ಮಾಲ್ಡಾ: ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ವಿವಸ್ತ್ರಗೊಳಿಸಿ ಸಾರ್ವಜನಿಕ ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದು ದೇಶವನ್ನೇ ತಲ್ಲಣಗೊಳಿಸಿದೆ. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಇಂತಹುದೇ ಕೃತ್ಯ ನಡೆದಿದೆ.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಇಬ್ಬರು ಮಹಿಳೆಯರನ್ನು ಥಳಿಸಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ಘಟನೆ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದೆ. ಮಾಲ್ಡಾದ ಪಕುವಾಹತ್‌ನಲ್ಲಿ ಸ್ಥಳೀಯರು ಕಳ್ಳತನದ ಶಂಕೆಯ ಮೇಲೆ ಇಬ್ಬರು ಮಹಿಳೆಯರನ್ನು ಹಿಡಿದು ಥಳಿಸಿದ್ದಾರೆ. ಆರೋಪಿತ ಇಬ್ಬರು ಮಹಿಳೆಯರ ಮೇಲೆ ಹಲವಾರು ಮಹಿಳೆಯರು ಹಲ್ಲೆ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಆದರೆ, ಘಟನೆ ಕುರಿತು ಪಶ್ಚಿಮ ಬಂಗಾಳ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ.
ಈ ವಿಡಿಯೋ ತಮ್ಮ ಗಮನಕ್ಕೆ ಬಂದ ನಂತರವೇ ಘಟನೆಯ ಬಗ್ಗೆ ಅರಿವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದಾಗ ಇಬ್ಬರು ಮಹಿಳೆಯರು ಕಳ್ಳತನ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ನಂತರ ಸ್ಥಳೀಯ ಮಹಿಳಾ ಅಂಗಡಿಯವರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಇವರನ್ನು ಹಿಡಿದ ಮಹಿಳೆಯರೂ ಪರಾರಿಯಾಗಿದ್ದು, ಥಳಿಸಿದವರು ಭಯದಿಂದ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ.
ಇದೀಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.