Advertisement

ಕ್ಯಾಂಟೀನ್‌ನಿಂದ 2 ಸಹಸ್ರ ಕೆಲಸ

11:19 AM Aug 20, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಿರುವುದರಿಂದ ಒಂದೆಡೆ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ತಿಂಡಿ-ಊಟ ದೊರೆತರೆ, ಮತ್ತೂಂದೆಡೆ ಯೋಜನೆಯಡಿ ಎರಡು ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿವೆ.

Advertisement

ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಹಾಗೂ 27 ವಿಧಾನಸಭೆ ಕ್ಷೇತ್ರಗಳಲ್ಲಿ ಅಡುಗೆ ಮನೆಗಳು ಸಿದ್ಧವಾದರೆ ಸುಮಾರು 2 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಸಿಬ್ಬಂದಿ ನೇಮಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗಿದ್ದು, ಅದನ್ನು ಸದುಪಯೋಗ ಮಾಡಿಕೊಂಡರೆ ಹೆಚ್ಚಿನ ಹುದ್ದೆಗಳು ಕನ್ನಡಿಗರಿಗೆ ದೊರೆಯಲಿವೆ.

ನಗರದಲ್ಲಿ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಯಾಗಿದೆ. ಅದರಂತೆ ಪ್ರತಿ ಕ್ಯಾಂಟೀನ್‌ನಲ್ಲಿ 7 ಸಿಬ್ಬಂದಿ ಹಾಗೂ ಪ್ರತಿ ಅಡುಗೆ ಮನೆಯಲ್ಲಿ 20 ಮಂದಿ ಕೆಲಸ ಮಾಡಲಿದ್ದಾರೆ. ಇದರೊಂದಿಗೆ ಅಡುಗೆ ಮನೆಯಿಂದ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡುವ ವಾಹನಗಳ ಚಾಲಕರು ಸೇರಿ 2 ಸಾವಿರಕ್ಕೂ ಹೆಚ್ಚು ಹುದ್ದೆಗಳು ಸೃಷ್ಟಿಯಾಗಲಿವೆ.

ಇಂದಿರಾ ಕ್ಯಾಂಟೀನ್‌ಗಳು ಹಾಗೂ ಅಡುಗೆ ಮನೆಗಳಲ್ಲಿ ಸಿಬ್ಬಂದಿಯನ್ನು ಆಹಾರ ಪೂರೈಕೆ ಗುತ್ತಿಗೆ ಸಂಸ್ಥೆಗಳೇ ನೇಮಿಸಿಕೊಳ್ಳಲಿದ್ದಾರೆ. ಕುಂದಾಪುರ ಮೂಲದ ಶೆಫ್ಟಾಕ್‌ ಹಾಗೂ ಪಂಜಾಬ್‌ ಮೂಲದ ರಿವಾರ್ಡ್ಸ್‌ ಸಂಸ್ಥೆಯವರು ಆಹಾರ ಪೂರೈಕೆ ಗುತ್ತಿಗೆ ಪಡೆದಿದ್ದಾರೆ. ಒಟ್ಟಾರೆ ಯೋಜನೆಯ ಪೈಕಿ ಶೆಫ್ಟಾಕ್‌ ಸಂಸ್ಥೆಗೆ 15 ವಿಧಾನಸಭೆ ಕ್ಷೇತ್ರಗಳು ದೊರೆಯಲಿದ್ದು, 101 ಕ್ಯಾಂಟೀನ್‌ಗಳಿಗೆ ಸಂಸ್ಥೆ ಆಹಾರ ಪೂರೈಕೆ ಮಾಡಲಿದೆ.

ಉಳಿದ 12 ವಿಧಾನಸಭೆ ಕ್ಷೇತ್ರಗಳಿಗೆ ಆಹಾರ ಪೂರೈಕೆ ಮಾಡುವ ಜವಾಬ್ದಾರಿಯನ್ನು ರಿವಾಡ್ಸ್‌ ಸಂಸ್ಥೆಗೆ ನೀಡಲಾಗಿದೆ. ಶೆಫ್ಟಾಕ್‌ ಸಂಸ್ಥೆ ಕುಂದಾಪುರ ಮೂಲದ ಸಂಸ್ಥೆಯಾಗಿರುವುದರಿಂದ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡಲು ಕನ್ನಡದವರನ್ನೇ ನೇಮಿಸಿಕೊಳ್ಳಲಾಗಿದೆ. ಉಳಿದಂತೆ ಪಂಜಾಬ್‌ ಮೂಲದ ರಿವಾರ್ಡ್ಸ್‌ ಸಂಸ್ಥೆಯವರು ಬೇರೆ ರಾಜ್ಯದ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. 

Advertisement

ಸಿಬ್ಬಂದಿ ಮೇಲೆ ಹಲ್ಲೆ ಯತ್ನ
ನಗರದ ಕೆಲ ಕ್ಯಾಂಟೀನ್‌ಗಳಲ್ಲಿ ತಿಂಡಿ ಹಾಗೂ ಊಟದ ಕೊರತೆ ಮತ್ತು ಕುಡಿಯಲು ನೀರು ನೀಡಿಲ್ಲ ಎಂದು ಆರೋಪಿಸಿ ಕೆಲ ವಾರ್ಡ್‌ಗಳಲ್ಲಿ  ಸಾರ್ವಜನಿಕರು ಕ್ಯಾಂಟೀನ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಘಟನೆಗಳು ನಡೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಅಧಿಕಾರಿಗಳು, ಅನಗತ್ಯವಾಗಿ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಕ್ಯಾಂಟೀನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕ್ಯಾಂಟೀನ್‌ ಬಳಿಯ ಎಲ್ಲ ಘಟನೆಗಳು ಸೆರೆಯಾಗಲಿವೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲ ಕ್ಯಾಂಟೀನ್‌, ಅಡುಗೆ ಮನೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಇದರೊಂದಿಗೆ ಕೆಲ ಹೋಟೆಲ್‌ನವರು ಹಾಗೂ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
-ಜಿ.ಪದ್ಮಾವತಿ, ಮೇಯರ್‌

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next