Advertisement

ಎಪಿಎಂಸಿಯಲ್ಲಿದ್ದ 2 ಲಕ್ಷ್ಯ ಅಡಕೆ ಮೂಟೆ ಮಾಯ?

04:32 PM Aug 10, 2018 | |

ಶಿವಮೊಗ್ಗ: ಎಪಿಎಂಸಿಯಲ್ಲಿ 4.15 ಲಕ್ಷ ಮೂಟೆ ಅಡಕೆ ದಾಸ್ತಾನಿದೆ ಎಂದು ಹೇಳುತ್ತಿದ್ದ ಎಪಿಎಂಸಿ ಈಗ ಖುದ್ದು ಪರಿಶೀಲನೆ ಮಾಡಿ 2.22 ಲಕ್ಷ ಮೂಟೆಗಳು ಸಿಕ್ಕಿವೆ. ಹಾಗಾದರೆ 2 ಲಕ್ಷ ಮೂಟೆ ಎಲ್ಲಿದ್ದವು. ಜಿಎಸ್‌ಟಿ ಉಳಿಸಲು ಕದ್ದು ಮಾರಾಟ ಮಾಡಲಾಗಿದೆಯೇ ಎಂಬ ಅನುಮಾನ ಮೂಡಿಸಿದೆ.

Advertisement

ರಾಜ್ಯದಲ್ಲೇ ಪಕ್ಕಾ ಲೆಕ್ಕ ಇರುವ ಶಿವಮೊಗ್ಗ ಎಪಿಎಂಸಿಯಲ್ಲಿ ಸುಳ್ಳು ಲೆಕ್ಕ ಕೊಟ್ಟವರು ಯಾರು? 4 ಲಕ್ಷ ಮೂಟೆ ಒಳಗೆ ಬಂದ ಮೇಲೆ 2 ಲಕ್ಷ ಮೂಟೆ ಎಲ್ಲಿಗೆ ಹೋದವು, ಒಂದು ವರ್ಷದಿಂದ ಎ- ಬಿಲ್‌, ಬಿ- ಬಿಲ್‌, ಸಿ- ಬಿಲ್‌ ಕೊಟ್ಟರೂ ಲೆಕ್ಕ ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಹುಟ್ಟು ಹಾಕಿವೆ.
 
 ರಾಶಿ ಅಡಕೆ ಧಾರಣೆ ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿ ವರ್ತಕರು ಹೆಚ್ಚು ದಾಸ್ತಾನು ತೋರಿಸುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎಪಿಎಂಸಿ ಅಧಿಕಾರಿಗಳು ಪ್ರತಿ ಮಳಿಗೆಗೆ ಭೇಟಿ ನೀಡಿ ಭೌತಿಕವಾಗಿ ದಾಸ್ತಾನು ಪರಿಶೀಲಿಸಿದ್ದರು. ಪ್ರಸ್ತುತ ಎಪಿಎಂಸಿಯಲ್ಲಿ 90ಕ್ಕೂ ಹೆಚ್ಚು ಚಾಲ್ತಿಯಲ್ಲಿರುವ ಮಂಡಿಗಳಿವೆ. 

ಲೆಕ್ಕ ತಪ್ಪಾಗಲ್ಲ ಅಂದಿದ್ರು: ಎಪಿಎಂಸಿ ಒಳಗೆ ದಾಸ್ತಾನು ತರುವಾಗಲೆ ಎಷ್ಟು ಕ್ವಿಂಟಾಲ್‌, ಯಾವ ಪದಾರ್ಥ, ಯಾವ ಮಂಡಿ ಎಂದು “ಎ’ ಬಿಲ್‌ ಕೊಡಲಾಗುತ್ತದೆ. ಯಾವ ದಲ್ಲಾಳಿ ಬಳಿ ಕೊಟ್ಟಿದ್ದಾರೆ ಎಂಬುದಕ್ಕೂ ರಶೀದಿ ಇರುತ್ತದೆ. ದಲ್ಲಾಳಿಗಳು ಮಾರಾಟ ಮಾಡುವಾಗ ಇಂತವರ ಸ್ಟಾಕ್‌, ಇಷ್ಟು ಚೀಲ, ಇಷ್ಟು ರೇಟಿದೆ ಕೊಡಬಹುದಾ ಎಂದು ಕೇಳಿದ
ಮೇಲೆ ವ್ಯಾಪಾರ ನಡೆಯುತ್ತದೆ. ವ್ಯಾಪಾರವಾದ ಮೇಲೆ ರೈತನಿಗೆ “ಬಿ’ ಬಿಲ್‌ ಕೊಡಲಾಗುತ್ತದೆ. ಹಣ ಕೊಡಬೇಕಾದರೆ ಆರ್‌ಟಿಜಿಎಸ್‌, ಚೆಕ್‌ ಮೂಲಕವೇ ನಡೆಯುತ್ತದೆ. ಪ್ರತಿಯೊಂದಲ್ಲೂ ಲೆಕ್ಕ ಇರುತ್ತದೆ ಎನ್ನುವ ಅಧಿಕಾರಿಗಳು, ಲೆಕ್ಕ ತಪ್ಪಿದ್ದೆಲ್ಲಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಲೆಕ್ಕ ಇಲ್ಲ ಪಕ್ಕಾ: ಕಳೆದ ವರ್ಷ 3 ಲಕ್ಷ 60 ಸಾವಿರ ಮೂಟೆ ದಾಸ್ತಾನು ಇತ್ತು. ಈ ವರ್ಷ 4.17 ಲಕ್ಷ ಮೂಟೆ ಇದೆ ಎಂದು ಹೇಳಲಾಗುತಿತ್ತು. ಆದರೆ ಲೆಕ್ಕ ಹಾಕಿದ ಮೇಲೆ ಪ್ರತಿ ವರ್ಷ ಸರಿಯಾಗಿ ಲೆಕ್ಕ ಮಾಡಿಲ್ಲ ಎಂಬ ಅನುಮಾನ ಮೂಡಿದೆ.

