Advertisement

ಅರ್ಜಿ ವಿಲೇವಾರಿಗೆ 2 ತಿಂಗಳ ಗಡುವು

12:11 PM Jun 26, 2018 | |

ಬೆಂಗಳೂರು: ಯಾವುದೇ ಸರ್ಕಾರಿ ಯೋಜನೆಯಡಿ ಸಲ್ಲಿಕೆಯಾಗುವ ಫ‌ಲಾನುಭವಿಗಳ ಅರ್ಜಿಯನ್ನು ಗರಿಷ್ಠ 2 ತಿಂಗಳಲ್ಲಿ ಕಡ್ಡಾಯವಾಗಿ ವಿಲೇವಾರಿ ಮಾಡಲೇಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಬ್ಯಾಂಕುಗಳಿಗೆ ಗಡುವು ನೀಡಿದರು.

Advertisement

ನಗರ ಜಿಲ್ಲಾ ಪಂಚಾಯಿತಿ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, ಬ್ಯಾಂಕುಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಹಾಗೇ ಪ್ರಧಾನಮಂತ್ರಿ ಜನ್‌ಧನ್‌, ಮುದ್ರಾ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಯೋಜಕತ್ವದ ಫ‌ಲಾನುಭವಿ ಆಧಾರಿತ ಯೋಜನೆಗಳ ಅರ್ಜಿ ವಿಲೇವಾರಿ, ಸಹಾಯಧನ ಬಿಡುಗಡೆ, ಸಾಲ ಮಂಜೂರಾತಿಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪರಿಣಾಮ ಎದುರಿಸಬೇಕಾಗುತ್ತೆ: ಯಾವುದೇ ಅರ್ಜಿಯನ್ನು 60 ದಿನಗಳಿಗಿಂತ ಹೆಚ್ಚು ದಿನ ನಿಮ್ಮ ಬಳಿಯೇ ಉಳಿಸಿಕೊಂಡರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಸದಾನಂದಗೌಡ,  ವಿಧಾನಸಭೆ ಚುನಾವಣೆ ಮುಗಿದಿದೆ. ಈಗ ಯಾವ ಚುನಾವಣಾ ಕರ್ತವ್ಯವೂ ಇಲ್ಲ.

ಇನ್ನೊಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಬರುತ್ತದೆ. ನೆಪ ಹೇಳುವುದನ್ನು ಬಿಟ್ಟು ಅಷ್ಟರೊಳಗಾಗಿ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ, ಫ‌ಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಕೂಡ ಮಾಡಿದರು.

Advertisement

ಕೋಟ್ಯಂತರ ರೂ. ಸಾಲ ಮಾಡಿ ಬಾಕಿ ಉಳಿಸಿಕೊಂಡವರಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ, 50 ಸಾವಿರ, ಲಕ್ಷ ರೂ. ಸಾಲ ಪಡೆಯುವ ಬಡ-ಮಧ್ಯಮ ವರ್ಗದವರಿಗೆ, ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವ ಫ‌ಲಾನುಭವಿಗಳಿಗೆ ಮಾತ್ರ ಬ್ಯಾಂಕುಗಳಿಂದ ನಾನಾ ರೀತಿಯ ತೊಡಕುಗಳು ಎದುರಾಗುತ್ತವೆ. ಹಣವಂತರ ಸ್ನೇಹಿ ಆಗುವ ಬದಲು ಬ್ಯಾಂಕುಗಳು ಬಡವರ ಸ್ನೇಹಿ ಆಗಬೇಕು.

ಬಡವರ ಬಗ್ಗೆ ಅನುಕಂಪ ಬೆಳೆಸಿಕೊಳ್ಳಿ. ನಿಮಗೆ ಕೊಡುತ್ತಿರುವ ವೇತನದ ಮಟ್ಟಿಗಾದರೂ ಬಡವರ ಪರ ಕೆಲಸ ಮಾಡಿ ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. “ಹಾಗಂತ ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂ ಸಿ ಎಂದು ನಾನು ಹೇಳುತ್ತಿಲ್ಲ’ ಎಂದೂ ಸಚಿವರು ಎಚ್ಚರಿಸಿದರು.

