Advertisement

Udupi 2 ಸಾವಿರ ರೂ. ದಾಟಿದ ಮಲ್ಲಿಗೆ ದರ! ಕೇವಲ ಎರಡು ವಾರದಲ್ಲಿ 1800 ರೂ. ಏರಿಕೆ

11:36 PM Aug 07, 2024 | Team Udayavani |

ಉಡುಪಿ: ಶಂಕರಪುರ ಮಲ್ಲಿಗೆ ದರ ದಿಢೀರ್‌ ಗಗನಕ್ಕೇರಿದೆ. 2 ವಾರಗಳ ಹಿಂದೆ, ಅಂದರೆ ಜುಲೈ 22ರಂದು 1 ಅಟ್ಟೆಗೆ (4 ಚೆಂಡು) 280 ರೂ. ಇದ್ದ ದರ ಆ.7ರಂದು 2,100ಕ್ಕೆ ತಲುಪಿದೆ.

Advertisement

ಜುಲೈ ಪೂರ್ತಿ ಹೆಚ್ಚಿನ ಮಲ್ಲಿಗೆ ಬೆಳೆಗಾರರ ಕೃಷಿ ಹಾನಿಯಾಗಿದೆ. ಮಳೆಗಾಲದಲ್ಲಿ ಬಿಸಿಲು ಕಡಿಮೆಯಾಗಿ ನೀರು ಹೆಚ್ಚಾಗಿರುವ ಪರಿಣಾಮ ವಿವಿಧ ಕೀಟ, ರೋಗಾಣುಗಳ ಪ್ರಭಾವದಿಂದ ಗಿಡಗಳ ಬೇರುಗಳು ಕೊಳೆತು ಎಲೆ ಉದುರುವುದು, ಗಿಡದ ಗಂಟಿಗಳು ಸಾಯುವುದರ ಜತೆಗೆ ಪೂರ್ತಿ ಗಿಡವೇ ನಾಶವಾಗುವಂತಹ ಘಟನೆಗಳೂ ಜಿಲ್ಲೆಯಲ್ಲಿ ನಡೆದಿವೆ. ನಾವು ದಿನಕ್ಕೆ 100 ಚೆಂಡುಗಳಷ್ಟು ಮಲ್ಲಿಗೆ ಮಾರಾಟ ಮಾಡಿಕೊಂಡಿದ್ದೆವು. ಆದರೆ ಈಗ ಒಂದು ಚೆಂಡು ಮಲ್ಲಿಗೆ ಹೊಂದಿಸಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಬಂಟಕಲ್ಲು ರಾಮಕೃಷ್ಣ ಶರ್ಮ.

ಮಾರುಕಟ್ಟೆಯಲ್ಲೂ
ಮಲ್ಲಿಗೆ ಅಭಾವ
ದುಬಾರಿ ದರ ಕೊಟ್ಟರೂ ಮಾರುಕಟ್ಟೆಯಲ್ಲಿ ಮಲ್ಲಿಗೆ ಸಿಗದ ಪರಿಸ್ಥಿತಿ ಇದೆ. ಭಟ್ಕಳ ಮಲ್ಲಿಗೆ ಹಾಗೂ ಶಂಕರಪುರ ಮಲ್ಲಿಗೆಯ ದರವೂ ಒಂದೇ ರೀತಿ ಇದೆ. ಎರಡೂ ಭಾಗದಿಂದ ಬರುವ ಮಲ್ಲಿಗೆ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ಮಲ್ಲಿಗೆ ವ್ಯಾಪಾರಿ ವಿಷ್ಣು.

ಬಿಸಿಲು ಬರಬೇಕಷ್ಟೇ
ಸರಿಯಾಗಿ ಬಿಸಿಲು ಇಲ್ಲದೆ ಮಲ್ಲಿಗೆ ಕೃಷಿ ಸೊರಗಿದೆ. ಕನಿಷ್ಠ ಒಂದು ವಾರವಾದರೂ ಬಿಸಿಲು ಬಂದರೆ ಮಲ್ಲಿಗೆ ಕೀಳಲು ಸಾಧ್ಯವಾಗುತ್ತದೆ. ಕೆಲವು ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಈ ಕೃಷಿಯೇ ನಾಶವಾಗಿದೆ ಎನ್ನುತ್ತಾರೆ ಶಂಕರಪುರದ ಮಲ್ಲಿಗೆ ಬೆಳಗಾರ ವಿನ್ಸೆಂಟ್‌ ರೋಡ್ರಿಗಸ್‌.

ಸಾಲು ಸಾಲು ಹಬ್ಬ
ಆ.9ರಂದು ನಾಗರಪಂಚಮಿ, ಆ.16 ರಂದು ಸಂಕ್ರಮಣ, ಆ.25ರ ಬಳಿಕ ಶ್ರೀಕೃಷ್ಣ ಜನ್ಮಾಷ್ಟಮಿ ನಡೆ ಯುವ ಕಾರಣ ಹೂವುಗಳಿಗೆ ಬಹಳಷ್ಟು ಬೇಡಿಕೆ ಕಂಡುಬರಲಿದೆ. ನಾಗರ ಪಂಚಮಿಯಂದು ಮಲ್ಲಿಗೆ ಹೂವಿಗೆ ಅಷ್ಟೊಂದು ಬೇಡಿಕೆ ಇರುವುದಿಲ್ಲ. ಆದರೆ ಸಂಕ್ರಮಣ ಈ ಬಾರಿ ಶುಕ್ರವಾರ ಬರುವ ಕಾರಣ ಬೇಡಿಕೆ ಹೆಚ್ಚುವ ಸಾಧ್ಯತೆಗಳಿವೆ.

Advertisement

ಮಲ್ಲಿಗೆ ದರ ವಿವರ(ಅಟ್ಟೆಗೆ)
ಮಲ್ಲಿಗೆ ದರ ಜುಲೈ 22ರಂದು 280 ರೂ.ಗಳಾಗಿತ್ತು. ಜುಲೈ 23ರಂದು 430, ಜುಲೈ 24ರಂದು 300, ಜುಲೈ 25ರಂದು 470, ಜುಲೈ 26ರಂದು 570, ಜುಲೈ 27ರಂದು 1,050, ಜುಲೈ 28ರಂದು 950, ಜುಲೈ 29ರಂದು 730, ಜುಲೈ 30ರಂದು 470, ಜುಲೈ 31ರಂದು 1,150, ಆ.1ರಂದು 1,150, ಆ.2ರಂದು 1,150, ಆ.3ರಂದು 1,050, ಆ.4ರಂದು 1,500, ಆ.5ರಂದು 1,700, ಆ.6ರಂದು 1,500 ಹಾಗೂ ಆ.7ರಂದು 2,100.

Advertisement

Udayavani is now on Telegram. Click here to join our channel and stay updated with the latest news.

Next