ಕಳೆದ ಕೆಲವು ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ನಮ್ಮ ಭದ್ರತಾಪಡೆಗಳಿಗೆ ಸಿಗುತ್ತಿರುವ ಯಶಸ್ಸು ಶ್ಲಾಘನೀಯವಾದದ್ದು. ಆದರೆ ಇದರ ಹೊರತಾಗಿಯೂ ಇಂದಿಗೂ ಆತಂಕವಾದದ ಸವಾಲೇನೂ ಕಡಿಮೆಯಾಗಿಲ್ಲ. ಈಗ ಉಗ್ರರು ಜಮ್ಮು-ಕಾಶ್ಮೀರ ಪೊಲೀಸರ ಕುಟುಂಬದ ಸದಸ್ಯರನ್ನು ಅಪಹರಿಸಿದ್ದಾರೆ. ಇದು ಉಗ್ರರು ಎಷ್ಟು ಅಸಹನೆಗೊಂಡಿದ್ದಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಈ ಅಪಹರಣವು ಬುಧವಾರ ನಡೆದ ಉಗ್ರರ ಎನ್‌ಕೌಂಟರ್‌ಗೆ ಪ್ರತೀಕಾರವೆನ್ನಲಾಗುತ್ತಿದೆ.
ಬುಧವಾರ ನಮ್ಮ ಸೇನೆ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಪ್ರಮುಖ ಉಗ್ರ ಅಲ್ತಾಫ್ ಅಹಮದ್ ಡಾರ್ ಉಫ್ì ಅಲ್ತಾಫ್ ಕಾಚ್ರೂ ಸಹಿತ ಇಬ್ಬರು ಆತಂಕವಾದಿಗಳನ್ನು ಹೊಡೆದುರುಳಿಸಿತ್ತು. ಕಾಚ್ರೂ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಹಿಜ್ಬುಲ್ ಮುಜಾಹಿದ್ದೀನ್‌ನ ಬಹಳ ಹಳೆಯ ಆತಂಕವಾದಿಗಳಲ್ಲಿ ಒಬ್ಬ. ಭದ್ರತಾ ಪಡೆಗಳ ಮೇಲಷ್ಟೇ ಅಲ್ಲದೆ, ನಾಗರಿಕರ ಮೇಲೆ ಮತ್ತು ಪೊಲೀಸರ ಮೇಲೆ ದಾಳಿ ನಡೆಸುತಿದ್ದ ಕುಖ್ಯಾತಿ ಇವನಿಗಿತ್ತು. ಅದರಲ್ಲೂ ಮುಖ್ಯವಾಗಿ, ಹಿಜ್ಬುಲ್‌ನ ಉಗ್ರ ಬುರಹಾನ್ ವಾನಿ ಸಾವಿನ ನಂತರ ಕಾಶ್ಮೀರ ಕಣಿವೆಯಲ್ಲಿ ಹಿಂಸೆ ಭುಗಿಲೇಳುವಲ್ಲಿ ಕಾಚ್ರೂ ಮತ್ತು ಅವನ ಸಹಯೋಗಿ ಯಾಸೀನ್‌ನ ಪಾತ್ರವಿತ್ತು. ಹೀಗಾಗಿ ಕಾಚ್ರೂ ಭದ್ರತಾಪಡೆಗಳಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದ್ದ. ಅವನ ತಂಡ ಕಾಶ್ಮೀರದಾದ್ಯಂತ ಎಂಥ ಪ್ರಬಲ ನೆಟ್‌ವರ್ಕ್ ಸೃಷ್ಟಿಸಿಕೊಂಡಿತ್ತೆಂದರೆ, ಇದನ್ನು ಬಳಸಿಕೊಂಡು ಪ್ರತಿಬಾರಿಯೂ ಕೂದಲೆಳೆಯಂತರದಲ್ಲಿ ಪಾರಾಗಿಬಿಡುತ್ತಿತ್ತು.
ಆದರೆ ಈಗ ಕಾಶ್ಮೀರದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ನಮ್ಮ ಭದ್ರತಾ ಪಡೆಗಳ ನೆಟ್‌ವರ್ಕ್ ಈಗ ಹಿಂದೆಂದಿಗಿಂತಲೂ ಪ್ರಬಲವಾಗುತ್ತಿದೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಜೊತೆಗಿದ್ದರೆ ತಮಗೆ ಭವಿಷ್ಯವಿಲ್ಲ ಎನ್ನುವುದನ್ನು ಕಾಶ್ಮೀರದ ಯುವಕರು ಅರ್ಥಮಾಡಿಕೊಳ್ಳಲಾರಂಭಿಸಿದ್ದಾರೆ. ಅವರಿಗೀಗ ಉತ್ತಮ ನೌಕರಿಗಳು ಬೇಕಾಗಿವೆ, ಪೊಲೀಸ್ ಹಾಗೂ ಸೇನೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅವರೀಗ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ, ಕೆಲ ಸಮಯದಿಂದ ಭದ್ರತಾಪಡೆಗಳು, ಸ್ಥಳೀಯ ಜನರು ಮತ್ತು ಪೊಲೀಸರ ನಡುವೆ ಒಳ್ಳೆಯ ತಾಳಮೇಳ ಸೃಷ್ಟಿಯಾಗಿದೆ. ಉಗ್ರರ ಅಡಗುದಾಣಗಳ ಬಗ್ಗೆ ಈಗ ಸೇನೆಗೆ ನಿಖರ ಮಾಹಿತಿ ಸಿಗಲಾರಂಭಿಸಿದೆ. ಈ ಕಾರಣದಿಂದಲೇ ಹತಾಶೆಯಿಂದ ಉಗ್ರರು ಕಾಶ್ಮೀರದ ಪೊಲೀಸ್ ಪಡೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಭಾರತೀಯ ಸೇನೆ ಯಾವಾಗಿಂದ “ಆಪರೇಷನ್ ಆಲೌಟ್’ ಆರಂಭಿಸಿತೋ ಅಂದಿನಿಂದಲೇ ಕುಖ್ಯಾತ ಉಗ್ರರ ವಧೆಯಾಗುತ್ತಿದೆ. ಬಹಳಷ್ಟು ಉಗ್ರರ ಬಂಧನವಾಗುತ್ತಿದೆ. ಇದಷ್ಟೇ ಅಲ್ಲದೆ, ಉಗ್ರ ಸಂಘಟನೆಗಳ ಪ್ರಭಾವಕ್ಕೆ ಸಿಲುಕಿ ಹಾದಿತಪ್ಪಿರುವ ಯುವಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವೂ ವೇಗ ಪಡೆದಿದೆ.
ಈ ಉಗ್ರ ಜಾಲದ ಹಿಂದೆ ಪ್ರಮುಖ ಶಕ್ತಿಯಾಗಿ ಪಾಕಿಸ್ತಾನ ನಿಂತಿದೆ ಎನ್ನುವುದು ತಿಳಿಯದ ಸಂಗತಿಯೇನೂ ಅಲ್ಲ. ಭಾರತ ವಿರೋಧಿ ಕಾರ್ಯತಂತ್ರಗಳನ್ನು ಪ್ರಮುಖ ನೀತಿಯಾಗಿಸಿಕೊಂಡಿರುವ ಪಾಕಿಸ್ತಾನದ ಐಎಸ್‌ಐ ನಮ್ಮ ದೇಶವನ್ನು ಅಸ್ಥಿರಗೊಳಿಸಲು ಯಾವ ಹಾದಿಯನ್ನಾದರೂ ತುಳಿಯಲು ಸದಾ ಸಿದ್ಧವಿರುತ್ತದೆ. ಈ ಬಗ್ಗೆ ಭಾರತ ಪ್ರತಿಬಾರಿಯೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯೆತ್ತುತ್ತದಾದರೂ ಪಾಕಿಸ್ತಾನ ಎಂದಿನಂತೆ ನಿರಾಕರಿಸುತ್ತಲೇ ಬಂದಿದೆ. ಪಾಕಿಸ್ತಾನ ಲಷ್ಕರ್-ಎ-ತಯ್ಯಬಾ ಮತ್ತು ಜೈಷ್-ಎ-ಮೊಹಮ್ಮದ್‌ನಂಥ ಉಗ್ರಸಂಘಟನೆಗಳಿಗೆ ನೆಲೆ ಮತ್ತು ಬೆಂಬಲ ಒದಗಿಸುತ್ತಿದೆ ಎಂದು ಇತ್ತೀಚೆಗಿನ ಬ್ರಿಕ್ಸ್ ಸಮಾವೇಶದಲ್ಲೂ ಧ್ವನಿಯೆತ್ತಲಾಯಿತು. ಆದರೆ ಚೀನಾ ಮತ್ತು ರಷ್ಯಾ ಸ್ವಹಿತಕ್ಕಾಗಿ ಪಾಕಿಸ್ತಾನದ ವಿರುದ್ಧ ಮಾತನಾಡವು ಎನ್ನುವುದು ನಮಗೆ ಅರ್ಥವಾಗಿದೆ. ಇನ್ನು ಅತ್ತ ಅಮೆರಿಕ ಕೂಡ ಮೇಲ್ನೋಟಕ್ಕೆ ಭಾರತದ ಪರ ಮಾತನಾಡುತ್ತದಾದರೂ ಪಾಕಿಸ್ತಾನದೊಂದಿಗಿನ ಅದರ ಬಾಂಧವ್ಯವೆಂದಿಗೂ ಕೊನೆಯಾಗದು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿಯೇ ಭಾರತವೀಗ “ಉಗ್ರ ಸಮಸ್ಯೆ’ಯನ್ನು ಯಾರ ಸಹಕಾರದ ನಿರೀಕ್ಷೆಯೂ ಇಲ್ಲದೆ ನಿರ್ಮೂಲನೆ ಮಾಡಲು ನಿರ್ಧರಿಸಿದೆ. ಸರ್ಜಿಕಲ್ ಸ್ಟ್ರೈಕ್‌ನ ನಂತರದ ದಿನಗಳಿಂದ ಪಾಕ್, ಚೀನಾ ಮತ್ತು ಅವುಗಳ ಕೃಪಾಪೋಷಿತ ಉಗ್ರಸಂಘಟನೆಗಳಿಗೆ ಭಾರತ ಬಲವಾದ ಸಂದೇಶ ಕಳುಹಿಸುತ್ತಿರುವುದಂತೂ ಸುಳ್ಳಲ್ಲ. ಕಾಶ್ಮೀರದಲ್ಲಿ ಇನ್ಮುಂದೆಯೂ ಉಗ್ರರ ಸವಾಲು ಎದುರಾಗುತ್ತದೆ. ಸದ್ಯಕ್ಕೆ ಅಪಹರಣಕ್ಕೊಳಗಾದ ಪೊಲೀಸ್ ಕುಟುಂಬವನ್ನು ಸುರಕ್ಷಿತವಾಗಿ ವಾಪಸ್ ತರುವ ಮಹತ್ತರ ಜವಾಬ್ದಾರಿ ಸೇನೆಯ ಮೇಲಿದೆ.