಣು-ತರಕಾರಿ ಪೂರೈಕೆಯು ಫಲ ನೀಡಿದ್ದು, ನಿತ್ಯ ಬೆಂಗಳೂರು ನಗರ ಪ್ರದೇಶದ ಸುಮಾರು 60 ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು-ತರಕಾರಿಗಳನ್ನು ಮಾರಾಟ ಮಾಡುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಾಪ್‌ಕಾಮ್ಸ್ ಪ್ರತಿದಿನ 95ರಿಂದ 100 ಟನ್ ವರೆಗೆ ಮಾರಾಟ ಮಾಡುತ್ತಿದೆ.
ನಗರದಲ್ಲಿ ಸುಮಾರು 250 ಹಾಪ್‌ಕಾಮ್ಸ್ ಮಳಿಗೆಗಳಿವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಮಾರು 25 ಮಳಿಗೆಗಳನ್ನು ಬಂದ್ ಮಾಡಲಾಗಿದೆ. ಜತೆಗೆ ಗುಹಾಂತರ ರೆಸಾರ್ಟ್,
ಬೆಂಗಳೂರು ಕ್ಲಬ್, ಸೆಂಚ್ಯುರಿ ಕ್ಲಬ್ ಸೇರಿದಂತೆ ವಿವಿಧ ಸಂಸ್ಥೆಗಳು ನಿತ್ಯ 15ರಿಂದ 20 ಟನ್ ಖರೀದಿಸುತ್ತಿದ್ದವು. ಈಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದಾಗ್ಯೂ ಕೆಲವು ಬಡಾವಣೆಗಳು, ಅಪಾರ್ಟ್‌ಮೆಂಟ್‌ಗಳಿಗೆ ನೇರವಾಗಿ ಪೂರೈಸುವುದರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾವಿನ ಹಣ್ಣಿಗೆ ಹೆಚ್ಚು ಬೇಡಿಕೆ ಇದ್ದು, ನಿತ್ಯ 8 ಟನ್ ಮಾರಾಟ ಆಗುತ್ತಿದೆ. ಜತೆಗೆ ದ್ರಾಕ್ಷಿ, ಕಲ್ಲಂಗಡಿ, ಸೇಬು, ಮೊಸಂಬಿ, ಬಾಳೆಹಣ್ಣು ಸೇರಿದಂತೆ ಇತರ ಹಣ್ಣುಗಳು
ಕೂಡ ಬಿಕರಿಯಾಗುತ್ತಿವೆ.
ದೀರ್ಘಾವಧಿಯ ಲೌಕ್‌ಡೌನ್ ಹಿನ್ನೆಲೆಯಲ್ಲಿ ಹಾಪ್‌ಕಾಮ್ಸ್ ನ ವಹಿವಾಟು ಅಧಿಕವಾಗಿದೆ. ಸುಮಾರು 50ರಿಂದ 60 ಟನ್ ವಿವಿಧ ಪ್ರಕಾರದ ಹಣ್ಣು ನಿತ್ಯ ಮಾರಾಟವಾಗುತ್ತಿತ್ತು. ಈಗ ಸುಮಾರು 90ರಿಂದ 100 ಟನ್ ತಲುಪಿದೆ. ಸಹಜವಾಗಿ ವಹಿವಾಟು ದುಪ್ಪಟ್ಟಾಗಿದೆ.
●ಬಿ.ಎನ್. ಪ್ರಸಾದ್, ಹಾಪ್‌ಕಾಮ್ಸ್ , ವ್ಯವಸ್ಥಾಪಕ ನಿರ್ದೇಶಕ
●ದೇವೇಶ್ ಸೂರಗುಪ್ಪ