ಸಭೆಯಲ್ಲಿ ವಿವಿಧ ಬ್ಯಾಂಕುಗಳ ವಾರ್ಷಿಕ ಕಾರ್ಯನಿರ್ವಹಣೆ, ನಬಾರ್ಡ್‌ ಬ್ಯಾಂಕ್‌ನ ಕಾರ್ಯವೈಖರಿ, ಜನ್‌ಧನ್‌, ಮುದ್ರಾ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು, ಸರ್ಕಾರಿ ಪ್ರಾಯೋಜಿತ ರಾಷ್ಟ್ರೀಯ ನಗರ ಮತ್ತು ಗ್ರಾಮೀಣ ಜೀವನೋಪಾಯ ಯೋಜನೆ, ದೀನ್‌ದಯಾಳ್‌ ಅಂತ್ಯೋದಯ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ,

ವಾಲ್ಮೀಕಿ ಎಸ್‌ಟಿ ಅಭಿವೃದ್ದಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳ ಕಳೆದ ಆರ್ಥಿಕ ವರ್ಷ ಹಾಗೂ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ ಆದ ಪ್ರಗತಿಯ ಅಂಕಿ-ಅಂಶಗಳ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸದಾನಂದಗೌಡ, ಬ್ಯಾಂಕುಗಳಿಗೆ ಹಣಕಾಸಿನ ಬದ್ಧತೆ ಇರಬಹುದು.

ಆದರೆ, ನಾವೇ “ಬಾಸ್‌’ಗಳು ಎಂದು ಭಾವಿಸಬೇಡಿ. ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡದಿದ್ದರೆ ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ. ಜನರಿಗೆ ನಾವು ಉತ್ತರಿಸಬೇಕಾಗುತ್ತದೆ. ಈ ವಿಚಾರ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ. ಮುನಿರಾಜು, ಸಿಇಒ ಎಂ.ಎಸ್‌. ಅರ್ಚನಾ ಸೇರಿದಂತೆ ಆರ್‌ಬಿಐ, ನಬಾರ್ಡ್‌, ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಬ್ಯಾಂಕ್‌ ವಹಿವಾಟು ಮಂದಗತಿ: ರೈತರ ಸಾಲ ಮನ್ನಾ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳದಿರುವ ಮತ್ತು ಒಂದಾವರ್ತಿ ಸಾಲ ಮರುಪಾವತಿ ಸಕಾಲಕ್ಕೆ ಪೂರ್ಣಗೊಳ್ಳದೇ ಇರುವುದರಿಂದ ಕಳೆದ ವರ್ಷ ಡಿಸೆಂಬರ್‌ನಿಂದ ನಗರ ಜಿಲ್ಲೆಯ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಬ್ಯಾಂಕು ವಹಿವಾಟು ಮಂದಗತಿಯಲ್ಲಿದೆ.

ಕೃಷಿ ಸಾಲ ಮರುಪಾವತಿಯಂತೂ ಸಂಪೂರ್ಣ ನಿಂತಿದೆ ಎಂದು ಜಿ.ಪಂ ಲೀಡ್‌ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕಿನ ವಲಯ ಪ್ರಬಂಧಕ ಕೆ.ಎನ್‌.ಮಂಜುನಾಥ್‌ ಹೇಳಿದರು. ಅದೇ ರೀತಿ ವಿಲೀನ ಪ್ರಕ್ರಿಯೆಯಿಂದಾಗಿ ನಗರ ಜಿಲ್ಲೆಯ ಗ್ರಾಮೀಣ ಮತ್ತು ಅರೇ ನಗರ ಪ್ರದೇಶದಲ್ಲಿ ವಿವಿಧ ಬ್ಯಾಂಕುಗಳ ಒಟ್ಟು 54 ಶಾಖೆಗಳು ಮುಚ್ಚಲ್ಪಟ್ಟಿವೆ ಎಂದು ಮಾಹಿತಿ ನೀಡಿದರು.

ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕುಗಳ ನಗದು ಠೇವಣಿ ಪ್ರಮಾಣ ಹೆಚ್ಚಾಗಿದೆ. ಆದರೆ, ಸಾಲ ಪ್ರಮಾಣ ವಿತರಣೆ ಪ್ರಮಾಣ ಕಡಿಮೆ ಆಗಿದೆ. ನಗದು ಠೇವಣಿ ಸರಾಸರಿ ಏರುಗತಿಯಲ್ಲಿದ್ದರೂ ಕೆಲವೊಂದು ಬ್ಯಾಂಕುಗಳ ಕಾರ್ಯನಿರ್ವಹಣೆ ಕಳಪೆಯಾಗಿದೆ. ಶೈಕ್ಷಣಿಕ ಸಾಲ ನೀಡಿಕೆ ಪ್ರಮಾಣ ಸಹ ಸಮಧಾನಕರವಾಗಿಲ್ಲ. ರೈತರ ಸಾಲ ಮನ್ನಾ ಬಗ್ಗೆ ಸ್ಪಷ್ಟ ನಿರ್ಧಾರವಾಗದ ಹಿನ್ನೆಲೆಯಲ್ಲಿ ಸಾಲ ಮರು ಪಾವತಿಯೂ ಆಗುತ್ತಿಲ್ಲ,

ಹೊಸ ಸಾಲ ಸಹ ಮಂಜೂರಾಗುತ್ತಿಲ್ಲ. “ಕ್ಷಿಪ್ರ ಸುಧಾರಣಾ ಕ್ರಮ’ (ಪಿಸಿಎ) ಇದರಿಂದಾಗಿಯೂ ಸಾಲದ ಹೊರ ಹರಿವು ಇಳಿಕೆಯಾಗಿದೆ ಎಂದು ಇದೇ ವೇಳೆ ಕೆಲವು ಬ್ಯಾಂಕಿನ ಆಧಿಕಾರಿಗಳು ಮಾಹಿತಿ ನೀಡಿದರು. ಲೀಡ್‌ ಬ್ಯಾಂಕ್‌ ಹಾಗೂ ಆರ್‌ಬಿಐ ಬ್ಯಾಂಕಿನ ಅಧಿಕಾರಿಗಳ ಜೊತೆಗೆ ಚರ್ಚಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.

“ಹಲೋ’ ಅಧಿಕಾರಿಗೆ ಡಿವಿಎಸ್‌ ತರಾಟೆ: ಸಭೆಯಲ್ಲಿ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿದ್ದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಬೆಯಲ್ಲಿ ನಡೆಯಿತು. ಸಭೆಯಲ್ಲಿ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯುವಾಗ, ಅಧಿಕಾರಿಯೊಬ್ಬರು ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿದ್ದರು.

ಇದನ್ನು ಗಮನಿಸಿದ ಸದಾನಂದಗೌಡ, “ರೀ ಆಫಿಸರ್‌ ಫೋನ್‌ ಬಿಡ್ತಿರೋ ಇಲ್ವೋ ಎಂದು ಎರಡು ಬಾರಿ ಹೇಳಿದರು. ಅಧಿಕಾರಿ ಮಾತು ಮುಂದುವರಿಸಿದಾಗ ಕೋಪಗೊಂಡ ಕೇಂದ್ರ ಸಚಿವರು, ಏನ್ರಿ ನೀವು ಮೀಟಿಂಗ್‌ಗೆ ಬಂದಿರೋದಾ ಅಥವಾ ಮೊಬೈಲ್‌ನಲ್ಲಿ ಮಾತನಾಡಲಿಕ್ಕೆ ಬಂದಿದ್ದಾ, ಮೀಟಿಂಗ್‌ಗೆ ಬಂದಾಗ ಫೋನ್‌ನಲ್ಲಿ ಏನ್‌ ಕೆಲ್ಸ.

ಅಷ್ಟೊಂದು ಅರ್ಜೆಂಟ್‌ ಇದ್ದರೆ ಹೊರಗೆ ಹೋಗಿ ಮಾತನಾಡಿ ಎಂದು ಗದರಿದರು. ತಡಬಡಾಯಿಸಿದ ಅಧಿಕಾರಿ ಕ್ಷಮೆ ಕೇಳಿದರು. ಸಭೆ ಬಳಿಕ ಸಚಿವರ ಬಳಿ ಬಂದ ಅಧಿಕಾರಿ, ಪುನಃ ಕ್ಷಮೆ ಕೇಳಿದರು. ಸಭೆಯಲ್ಲಿರುವಾಗ ಇಂತಹ ನಡವಳಿಕೆ ಸರಿಯಲ್ಲ, ಸುಧಾರಿಸಿಕೊಳ್ಳಿ ಎಂದು ಹೇಳುತ್ತಲೇ ಸದಾನಂದಗೌಡ ಹೊರ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next