ವಾಷಿಂಗ್ಟನ್: ನೈಸರ್ಗಿಕ ವಿಕೋಪದಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುವುದನ್ನು ಕೇಳಿರುತ್ತೀರಿ. ಆದರೆ ಈ ಎರಡು ಬಗೆಯ ಹಾವು ಮತ್ತು ಕಪ್ಪೆಯಿಂದಲೇ ವಿಶ್ವದ ಆರ್ಥಿಕತೆಗೆ ಬರೋಬ್ಬರಿ 1.26 ಲಕ್ಷ ಕೋಟಿ ರೂ. ಹೊಡೆತ ಬಿದ್ದಿದೆಯಂತೆ!
ಹೌದು. ಅಮೆರಿಕನ್ ಬುಲ್‌ಫ್ರಾಗ್ ಪ್ರಭೇದದ ಕಪ್ಪೆ ಹಾಗೂ ಬ್ರೌನ್ ಟ್ರೀ ಸ್ನೇಕ್ ಪ್ರಬೇಧದ ಹಾವಿನಿಂದಾಗಿ 1986ರಿಂದ 2020ರವರೆಗೆ ಒಟ್ಟು 1.26 ಲಕ್ಷ ಕೋಟಿ ರೂ. ನಷ್ಟವಾಗಿದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ.
ಜೆಕ್ ರಿಪಬ್ಲಿಕ್‌ನ ದಕ್ಷಿಣ ಬೊಹೆಮಿಯಾ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ಇಂಥದ್ದೊಂದು ಅಧ್ಯಯನ ಮಾಡಿದ್ದಾರೆ.
1ಕೆ.ಜಿ.ಗಿಂತ ಕಡಿಮೆ ತೂಕದ ಬುಲ್ ಫ್ರಾಗ್ ಯುರೋಪ್‌ನಾದ್ಯಂತ ಸಾಕಷ್ಟು ಹಾನಿಯುಂಟುಮಾಡಿದೆ.
ಎರಡನೇ ವಿಶ್ವಯುದ್ಧದ ಸಮಯದಲ್ಲಿ ಅಮೆರಿಕ ಪರಿಚಯಿಸಿದ ಬ್ರೌನ್ ಟ್ರೀ ಹಾವು ಫೆಸಿಪಿಕ್ ದ್ವೀಪಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ವಿದ್ಯುತ್ ಉಪಕರಣಗಳನ್ನು ಹಾಳು ಮಾಡುವುದರಿಂದ ಹಿಡಿದು ಅನೇಕ ರೀತಿಯ ಸಮಸ್ಯೆಗಳು ಇದರಿಂದ ಉಂಟಾಗಿದ್ದು, ಒಟ್ಟು 81 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಕೆಲವು ಆಕ್ರಮಣಕಾರಿ ಪ್ರಾಣಿ ಪ್ರಬೇಧವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅಧ್ಯಯನ ವರದಿ ಹೇಳಿದೆ.