ನವದೆಹಲಿ: ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಮ್ಲಾರ್ ಪ್ರದೇಶದಲ್ಲಿ ಶನಿವಾರ(ಜುಲೈ24) ಬೆಳಗ್ಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ನ ಮೊದಲ ಬಂಗಾರಕ್ಕೆ ಗುರಿಯಿಟ್ಟ ಚೀನಾದ ಶೂಟರ್
ಈ ಪ್ರದೇಶದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿರುವುದಾಗಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿರುವುದಾಗಿ ವರದಿ ಹೇಳಿದೆ. ಶೋಕ್ಬಾಬಾ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸಿತ್ತು.
ಶಂಕಿತ ಸ್ಥಳ ತಲುಪಿದ ಸಂದರ್ಭದಲ್ಲಿ ಅಡಗಿ ಕುಳತಿದ್ದ ಉಗ್ರರು ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದು, ಇನ್ನಷ್ಟೇ ಗುರುತು ಪತ್ತೆಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಎಷ್ಟು ಮಂದಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ಮುಂದುವರಿದಿದ್ದು, ಉಗ್ರರ ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ.