ಬೆಂಗಳೂರು: ದೇಶದಲ್ಲಿ 2 ಸಾವಿರ ರೂ. ನೋಟು ರದ್ದು ಮಾಡಿರುವ ಬೆನ್ನಲ್ಲೇ ಚಿನ್ನ ಖರೀದಿ, ಮಾರುಕಟ್ಟೆಗಳಲ್ಲಿ ದಿನಸಿ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಪೆಟ್ರೋಲ್, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ 2 ಸಾವಿರ ರೂ.ನೋಟುಗಳದ್ದೇ ಕಾರುಬಾರು! ಆದರೆ, ಬ್ಯಾಂಕ್‌ಗಳಲ್ಲಿ ವಿನಿಮಯದ ಮೊದಲ ದಿನವಾದ ಮಂಗಳವಾರ ಬೆರಳೆಣಿಕೆಯಷ್ಟು ಮಂದಿಯಷ್ಟೇ ನೋಟು ಬದಲಾವಣೆಗೆ ಮುಂದಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
2 ಸಾವಿರ ಪಿಂಕ್ ನೋಟು ರದ್ದು ಮಾಡಿ ಬದಲಾವಣೆಗೆ ಮೇ 23 ರಿಂದ ಸೆಪ್ಟೆಂಬರ್ ಅಂತ್ಯದವರೆಗೂ ಕಾಲಾವಕಾಶ ನೀಡಲಾಗಿದೆ. ಕರ್ನಾ ಟಕದಲ್ಲಿ ಜನ ಸಾಮಾನ್ಯರು ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಬೆಂಗಳೂರು ಸೇರಿ ರಾಜ್ಯದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮಂಗಳವಾರ ಬೆಳಗ್ಗಿನಿಂದ ಸಂಜೆವರೆಗೂ ಕೆಲವೇ ಮಂದಿಯಷ್ಟೇ ನೋಟು ಬದಲಾಯಿ ಸಿಕೊಳ್ಳಲು ಭೇಟಿ ನೀಡಿರು ವುದು “ಉದಯವಾಣಿ’ ನಡೆಸಿರುವ ರಿಯಾಲಿಟಿ ಚೆಕ್‌ನಲ್ಲಿ ತಿಳಿದು ಬಂದಿದೆ. ಹೀಗಾಗಿ ಸರದಿ ಸಾಲುಗಳಲ್ಲಿ ನಿಲ್ಲುವ ಪ್ರಮೇಯವೇ ಉದ್ಭವವಾಗಿಲ್ಲ.
ಚಿನ್ನ ಖರೀದಿಗೆ 2 ಸಾವಿರ ನೋಟು ಬಳಕೆ: ರಾಜ್ಯ ರಾಜಧಾನಿಯಲ್ಲಿರುವ ಪ್ರತಿಷ್ಠಿತ ಚಿನ್ನದ ಮಳಿಗೆಗಳಲ್ಲಿ ಚಿನ್ನ ಖರೀದಿ ಭರಾಟೆ ಜೋರಾಗಿದೆ. ಇಲ್ಲೂ 2 ಸಾವಿರ ರೂ. ಪಿಂಕ್ ನೋಟುಗಳದ್ದೇ ಹವಾ. ಲಕ್ಷಾಂತರ ರೂ. ಮೌಲ್ಯದ ಚಿನ್ನ ಖರೀದಿಸಲು ಮುಗಿಬಿದ್ದಿರುವ ಕೆಲ ಗ್ರಾಹಕರು 2 ಸಾವಿರ ರೂ. ಮೌಲ್ಯದ ಕಂತೆಕಂತೆ ನೋಟು ಕೊಡುತ್ತಿದ್ದಾರೆ. ಇತ್ತ ಚಿನ್ನದಂಗಡಿ ಮಾಲೀಕರು ಚಿನ್ನ ಖರೀದಿ ಬಿಲ್ ಕೊಟ್ಟು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಮುಂದಾಗಿದ್ದಾರೆ.
ಇನ್ನು ಬ್ಯಾಂಕ್‌ಗೆ ತೆರಳಿ ನೋಟು ಬದಲಾವಣೆಗೆ ಉತ್ಸಾಹ ತೋರದ ಸಾಮಾನ್ಯ ಜನ ಸ್ವಿಗ್ಗಿ, ಪೆಟ್ರೋಲ್ ಬಂಕ್‌ಗಳು, ಮಾರುಕಟ್ಟೆ ಗಳಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ 2 ಸಾವಿರ ರೂ. ನೋಟು ಬಳಸಿ ಬದಲಾಯಿಸಿಕೊಳ್ಳುವ ಹೊಸ ತಂತ್ರ ಕಂಡುಕೊಂಡಿದ್ದಾರೆ. ರೆಫ್ರೀಜರೇಟರ್, ವಾಷಿಂಗ್ ಮೆಷಿನ್, ಟಿವಿ ಸೇರಿ ಇನ್ನಿತರ ಗೃಹಉಪಯೋಗಿ ವಸ್ತುಗಳು, ಅಕ್ಕಿ, ಬೇಳೆ, ಗೋಧಿ ಸೇರಿ ದಿನನಿತ್ಯ ಬಳಕೆಗೆ ಉಪಯೋಗಿಸುವ ವಸ್ತುಗಳ ಖರೀದಿಗೂ 2 ಸಾವಿರ ನೋಟು ನೀಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಇನ್ನು ಪೆಟ್ರೋಲ್ ಬಂಕ್‌ಗಳಲ್ಲಿ 1 ಲೀ. ಪೆಟ್ರೋಲ್ ಹಾಕಿಸಿಕೊಳ್ಳುವ ಗ್ರಾಹಕರಿಗೂ 2 ಸಾವಿರ ರೂ.ಗೆ ಚೇಂಜ್ ಕೊಡುವುದೇ ಬಂಕ್ ಸಿಬ್ಬಂದಿಗೆ ತಲೆನೋವಾಗಿದೆ.
