ಕಾಸರಗೋಡು: ಕೇರಳ ರಾಜ್ಯದಲ್ಲಿ ವಿವಿಧ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡ ತೊಡಗಿದ್ದು, ಇದರ ಪರಿಣಾಮವಾಗಿ ಕಳೆದ ಎರಡು ವಾರದಲ್ಲಿ ಎರಡು ಲಕ್ಷದಷ್ಟು ಮಂದಿಗೆ ವಿವಿಧ ಸಾಂಕ್ರಾಮಿಕ ರೋಗ ಹರಡಿದೆ.
ಈ ಪೈಕಿ 10 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಐದು ತಿಂಗಳಲ್ಲಿ ಸಾಂಕ್ರಾಮಿಕ ರೋಗದಿಂದ 91 ಮಂದಿ ಸಾವಿಗೀಡಾಗಿದ್ದಾರೆ. ಇದಲ್ಲದೆ ಅಮೀಬಿಕ್ ಮೆಂಜಾಯನ್‌ಸೆಫಾಲೈಟೀಸ್ ಎನ್ನುವ ಮಿದುಳಿಗೆ ತಗಲುವ ಅತ್ಯಪೂರ್ವ ರೋಗವೂ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೆ ವೆಸ್ಟ್‌ನೈಲ್ ಜ್ವರವೂ ಹರಡುತ್ತಿದೆ.
ತಾಪಮಾನ ಏರಿಕೆಯ ಜೊತೆಗೆ ಪದೇ ಪದೆ ಸುರಿಯುತ್ತಿರುವ ಬೇಸಗೆ ಮಳೆ ಮತ್ತು ತ್ಯಾಜ್ಯ ಸಮಸ್ಯೆಗಳೇ ಸಾಂಕ್ರಾಮಿಕ ರೋಗ ವ್ಯಾಪಿಸಲು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮಲಪ್ಪುರ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ.
ಡೆಂಗ್ಯೂ, ಹಳದಿ ಕಾಮಾಲೆ, ಇಲಿ ಜ್ವರ, ಎಚ್1ಎನ್1, ಸಿಡುಬು ರೋಗ, ಮಲೇರಿಯ, ಮಂಗನ ಕಾಯಿಲೆ, ಜಲ ಸಂಬಂಧಿತ ರೋಗಗಳು ಇತ್ಯಾದಿ ರಾಜ್ಯದಲ್ಲಿ ಹರಡುತ್ತಿದೆ. ಹೆಚ್ಚುತ್ತಿರುವ ಜನಸಾಂದ್ರತೆ, ಜೀವನ ಶೈಲಿ, ಹವಾಮಾನ ವೈಪರೀತ್ಯ, ಭೌಗೋಳಿಕ ಭಿನ್ನತೆ ಇತ್ಯಾದಿಗಳೇ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ವಾರದಲ್ಲಿ ಒಟ್ಟು 78,718 ಮಂದಿಯಲ್ಲಿ ವಿವಿಧ ರೀತಿಯ ಸಾಂಕ್ರಾಮಿಕ ರೋಗ, 971 ಮಂದಿಯಲ್ಲಿ ಸಿಡುಬು, 328 ಮಂದಿಯಲ್ಲಿ ಡೆಂಗ್ಯೂ, 20 ಮಂದಿಯಲ್ಲಿ ಮಲೇರಿಯ, 70 ಮಂದಿಯಲ್ಲಿ ಇಲಿ ಜ್ವರ, 37 ಮಂದಿಗೆ ಎಚ್1ಎನ್1, 4 ಮಂದಿಗೆ ಶಿಗೆಲ್ಲಾ ಮತ್ತು 9 ಮಂದಿಗೆ ವೆಸ್ಟ್‌ನೈಲ್ ರೋಗ ಕಾಣಿಸಿಕೊಂಡಿದೆ. ಕಳೆದ 9 ತಿಂಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ 3 ಮಂದಿ, ಮಲೇರಿಯಾಕ್ಕೆ 3, ಡೆಂಗ್ಯೂ 16, ಇಲಿ ಜ್ವರಕ್ಕೆ 39, ಹೈಪರಿಟೀಸ್-3 ಗೆ 10 ಮಂದಿ, ಸಿಡುಬು ರೋಗಕ್ಕೆ 4 ಮಂದಿ ಬಲಿಯಾಗಿದ್ದಾರೆ.