27 ಕೋಟಿ 7 ಜನ: ಎಪಿಎಂಸಿಯಲ್ಲಿ ಒಟ್ಟು 38 ಜನ ಸಿಬ್ಬಂದಿ ಇರಬೇಕಿತ್ತು. ಆದರೆ ಇರೋದೆ 7 ಜನ. ಒಬ್ಬರೇ ಐದಾರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎಪಿಎಂಸಿ ಕಾರ್ಯದರ್ಶಿ ಅವರಿಗೂ ಕೂಡ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು ವಾರದಲ್ಲಿ ಕೆಲವು ದಿನ ಬ್ಯಾಡಗಿ ಎಪಿಎಂಸಿಗೂ ಹೋಗಿ ಬರುತ್ತಾರೆ. 

Advertisement

ವಾರ್ಷಿಕ 30 ಕೋಟಿ ವರಮಾನ ನಮ್ಮಿಂದ ಬರುತ್ತದೆ. ಶೇ.1.5ರಷ್ಟು ಸೆಸ್‌ ಹಾಕುತ್ತಾರೆ. ಇರೋದೆ ಮೂರು ಜನ ಇಷ್ಟೊಂದು ಆದಾಯ ಯಾವುದಕ್ಕೆ ಬೇಕು. ಸರಿಯಾಗಿ ಲೆಕ್ಕಪತ್ರಗಳ ದಾಖಲೆ ಇಟ್ಟುಕೊಂಡಿಲ್ಲ. ನೋಡಿ ನಮಗೆ ಮಾಹಿತಿ ಕೇಳಿರುವ ಅರ್ಜಿಯಲ್ಲಿ ನಮ್ಮ ಮಂಡಿ ಹೆಸರಿಲ್ಲ. ನನ್ನ ಹೆಸರಿಲ್ಲ. ರೆಡಿ ಇರುವ ನಮೂನೆಯಲ್ಲಿ ದಿನಾಂಕ ಬದಲಾಯಿಸಿ ಕಳುಹಿಸಿದ್ದಾರೆ. ಸರಕಾರ ಸೆಸ್‌ ದರವನ್ನು ಶೇ.0.5ಕ್ಕೆ ಇಳಿಸಬೇಕು. 
 ಡಿ.ಎಂ.ಶಂಕರಪ್ಪ, ಅಧ್ಯಕ್ಷ, ಚೇಂಬರ್‌ ಆಫ್‌ ಕಾರ್ಮಸ್

2 ಲಕ್ಷ ಮೂಟೆ ವ್ಯತ್ಯಾಸ ಬಂದಿರುವುದು ಸಾಮಾನ್ಯ ವಿಷಯವಲ್ಲ. ರೈತ ಸಮುದಾಯವನ್ನು ಬಯಲಲ್ಲಿ ಇಡುವ
ವ್ಯವಸ್ಥೆ. ದರ ಕುಸಿತಕ್ಕೆ ಇದೂ ಒಂದು ಕಾರಣ. ಲೆಕ್ಕಪತ್ರಗಳು ಬರವಣಿಗೆ ಮೂಲಕ ಇರುವುದರಿಂದ ಸರಿಯಾಗಿ ಮೇಂಟೇನ್‌ ಆಗಿಲ್ಲ. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 
 ಜ್ಯೋತಿಪ್ರಕಾಶ್‌, ಎಪಿಎಂಸಿ ಅಧ್ಯಕ್ಷ 

ಸಿಬ್ಬಂದಿ ಕಡಿಮೆ ಇರುವುದರಿಂದ ಒಬ್ಬರೇ ಎರಡೂಮೂರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬಿಲ್‌ಗ‌ಳು ಸರಿಯಾಗಿ ಎಂಟ್ರಿ ಆಗಿಲ್ಲ. ಡಿಮ್ಯಾಂಡ್‌ ಜಾಸ್ತಿ ಆದಾಗ ತಾನಾಗೇ ರೇಟು ಜಾಸ್ತಿ ಆಗುತ್ತೆ. ರೇಟಿಗೂ ದಾಸ್ತಾನಿಗೂ ಸಂಬಂಧವಿಲ್ಲ
 ಶ್ರೀನಿವಾಸ್‌, ಎಪಿಎಂಸಿ ಕಾರ್ಯದರ್ಶಿ 

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next