Advertisement

2 ತಿಂಗಳ ಚಿಕಿತ್ಸೆ ಬಳಿಕ ಗುಣಮುಖ ಗರುಡ ಸ್ವಚ್ಛಂದ ಬದುಕಿನತ್ತ…

11:37 AM Apr 12, 2018 | Harsha Rao |

ಉಡುಪಿ: ಕಳೆದೆರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಗರುಡ ಪಕ್ಷಿಯು ಚೇತರಿಸಿಕೊಂಡಿದ್ದು, ಸಲಹುತ್ತಿದ್ದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಗರುಡನನ್ನು ಎ. 10ರಂದು ಪ್ರಕೃತಿಗೆ ಹಾರಿ ಬಿಟ್ಟಿದ್ದಾರೆ.

Advertisement

ಅಸೌಖ್ಯದ ಕಾರಣ ಮತ್ತು ರೆಕ್ಕೆ ಮುರಿತದಿಂದ ಹಾರಲಾಗದ ಸ್ಥಿತಿಯಲ್ಲಿದ್ದ ಗರುಡ ಪಕ್ಷಿಯು ಅಂಬಲಪಾಡಿಯ ರಸ್ತೆ ಬದಿಯಲ್ಲಿ ಎರಡು ತಿಂಗಳ ಹಿಂದೆ ಪತ್ತೆಯಾಗಿತ್ತು. ವಿಶು ಶೆಟ್ಟಿಯವರು ಆ ಗರುಡನನ್ನು ರಕ್ಷಿಸಿದ್ದು, ತನ್ನ ವರ್ಕ್‌ಶಾಪಿನಲ್ಲಿ ಅದಕ್ಕೊಂದು ಪಂಜರ ತಯಾರಿಸಿ ಚಿಕಿತ್ಸೆಗೆ ಸಜ್ಜುಗೊಳಿಸಿದ್ದರು. ಪಶು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ, ಸೂಚನೆಯಂತೆ ಚಿಕಿತ್ಸೆ ಮಾಡಲಾಗುತ್ತಿತ್ತು. ಗರುಡನಿಗೆ ಎರಡು ತಿಂಗಳ ಕಾಲ ವಿಶು ಶೆಟ್ಟಿ ಅವರು ಆಹಾನ ನೀಡಿ ಉಪಚರಿಸಿದ್ದರು.

ಆರೈಕೆಯಲ್ಲಿದ್ದ ಗರುಡನಲ್ಲಿಗೆ ಮೂರು ಬಾರಿ ಭೇಟಿ ನೀಡಿದ್ದ ಪಶುವೈದ್ಯ ಡಾ| ಸಂದೀಪ್‌ ಶೆಟ್ಟಿ ಅವರು ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಪ್ರಥಮ ಹಂತದಲ್ಲಿ ಒಂದು ವಾರ ಗರುಡ ಗಂಭೀರ ಸ್ಥಿತಿಯಲ್ಲಿದ್ದುದರಿಂದ ಆಹಾರ ಸೇವಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ವೈದ್ಯರ ಸಲಹೆ ಮೆರೆಗೆ ಸಿರಿಂಜ್‌ ಮೂಲಕ ಗ್ಲೂಕೋಸ್‌ ಮತ್ತು ಟಾನಿಕ್‌ ಅನ್ನು ಪ್ರತಿನಿತ್ಯ ನೀಡಲಾಯಿತು. 2 ತಿಂಗಳ ಅನಂತರ ಗರುಡ ಸಂಪೂರ್ಣ ಚೇತರಿಕೆಯಾಗಿ ಆರೋಗ್ಯವಂತವಾಗಿತ್ತು. ವೈದ್ಯರ ಸಲಹೆ ಮೇರೆಗೆ ಆರೈಕೆ ಮಾಡಿದ್ದ ವಿಶು ಅವರು ಗರುಡನು ಸ್ವತಂತ್ರವಾಗಿ ಜೀವಿಸಲು ಪರಿಸರಕ್ಕೆ ಬಿಟ್ಟಿದ್ದಾರೆ. ಬಿಟ್ಟ ಕೂಡಲೇ ಆ ಗರುಡ ಹಾರಿಕೊಂಡು ಕಾಡಿನತ್ತ ಧಾವಿಸಿತು.

ಮಠಕ್ಕೆ ಬಂದಿದ್ದ ಗರುಡ ಏನಾಯಿತು?
ಫೆಬ್ರವರಿಯಲ್ಲಿ ಪೇಜಾವರ ಮಠದ ಪರಿಸರದಲ್ಲಿ ಕಣ್ಣಿಗೆ ಪೆಟ್ಟಾಗಿ ಸಿಕ್ಕಿದ್ದ ಗರುಡನಿಗೆ ಕಣ್ಣಿನ ವೈದ್ಯರು
ಚಿಕಿತ್ಸೆ ನೀಡಿದ್ದು, ವ್ಯಾಪಕ ಪ್ರಚಾರ ವಾಗುತ್ತಲೇ ವನ್ಯಜೀವಿ ಅಧಿಕಾರಿಗಳು ಮಠಕ್ಕೆ ಆಗಮಿಸಿ ಅರಣ್ಯ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಗರುಡನನ್ನು ಮೈಸೂರಿನ ಮೃಗಾಲಯಕ್ಕೆ ಕರೆದೊಯ್ದಿದ್ದರು. ಗರುಡನ ಆರೋಗ್ಯದ ಸ್ಥಿತಿಗತಿ ಬಗ್ಗೆ ವನ್ಯಜೀವಿ ಅಧಿಕಾರಿಗಳಲ್ಲಿ ವಿಚಾರಿಸಲಾಗಿದ್ದು, ಗರುಡನ ಆರೋಗ್ಯ ಸುಧಾರಿಸಿದೆ. ಮೈಸೂರು ಮೃಗಾಲಯದಲ್ಲಿಯೇ ಇದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next