ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಪ್ರಕ್ರಿಯೆಯಲ್ಲಿರುವ ಪಿಎಸ್‌ಐ ನೇಮಕಾತಿಯಲ್ಲಿ ಒಂದು ಅವಧಿಗೆ ಸೀಮಿತವಾಗಿ ಎರಡು ವರ್ಷ ವಯಸ್ಸು ವಿನಾಯಿತಿ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಈಗಾಗಲೇ ಪಿಎಸ್‌ಐ ಮಕಾತಿ ಪ್ರಕ್ರಿಯೆಯಲ್ಲಿದ್ದ, ಹಲವು ಕಾರಣಗಳಿಂದ ಅರ್ಹರೂ ವಂಚಿತರಾಗುತ್ತಿ ದ್ದಾರೆಂಬ ಹಿನ್ನೆಲೆಯಲ್ಲಿ ಮಾನವೀಯತೆ ಆಧಾರದ ಮೇಲೆ 2 ವರ್ಷಗಳ ವಯೋಮಿತಿ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಸಾಮಾನ್ಯವರ್ಗಕ್ಕೆ 28 ವರ್ಷದಿಂದ 30 ವರ್ಷ, ಮೀಸಲಾತಿ ವರ್ಗಕ್ಕೆ 30 ವರ್ಷದಿಂದ 32 ವರ್ಷಕ್ಕೆ ವಯೋ ಮಿತಿ ನಿಗದಿಪಡಿಸಲಾಗಿದೆ. ಹೀಗಾಗಿ, ಸಾಮಾನ್ಯ ವರ್ಗದ 30 ವರ್ಷದವರು, ಮೀಸಲಾತಿ ವರ್ಗದ 32 ವರ್ಷದವರು ಇದೀಗ ಪಿಎಸ್‌ಐ ನೇಮಕಾತಿಯ ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಅರ್ಹತೆಪಡೆಯಲಿದ್ದಾರೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಇದಕ್ಕಾಗಿ ಕರ್ನಾಟಕ ಪೊಲೀಸ್ ಸಿಬ್ಬಂದಿ (ನೇಮಕಾತಿ) ತಿದ್ದುಪಡಿ ನಿಯಮಗಳಿಗೆ ಸಂಪುಟ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಅದೇ ರೀತಿ ಶಿಕ್ಷಣ ಇಲಾಖೆ ನೇಮಕಾತಿ ನಿಯಮ 2014ಕ್ಕೆ ಹೆಚ್ಚುವರಿ ವಿಷಯ ಸೇರ್ಪಡೆ ಹಾಗೂ ಅವಧಿ ವಿಸ್ತರಣೆ ಕುರಿತ ತಿದ್ದುಪಡಿ ಕಾಯ್ದೆ ಹಾಗೂ ಕರ್ನಾಟಕ ವಿವಿ ಹಾಗೂ ಇತರೆ ಕಾನೂನು ತಿದ್ದುಪಡಿ ಕಾಯ್ದೆಗೆ ಸಂಪುಟ ಅನುಮತಿ ನೀಡಿದೆ.
ಭಿಕ್ಷುಕರ ನಿರ್ಮೂಲನೆ ಕಾಯ್ದೆಯಲ್ಲಿ ಕುಷ್ಠರೋಗದ ಬದಲು ಸಾಂಕ್ರಾಮಿಕ ರೋಗ ಎಂದು, ಮಾನಸಿಕ ಅಸ್ವಸ್ಥ ಬದಲು ಮಾನಸಿಕ ರೋಗ ಎಂದು ಬಳಸಲು ಕಾನೂನು ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ನಿರಶನಗೊಳಿಸಲು ತೀರ್ಮಾನಿಸಲಾಗಿದ್ದ 100 ಕಾಯ್ದೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.
ಜಮೀನು ಹಂಚಿಕೆ: ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರ ಸ್ಮರಣಾರ್ಥ ಅವರ ಕುಟುಂಬ ಸದಸ್ಯರು ಸ್ಥಾಪಿಸಲು ಉದ್ದೇಶಿಸಿರುವ ಶಿಕ್ಷಣ ಸಂಸ್ಥೆಗೆ ಚಿಕ್ಕಬಳ್ಳಾಪುರದ ನಂದಿ ಹೋಬಳಿ ಮೋತೂರು ಗ್ರಾಮದ ಸರ್ವೇ ಸಂಖ್ಯೆ 18ರಲ್ಲಿ ಸರ್ಕಾರಿ ಬಿ ಖರಾಬ್ 2.20 ಎಕರೆ ಜಮೀನು ಹಂಚಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯಪಾಲರ ಸಚಿವಾಲಯ ನೌಕರರ ವಸತಿ ಸಂಘಕ್ಕೆ ಯಲಹಂಕದ ಇಟಗಲಪುರದಲ್ಲಿ 4 ಎಕರೆ ಜಮೀನು ಮಾರ್ಗಸೂಚಿ ದರದ ಶೇ.50 ಕ್ಕೆ ಇಳಿಸಿ ಹಂಚಿಕೆ ಮಾಡಲು ಸಂಪುಟ ಅನುಮೋದನೆ ನೀಡಿದೆ.