25 ಲಕ್ಷಕ್ಕಿಂತ ಅಧಿಕ ಹಣ ಹೊಂದಿದವರು ವಿರಳ: ಕಳೆದ ಕೆಲ ತಿಂಗಳುಗಳಿಂದ 2 ಸಾವಿರ ರೂ. ಮೌಲ್ಯದ ನೋಟುಗಳು ಎಟಿಎಂನಲ್ಲಿ ಸಿಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಸಾಮಾನ್ಯ ಜನರ ಕೈಯಲ್ಲಿ 2 ಸಾವಿರ ರೂ. ನೋಟು ಸಂಗ್ರಹದ ಪ್ರಮಾಣವೂ ಕಡಿಮೆಯಿದೆ. ಆದರೆ, ರಾಜ್ಯದಲ್ಲಿರುವ ಸುಮಾರು ಶೇ.3ರಷ್ಟು ಶ್ರೀಮಂತ ಕುಟುಂಬಗಳು, ವ್ಯಾಪಾರಿಗಳು ಮಾತ್ರ 25 ಲಕ್ಷಕ್ಕೂ ಹೆಚ್ಚಿನ ಮೌಲ್ಯದ 2 ಸಾವಿರ ರೂ. ನೋಟನ್ನು ಸಂಗ್ರಹಿಸಿಕೊಂಡಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಈ ಶ್ರೀಮಂತರು ತಮ್ಮ ನೌಕರರು, ಪರಿಚಿತರ ಮೂಲಕ ಕೇವಲ 2 ತಿಂಗಳಿನಲ್ಲಿ ಈ ದುಡ್ಡನ್ನು ಬದಲಾಯಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಕಪ್ಪು ಹಣ ಹೊಂದಿರುವ ಕುಬೇರರೂ ವಿವಿಧ ವಾಮ ಮಾರ್ಗಗಳ ಮೂಲಕ ನೋಟು ಬದಲಾಯಿಸಿಕೊಳ್ಳುತ್ತಿದ್ದಾರೆ.
ನಿವೃತ್ತ ನೌಕರರಿಂದ ಬ್ಯಾಂಕ್‌ಗೆ ಪತ್ರ: ಬ್ಯಾಂಕ್‌ಗಳಲ್ಲಿ 2 ಸಾವಿರ ರೂ. ನೋಟುಗಳ ಬದಲಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ನೂಕು ನುಗ್ಗಲು ಉಂಟಾದರೆ ನಿವೃತ್ತ ಬ್ಯಾಂಕ್ ನೌಕರರು ಉಚಿತವಾಗಿ ಸೇವೆ ಮಾಡುವುದಾಗಿ ಈಗಾಗಲೇ ಬ್ಯಾಂಕ್ ಆಫ್ ಬರೋಡಾದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಬ್ಯಾಂಕ್‌ನಲ್ಲಿ ಗ್ರಾಹಕರ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ಈವರೆಗೆ ಅಗತ್ಯ ಬಿದ್ದಿಲ್ಲ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮುಖ್ಯಸ್ಥ ವಿಶ್ವನಾಥ್ ನಾಯಕ್ ಉದಯವಾಣಿಗೆ ತಿಳಿಸಿದ್ದಾರೆ.
ಬ್ಯಾಂಕ್‌ಗೆ 2 ಸಾವಿರ ರೂ. ನೋಟು ಬದಲಾಯಿಸಿಕೊಳ್ಳಲು ಬರುವ ಗ್ರಾಹಕರ ಸಂಖ್ಯೆ ತೀರ ಕಡಿಮೆ. ಕೆಲ ಗ್ರಾಹಕರು ತಮ್ಮ ಖಾತೆಯಲ್ಲಿ ಲಕ್ಷಾಂತರ ರೂ. ಠೇವಣಿ ಇಡಲು 2 ಸಾವಿರ ರೂ. ನೋಟು ಬಳಸುತ್ತಿದ್ದಾರೆ.
-ರವಿ ರಂಜನ್, ಚೀಫ್ ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡಾ, ಮಲ್ಲೇಶ್ವರ
-ಅವಿನಾಶ್ ಮೂಡಂಬಿಕಾನ